More

    ಫೆ. 15ರ ವರೆಗೆ ಉಚಿತ ಆರೋಗ್ಯ ಶಿಬಿರ

    ಬೀಳಗಿ: ಬಾಡಗಂಡಿಯ ಎಸ್.ಆರ್. ಪಾಟೀಲ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಜ. 3 ರಿಂದ 31 ರ ವರೆಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಜನರ ಬೇಡಿಕೆಯಂತೆ ಫೆ.15ರ ವರೆಗೆ ಮುಂದುವರಿಸಲಾಗುವುದೆಂದು ಮಾಜಿ ಸಚಿವ, ಸಂಸ್ಥೆ ಅಧ್ಯಕ್ಷ ಎಸ್.ಆರ್. ಪಾಟೀಲ ಹೇಳಿದರು.

    ಬಾಡಗಂಡಿಯ ಮೆಡಿಕಲ್ ಕಾಲೇಜಿನ ಸಭಾಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಮೊದಲು ನಿಗದಿಯಾಗಿದ್ದ ಶಿಬಿರ ಮುಕ್ತಾಯದ ಅವಧಿ ಸಮೀಪಿಸಿದಂತೆ ದಿನೇ ದಿನೆ ಶಿಬಿರಕ್ಕೆ ಆಗಮಿಸುವ ರೋಗಿಗಳ ಸಂಖ್ಯೆ ಅಧಿಕವಾಗಿದೆ. ದಿನಕ್ಕೆ 800 ರಿಂದ 900 ಜನರು ಇಲ್ಲಿಗೆ ಆಗಮಿಸಿ ಉಚಿತ ಆರೋಗ್ಯ ತಪಾಸಣೆ, ಶಸ್ತ್ರ ಚಿಕಿತ್ಸೆ ಹಾಗೂ ಔಷಧ ಪಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಜನರ ಬೇಡಿಕೆ ಹಾಗೂ ಎಲ್ಲರೂ ಶಿಬಿರದ ಲಾಭ ಪಡೆದುಕೊಳ್ಳಲೆಂಬ ಉದ್ದೇಶದಿಂದ ಫೆ.15 ರವರೆಗೆ ಈ ಶಿಬಿರ ಮುಂದುವರಿಸಲಾಗಿದೆ ಎಂದು ತಿಳಿಸಿದರು.

    ಆರ್ಥಿಕವಾಗಿ ಹಿಂದುಳಿದ ಹಾಗೂ ಸಮಾಜದ ಕಟ್ಟಕಡೆಯ ಜನರ ಆರೋಗ್ಯ ಸೇವೆ ಮಾಡುವುದು ನನ್ನ ಸೌಭಾಗ್ಯ. ಇದು ನನ್ನ ಹೆತ್ತ ತಂದೆ-ತಾಯಿ ಪುಣ್ಯದ ಫಲವಾಗಿ ಇಂದು ಈ ಆರೋಗ್ಯ ಭಾಗ್ಯ ಸಿಕ್ಕಿದೆ. ಇಲ್ಲಿ ಆಗಮಿಸುವ ರೋಗಿಗಳಿಗೆ ಯಾವುದೇ ಆರ್ಥಿಕ ಹೊರೆ ಇಲ್ಲದೆ ಸೇವೆ ನೀಡಲಾಗುತ್ತಿದೆ. ಇಲ್ಲಿನ ವೈದ್ಯರು 24*7 ನಿರಂತರ ಸೇವೆ ನೀಡುತ್ತಿದ್ದಾರೆ ಎಂದು ಹೇಳಿದರು.

    ಸಂಸ್ಥೆ ಕಾರ್ಯದರ್ಶಿ ಎಂ.ಎನ್. ಪಾಟೀಲ ಮಾತನಾಡಿ, ವಿಜಯಪುರ ಮತ್ತು ಬಾಗಲಕೋಟೆ ಮಧ್ಯೆದ ಗ್ರಾಮೀಣ ಭಾಗದಲ್ಲೇ ಇರುವ ಈ 650 ಹಾಸಿಗೆಯುಳ್ಳ ಆಸ್ಪತ್ರೆಯು ಈ ಭಾಗದ ಜನರ ಆರೋಗ್ಯದ ದೃಷ್ಟಿಯಿಂದ ಸಂಜಿವೀನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಮಾಜಿ ಸಚಿವ ಎಸ್. ಆರ್. ಪಾಟೀಲ ಅವರ ಒಂದು ಕನಸು ಈ ಭಾಗದ ಜನರು ಎಲ್ಲರೂ ಆರೋಗ್ಯವಾಗಿರಬೇಕು. ಕೈಗೆಟಕುವ ದರದಲ್ಲಿ ಸೇವೆ ನೀಡಬೇಕು ಎಂಬುದಾಗಿತ್ತು. ರೋಗಿಗಳಿಗೆ ಆರ್ಥಿಕ ಹೊರೆಯಾಗದಂತೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಿದ್ದಾರೆ. ಹೀಗಾಗಿ ಬಹಳಷ್ಟು ಜನತೆ ನಿತ್ಯ ಶಿಬಿರದ ಲಾಭ ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೆ, ಬೀಳಗಿ ಬಸ್ ನಿಲ್ದಾಣದಿಂದ ಬರುವ ರೋಗಿಗಳಿಗೆ ಆಸ್ಪತ್ರೆಯವರೆಗೆ ಉಚಿತ ವಾಹನ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಎಸ್.ಆರ್.ಪಾಟೀಲರು ಈ ಭಾಗದ ಭಗೀರಥ ಎಂದರೆ ತಪ್ಪಾಗಲಾರದು. ಈಗಾಗಲೇ ಸಾಕಷ್ಟು ವಿವಿಧ ಕಾಯಿಲೆಗಳಿಗೆ ಶಸ ಚಿಕಿತ್ಸೆ ಮಾಡಲಾಗಿದೆ ಎಂದು ತಿಳಿಸಿದರು.

    ಸಂಸ್ಥೆಯ ಕಾರ್ಯದರ್ಶಿ ಎಂ.ಎನ್. ಪಾಟೀಲ, ಡೀನ್ ಧರ್ಮರಾಯ ಇಂಗಳೆ, ಆಸ್ಪತ್ರೆ ಅಧೀಕ್ಷಕ ಡಾ. ವಿಜಯಾನಂದ ಹಳ್ಳಿ, ಆಯುರ್ವೇದಿಕ್ ಆಸ್ಪತ್ರೆ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ಎ.ಎ. ಬಾಳಿಕಾಯಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts