More

    ಡಿಎಆರ್ ಪೇದೆಗೆ ಅಡ್ಡದಾರಿಯಲ್ಲಿ ಎಫ್​ಡಿಎ ಹುದ್ದೆ? ಸರ್ಕಾರದ ಕ್ರಮಕ್ಕೆ ಪೊಲೀಸ್, ಸಬ್ ರಿಜಿಸ್ಟ್ರಾರ್ ಸಿಬ್ಬಂದಿ ಆಕ್ರೋಶ

    | ಗೋವಿಂದರಾಜು ಚಿನ್ನಕುರ್ಚಿ, ಬೆಂಗಳೂರು

    ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಮುಖ್ಯ ಪೇದೆಗೆ ಕೆಪಿಎಸ್​ಸಿ ಪರೀಕ್ಷೆ ಬರೆಯದಿದ್ದರೂ ನೇರವಾಗಿ ಪ್ರಥಮ ದರ್ಜೆ ಅಧಿಕಾರಿ ಹುದ್ದೆ ಕಲ್ಪಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಅಡ್ಡದಾರಿಯಲ್ಲಿ ನೇರವಾಗಿ ಎಫ್​ಡಿಎ ಹುದ್ದೆಗೆ ಬರುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದ್ದು, ಕರೊನಾ ಕರ್ಫ್ಯೂ ನಡುವೆಯೂ ಇಂತಹ ಅಪರೂಪದ ಆದೇಶ ಹೊರಡಿಸಿರುವ ಕ್ರಮಕ್ಕೆ ಪೊಲೀಸ್ ಇಲಾಖೆ ಹಾಗೂ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಆಕ್ರೋಶ ವ್ಯಕ್ತವಾಗಿದೆ.

    ಶಿವಮೊಗ್ಗದ ಡಿಎಆರ್ ಮುಖ್ಯಪೇದೆ ಎಸ್.ಕೆ.ನಂದೀಶ್ ಅವರನ್ನು, ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿ ಅನ್ವಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ನೇರ ನೇಮಕಾತಿಯಡಿ ಖಾಲಿ ಇರುವ ಎಫ್​ಡಿಎ ಹುದ್ದೆಗೆ ವಿಲೀನಗೊಳಿಸಿ ಕಂದಾಯ ಇಲಾಖೆ ಮೇ 19ಕ್ಕೆ ಆದೇಶ ಹೊರಡಿಸಿದೆ. 1 ವರ್ಷದ ಅವಧಿಯಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಎಫ್​ಡಿಎ ಹುದ್ದೆಗೆ ನಿಗದಿಪಡಿಸಿರುವ ಇಲಾಖಾ ಪರೀಕ್ಷೆಗಳನ್ನು ಉತ್ತೀರ್ಣಗೊಳ್ಳಬೇಕು. ವರ್ಗಾವಣೆ ಭತ್ಯೆಗೆ ಅರ್ಹತೆ ಇಲ್ಲ. ಸೇವಾವಧಿಯಲ್ಲಿ ಒಮ್ಮೆ ಮಾತ್ರ ವರ್ಗಾವಣೆ ಮೂಲಕ ನೇಮಕಾತಿ ಪರಿಗಣಿಸುವುದಾಗಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

    ಇಲಾಖೆ ಆಯುಕ್ತ ಕೆ.ಪಿ.ಮೋಹನ್ ರಾಜ್, ಮೇ 24ರಂದು ಎಸ್.ಕೆ.ನಂದೀಶ್​ಕುಮಾರ್​ಗೆ ಹಿರೇಕೆರೂರು ಉಪ ನೋಂದಣಿ ಕಚೇರಿಯಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದ್ದಾರೆ. ಸರ್ಕಾರಿ ನೌಕರ ತನ್ನ ಸೇವಾವಧಿಯಲ್ಲಿ ಒಮ್ಮೆ ವರ್ಗಾವಣೆ ಮೂಲಕ ಸರಿಸಮಾನಾದ ದರ್ಜೆಯ ಬೇರೆ ಹುದ್ದೆಗೆ ನೇಮಕವಾಗಲು ಅವಕಾಶ ಇರುತ್ತದೆ. ಸರ್ಕಾರದ ಮಟ್ಟದಲ್ಲಿಯೇ ಆದೇಶಗಳು ನಡೆಯಬೇಕು. ಮೂಲ ಇಲಾಖೆಯಲ್ಲಿ ಇಂತಹ ಆದೇಶ ಹೊರಡಿಸಲು ಸಾಧ್ಯವಿಲ್ಲ.

    ಕಚೇರಿ ತೆರೆಯದಿದ್ದರೂ ಆದೇಶ: ಕರೊನಾ 2ನೇಅಲೆ ಹೆಚ್ಚಾಗಿ ಅಧಿಕಾರಿಗಳು, ಸಿಬ್ಬಂದಿ ಮೃತಪಟ್ಟ ಕಾರಣಕ್ಕೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರು ರಾಜ್ಯದ ಎಲ್ಲ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ರಜೆ ಇದ್ದರೂ ಸಹ ಕೆ.ಪಿ.ಮೋಹನ್ ರಾಜ್, ನಂದೀಶ್​ಕುಮಾರ್​ರನ್ನು ಎಫ್​ಡಿಎ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದ್ದಾರೆ. ಸಬ್ ರಿಜಿಸ್ಟ್ರಾರ್ ಕಚೇರಿಗೆ ಎಫ್​ಡಿಎ ನೇಮಕಾತಿ ಕೆಪಿಎಸ್​ಸಿಯಿಂದಲೇ ನಡೆಯುತ್ತಿದೆ. ನೇಮಕವಾಗಿ ಸಿಬ್ಬಂದಿ 2 ವರ್ಷ ಕೇಂದ್ರ ಕಚೇರಿ ಮತ್ತು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ತರಬೇತಿ ಪಡೆಯಬೇಕು. ನಂದೀಶ್​ಗೆ ನೇರವಾಗಿ ಹುದ್ದೆ ನೀಡಿರುವುದು ವಿವಾದಕ್ಕೆ ಎಡೆಮಾಡಿಕೊಂಡಿದೆ.

    ಕೋರ್ಟ್​ನಲ್ಲಿ ಪ್ರಶ್ನಿಸುವ ಸಾಧ್ಯತೆ

    ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಾವಿರಾರು ಮುಖ್ಯಪೇದೆಗಳು, ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನೇಮಕಾತಿ ಮಾಡುವಂತೆ ಕೋರಲಿದ್ದಾರೆ. ಸರ್ಕಾರ ಒಪ್ಪದೆ ಇದ್ದರೇ ನಂದೀಶ್​ಕುಮಾರ್ ನೇಮಕಾತಿ ಆದೇಶವನ್ನೇ ಮುಂದಿಟ್ಟುಕೊಂಡು ಕೋರ್ಟ್ ಮೇಟ್ಟಿಲೇರುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಉಳಿದ ಪೇದೆಗಳಿಗೂ ಸಿಗುತ್ತ ಸೌಲಭ್ಯ?

    ಬಿಎ, ಬಿಕಾಂ, ಎಂಎ, ಕಾನೂನು ಪದವಿ ಇದೇ ರೀತಿ ಮೂರ್ನಾಲ್ಕು ಪದವಿ ಮುಗಿಸಿ ಸಾಕಷ್ಟು ಮಂದಿ ಪೊಲೀಸ್ ಇಲಾಖೆಯಲ್ಲಿ ಕಾನ್​ಸ್ಟೇಬಲ್ ಹುದ್ದೆಗೆ ನೇಮಕಾತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿ ಇದ್ದುಕೊಂಡೇ ಕೆಪಿಎಸ್​ಸಿ ನಡೆಸುವ ಎಸ್​ಡಿಎ, ಎಫ್​ಡಿಎ ಇನ್ನಿತರ ನೇಮಕಾತಿಗೆ ಹಾಗೂ ಪಿಎಸ್​ಐ ಹುದ್ದೆಗೆ ಪರೀಕ್ಷೆ ಬರೆದು ಸತತ ಪ್ರಯತ್ನ ಮಾಡುತ್ತಾರೆ. ಆದರೆ, ನಂದೀಶ್​ಕುಮಾರ್ ನೇಮಕಾತಿ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಬೇರೆ ಪೇದೆಗಳಿಗೂ ಈ ಸೌಲಭ್ಯ ಸಿಗುತ್ತದೆಯಾ ಎಂಬ ಪ್ರಶ್ನೆ ಮೂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts