More

    ಕೇಜ್ರಿವಾಲ್ ಬಂಧನ ಖಂಡಿಸಿ ಉಪವಾಸ ಸತ್ಯಾಗ್ರಹ

    ಚಿಕ್ಕಮಗಳೂರು: ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧಿಸಿರುವುದನ್ನು ಖಂಡಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಭಾನುವಾರ ನಗರದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು.

    ನಗರದ ಜಿಲ್ಲಾ ನ್ಯಾಯಾಲಯ ಬಳಿಯ ಉದ್ಯಾವನದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಶಾಂತಿಯುತ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    ಎಎಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಹೇಮಂತ್‌ಕುಮಾರ್ ಮಾತನಾಡಿ, ಅರವಿಂದ ಕೇಜ್ರಿವಾಲ್ ಯಾವುದೇ ತಪ್ಪು ಮಾಡದಿದ್ದರೂ ದುರುದ್ದೇಶಪೂರ್ವಕವಾಗಿ ಬಂಧಿಸಿರುವುದು ಖಂಡನೀಯ. ಕೇಂದ್ರ ಸರ್ಕಾರ ಇಡಿ, ಸಿಬಿಐ ಮೊದಲಾದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿಪಕ್ಷಗಳನ್ನು ಸೋಲಿಸಲು ಕುತಂತ್ರ ನಡೆಸುತ್ತಿದೆ ಎಂದು ದೂರಿದರು.
    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಾಧಿಕಾರಿ ಧೋರಣೆ ಸರಿಯಲ್ಲ. ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಸಲು ಜನತೆ ಜಾಗೃತರಾಗಬೇಕು. ಅರವಿಂದ ಕೇಜ್ರಿವಾಲ್ ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
    ಪಕ್ಷದ ಜಿಲ್ಲಾ ಮಾಧ್ಯಮ ಉಸ್ತುವಾರಿ ಕೆ.ಸುಂದರಗೌಡ ಮಾತನಾಡಿ, ದೆಹಲಿಯಲ್ಲಿ ಉಚಿತ ಶಿಕ್ಷಣ, ಆರೋಗ್ಯ ಸೇವೆ, ಭ್ರಷ್ಟಾಚಾರ ರಹಿತ ಆಡಳಿತದಿಂದ ಆಮ್ ಆದ್ಮಿ ಪಕ್ಷ ಅಧಿಕಾರ ಪಡೆಯಲು ಸಾಧ್ಯವಾಗಿದೆ. ಚುನಾವಣೆ ಸಮೀಪದಲ್ಲಿ ಪಕ್ಷದ ನಾಯಕ ಕೇಜ್ರಿವಾಲ್ ವಿರುದ್ಧ ಭ್ರಷ್ಟಾಚಾರ ಅಪವಾದ ಸರಿಯಲ್ಲ. ಬಿಜೆಪಿ ಚುನಾವಣಾ ಬಾಂಡ್‌ಗಳ ಮೂಲಕ ಕೋಟ್ಯಂತರ ರೂ. ದೇಣಿಗೆ ಪಡೆದು ಭ್ರಷ್ಟಾಚಾರದಲ್ಲಿ ತೊಡಗಿದೆ. ಈ ಬಗ್ಗೆ ಇಡಿ, ಸಿಬಿಐ ಏಕೆ ಮೌನವಹಿಸಿವೆ ಎಂದು ಪ್ರಶ್ನಿಸಿದರು.
    ಕೇಜ್ರಿವಾಲ್ ಯಾವುದೇ ಸ್ವಾರ್ಥವಿಲ್ಲದೇ ಅಲ್ಪಸಂಖ್ಯಾತರು, ಮಹಿಳೆಯರು, ಯುವಕರ ಅಭಿವೃದ್ಧಿಗಾಗಿ ಉತ್ತಮ ಆಡಳಿತ ನೀಡಿದ್ದಾರೆ. ಬಿಜೆಪಿಗೆ ಚುನಾವಣೆ ಸೋಲಿನ ಭೀತಿ ಶುರುವಾಗಿದೆ. ಪ್ರಬಲ ವಿರೋಧಿಗಳನ್ನು ಮಣಿಸಲು ಪ್ರಜಾಪ್ರಭುತ್ವ ವ್ಯವಸ್ಥೆ ವಿರೋಧಿ ಆಡಳಿತಕ್ಕೆ ಮುಂದಾಗಿದೆ ಎಂದು ದೂರಿದರು.
    ಕೇಜ್ರಿವಾಲ್ ಬಂಧನ ವಿಶ್ವಸಂಸ್ಥೆ ಮಟ್ಟದಲ್ಲಿ ಚರ್ಚೆಯಾಗಿದ್ದು, ಅಪಸ್ವರ ಬಂದಿದೆ. ಇಡಿ ಅಧಿಕಾರಿಗಳು ಅವರನ್ನು ಬಿಡುಗಡೆಗೊಳಿಸಬೇಕು. ಆ ನಿಟ್ಟಿನಲ್ಲಿ ದೇಶವ್ಯಾಪಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು.
    ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಪಿ.ಈರೇಗೌಡ ಮಾತನಾಡಿ, ಸರ್ವಾಧಿಕಾರಿ ಆಡಳಿತದ ಮೂಲಕ ಕೇಂದ್ರ ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ಕೈಗೊಂಬೆಗಳಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಟೀಕಿಸಿದರು.
    ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಸೈಯದ್ ಜಮೀಲ್ ಅಹಮದ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಂಗನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts