More

    ಶುಲ್ಕ ಪರಾಮರ್ಶೆಗೆ ಸಮಿತಿ ರಚನೆ, ರಾಯಚೂರು ವಿಶ್ವವಿದ್ಯಾಲಯ ನಿರ್ಧಾರ

    ಶಿವಮೂರ್ತಿ ಹಿರೇಮಠ ರಾಯಚೂರು

    ಕಾಲೇಜು ಸಂಲಗ್ನತೆ ಶುಲ್ಕದ ಬಗ್ಗೆ ಆರಂಭದಲ್ಲೇ ಅಪಸ್ವರ ಕೇಳಿ ಬಂದಿದ್ದರಿಂದ ಅಭಿವೃದ್ಧಿ ಶುಲ್ಕದ ಪರಾಮರ್ಶೆಗೆ ಸಮಿತಿ ರಚಿಸಲು ರಾಯಚೂರು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮುಂದಾಗಿದೆ.

    ವಿವಿ ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ ಅಧ್ಯಕ್ಷತೆಯಲ್ಲಿ ಕಾಲೇಜು ಆಡಳಿತ ಮಂಡಳಿ ಮುಖ್ಯಸ್ಥರೊಂದಿಗೆ ಸಭೆ ನಡೆದಿದ್ದು, ಅಭಿವೃದ್ಧಿ ಶುಲ್ಕದ ಪರಾಮರ್ಶೆ ನಡೆಸಲು ವಿವಿ ಅಧಿಕಾರಿಗಳು ಹಾಗೂ ಖಾಸಗಿ ಆಡಳಿತ ಮಂಡಳಿ ಮುಖ್ಯಸ್ಥರನ್ನೊಳಗೊಂಡ ಸಮಿತಿ ರಚಿಸುವ ನಿರ್ಧಾರಕ್ಕೆ ಬರಲಾಗಿದೆ.

    ವಿವಿ ವ್ಯಾಪ್ತಿಗೆ ಬರುವ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಸುಮಾರು 224 ಕಾಲೇಜುಗಳು ಸಂಲಗ್ನತೆ ಪಡೆಯಬೇಕಾಗಿದೆ. ಈಗಾಗಲೇ ವಿವಿಯಿಂದ ಅಧಿಸೂಚನೆ ಹೊರಡಿಸಲಾಗಿದೆ. ವಿವಿ ಸಂಲಗ್ನತೆ ಶುಲ್ಕದ ಜತೆಗೆ ಅಭಿವೃದ್ಧಿ ಶುಲ್ಕ ವಿಧಿಸುತ್ತಿರುವುದಕ್ಕೆ ಖಾಸಗಿ ಕಾಲೇಜುಗಳಿಂದ ವಿರೋಧ ವ್ಯಕ್ತವಾಗಿದೆ. ಕೋವಿಡ್ ಕಾರಣದಿಂದಾಗಿ ಕಾಲೇಜುಗಳು ಸರಿಯಾಗಿ ನಡೆಯುತ್ತಿಲ್ಲ. ಆದ್ದರಿಂದ ಸಂಲಗ್ನತೆ ಶುಲ್ಕವನ್ನು ಶೇ.50 ಕಡಿಮೆ ಮಾಡಿ, ಅಭಿವೃದ್ಧಿ ಶುಲ್ಕವನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ.

    ಬಿಎ, ಬಿಎಸ್ಸಿ, ಬಿಕಾಂ ಸಂಲಗ್ನತೆ ಮುಂದುವರಿಸಲು 26,200 ರೂ., ಅಭಿವೃದ್ಧಿ ಶುಲ್ಕವಾಗಿ 10 ಸಾವಿರ ರೂ., ಕಾಯಂ ಸಂಲಗ್ನತೆಗಾಗಿ ಒಂದು ಲಕ್ಷ ರೂ., ಬಿಸಿಎ ಸಂಲಗ್ನತೆಗೆ 35 ಸಾವಿರ ರೂ., ಅಭಿವೃದ್ಧಿ ಶುಲ್ಕವಾಗಿ 15 ಸಾವಿರ ರೂ., ಕಾಯಂ ಸಂಲಗ್ನತೆಗಾಗಿ 1.20 ಲಕ್ಷ ರೂ.ಯನ್ನು ವಿವಿ ಆಡಳಿತ ನಿಗದಿ ಪಡಿಸಿದೆ. ಅದರಂತೆ ಬಿಬಿಎ, ಬಿಬಿಎಂ, ಬಿಎಸ್‌ಡಬ್ಲುೃ, ಬಿಇಡಿ, ಬಿಪಿಇಡಿ ಪ್ರತ್ಯೇಕ ಶುಲ್ಕ ನಿಗದಿ ಪಡಿಸಲಾಗಿದೆ. ಸ್ನಾತಕೋತ್ತರ ಕೋರ್ಸ್‌ಗಳಾದ ಎಂಎಗೆ ಸಂಲಗ್ನತೆ ಮುಂದುವರಿಸಲು 15,600 ರೂ., ಅಭಿವೃದ್ಧಿ ಶುಲ್ಕವಾಗಿ 20 ಸಾವಿರ ರೂ. ಕಾಯಂ ಸಂಲಗ್ನತೆಗೆ 3 ಲಕ್ಷ ರೂ., ಎಂಎಸ್ಸಿಗೆ ಸಂಲಗ್ನತೆ ಮುಂದುವರಿಸಲು 1.04 ಲಕ್ಷ ರೂ., ಅಭಿವೃದ್ಧಿ ಶುಲ್ಕವಾಗಿ 40 ಸಾವಿರ ರೂ., ಕಾಯಂ ಸಂಲಗ್ನತೆಗಾಗಿ 3 ಲಕ್ಷ ರೂ. ನಿಗದಿ ಪಡಿಸಲಾಗಿದೆ. ಅದರಂತೆ ಎಂಎಸ್‌ಡಬ್ಲುೃ, ಎಂಕಾಂ, ಎಂಇಡಿ, ಎಂಬಿಎ, ಎಂಸಿಎಗೆ ಪ್ರತ್ಯೇಕ ಶುಲ್ಕ ಪಟ್ಟಿ ನೀಡಲಾಗಿದೆ.

    ವಿರೋಧ
    ಕಾಲೇಜುಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಹೊಸ ಕೋರ್ಸ್‌ಗಳನ್ನು ಆರಂಭಿಸಲು 60 ಸಾವಿರ ರೂ. ನಿಂದ 1.50 ಲಕ್ಷ ರೂ.ವರೆಗೆ ಹಾಗೂ 4.50 ಲಕ್ಷ ರೂ.ದಿಂದ 6 ಲಕ್ಷ ರೂ.ವರೆಗೆ ಡಿಪಾಸಿಟ್ ಇಡುವಂತೆ ವಿವಿ ತಿಳಿಸಿದೆ. ಈ ಬಗ್ಗೆಯೂ ಕಾಲೇಜು ಆಡಳಿತ ಮಂಡಳಿಗಳು ವಿರೋಧ ವ್ಯಕ್ತಪಡಿಸಿವೆ.

    ವಿದ್ಯಾರ್ಥಿಗಳಿಗೆ ಹೊರೆ ಸಾಧ್ಯತೆ
    ಖಾಸಗಿ ಕಾಲೇಜು ಆಡಳಿತ ಮಂಡಳಿಗಳು ವಿವಿ ಅಭಿವೃದ್ಧಿ ಶುಲ್ಕ ಕಟ್ಟಿದಲ್ಲಿ ಅದನ್ನು ವಿದ್ಯಾರ್ಥಿಗಳ ಮೇಲೆ ಹಾಕುವುದರಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆ ಉಂಟಾಗುವ ಸಾಧ್ಯತೆಗಳಿವೆ. ಕೋವಿಡ್ ಹಿನ್ನೆಲೆಯಲ್ಲಿ ಕಾಲೇಜುಗಳು ಬಂದ್ ಆಗಿದ್ದು, ಸಮರ್ಪಕ ರೀತಿಯಲ್ಲಿ ಪ್ರವೇಶಾತಿ ನಡೆಯದಿರುವುದರಿಂದ ಕಾಲೇಜುಗಳು ಕೂಡ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿವೆ. ಜತೆಗೆ ವಿವಿ ಸಂಲಗ್ನತೆ ಪಡೆಯಲು ನಿಗದಿಪಡಿಸಿದ ಸೌಲಭ್ಯಗಳನ್ನು ಕಾಲೇಜುಗಳು ಹೊಂದಿರಬೇಕಾಗಿದ್ದು, ಈ ಕುರಿತು ಆನ್‌ಲೈನ್‌ನಲ್ಲಿ ಪರಿಶೀಲನೆ ನಡೆಸಿ ಶೇಕಡಾವಾರು ಅಂಕ ನೀಡುವ ಕೆಲಸ ವಿವಿಯಿಂದ ನಡೆಯಲಿದೆ.

    ವಿವಿ ಅಭಿವೃದ್ಧಿ ದೃಷ್ಟಿಯ ಹಿನ್ನೆಲೆಯಲ್ಲಿ ಕಾಲೇಜು ಸಂಲಗ್ನತೆ ಸಂದರ್ಭದಲ್ಲಿ ಅಭಿವೃದ್ಧಿ ಶುಲ್ಕ ನಿಗದಿ ಪಡಿಸಲಾಗಿದೆ. ಈ ಬಗ್ಗೆ ಆಕ್ಷೇಪಗಳು ಕೇಳಿ ಬಂದಿರುವ ಕಾರಣ ಅಭಿವೃದ್ಧಿ ಶುಲ್ಕದ ಪರಾಮರ್ಶೆಗೆ ವಿವಿ ಅಧಿಕಾರಿಗಳು ಹಾಗೂ ಕಾಲೇಜು ಆಡಳಿತ ಮಂಡಳಿ ಮುಖ್ಯಸ್ಥರು ಒಳಗೊಂಡ ಸಮಿತಿ ರಚಿಸಲಾಗುತ್ತಿದೆ. ಸಮಿತಿಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
    | ಪ್ರೊ.ಹರೀಶ್ ರಾಮಸ್ವಾಮಿ ರಾಯಚೂರು ವಿವಿ ಕುಲಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts