More

    ಹಿಂದಿನಂತೆ ಇ-ಸ್ವತ್ತು ನೀಡದಿದ್ದರೆ ಉಪವಾಸ

    ಚಾಮರಾಜನಗರ : ಕೊಳ್ಳೇಗಾಲ ನಗರಸಭಾ ವ್ಯಾಪ್ತಿಯ ಬಹುತೇಕ ಆಸ್ತಿಗಳಿಗೆ ಇ-ಸ್ವತ್ತು ದಾಖಲೆ ನೀಡುವ ಪ್ರಕ್ರಿಯೆಗೆ ತೊಡಕಾಗಿರುವ 5 ವರ್ಷದ ಹಿಂದಿನ ಪೌರಾಡಳಿತ ನಿರ್ದೇಶನಾಲಯದ ಸುತ್ತೋಲೆ ಆದೇಶವನ್ನು ರದ್ದುಗೊಳಿಸಿ, 10 ದಿನದಲ್ಲಿ ಹಿಂದಿನಂತೆ ಇ-ಸ್ವತ್ತು ನೀಡದಿದ್ದರೆ ಆಮರಣಾಂತರ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ನಗರಸಭಾ ನಾಮನಿರ್ದೇಶನ ಮಾಜಿ ಸದಸ್ಯ ಎನ್.ಮಧುಚಂದ್ರ ಎಚ್ಚರಿಸಿದ್ದಾರೆ.


    ಶುಕ್ರವಾರ ಈ ಕುರಿತು ಎನ್.ಮಧುಚಂದ್ರ, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಲಿಖಿತ ಮನವಿ ಸಲ್ಲಿಸಿದ್ದು, ಇ-ಮೇಲ್ ಮೂಲಕ ಪೌರಾಡಳಿತ ನಿರ್ದೇಶಕರಿಗೂ ಮನವಿ ಪತ್ರ ರವಾನಿಸಿದ್ದಾರೆ. ಸಂ.23350/ಡಿ.ಎಂ.ಎ 121 ಜಿ.ಪಿ.ಎಸ್ 2017-18 ದಿನಾಂಕ:05/01/2018 ರಂದು ಹೊರಡಿಸಿರುವ ಸುತ್ತೋಲೆಯನ್ನು ರದ್ದುಗೊಳಿಸಿ, ಕೊಳ್ಳೇಗಾಲ ನಗರಸಭಾ ವ್ಯಾಪ್ತಿಯ ಸಾರ್ವಜನಿಕರಿಗೆ ಇ-ಸ್ವತ್ತು ದಾಖಲೆ ಪಡೆಯಲು ಅನುಕೂಲವಾಗುಂತೆ ಕ್ರಮವಹಿಸಬೇಕು ಎಂದು ಮನವಿಯಲ್ಲಿ ಅವರು ಒತ್ತಾಯಿಸಿದ್ದಾರೆ.


    ಕಳೆದ 5 ವರ್ಷದಿಂದಲೂ ಇ-ಸ್ವತ್ತು ದಾಖಲೆಗಳನ್ನು ಸಮರ್ಪಕವಾಗಿ ನೀಡದ ಹಿನ್ನೆಲೆ ಸಾರ್ವಜನಿಕ ವಲಯದಲ್ಲಿ ಗೊಂದಲ ಉಂಟಾಗಿದೆ. ಹಿಂದೆ ಕೊಳ್ಳೇಗಾಲ ಪುರಸಭೆಯಾಗಿದ್ದ ಕಾಲದಲ್ಲಿ ಅಕ್ಕಪಕ್ಕದ ಗ್ರಾ.ಪಂ. ವ್ಯಾಪ್ತಿಯ ಊರುಗಳು ಹಾಗೂ ಇತರ ಬಡಾವಣೆಗಳನ್ನು ಹಿಂದಿನ ಪುರಸಭಾ ಆಡಳಿತಕ್ಕೆ ಒಳಪಡಿಸಿಕೊಳ್ಳಲಾಗಿದೆ. ನಂತರದಲ್ಲಿ ಪುರಸಭೆ ಮೇಲ್ದರ್ಜೆಗೇರಿ ನಗರಸಭೆಯಾಗಿದೆ. ಈ ನಡುವೆ ಗ್ರಾಪಂ ವ್ಯಾಪ್ತಿಯ ಊರುಗಳ ನಾಗರಿಕರ ಆಸ್ತಿಗಳಿಗೆ ಅಭಿವೃದ್ಧಿ ಶುಲ್ಕ ಪಾವತಿಸಿಕೊಂಡು ಎಂಎಆರ್-19 ವಹಿಯಲ್ಲಿ ದಾಖಲಿಸಿಕೊಂಡು ಖಾತೆ ಮಾಡಿಕೊಡಲಾಗಿದೆ ಎಂದಿದ್ದಾರೆ.


    2002-03ನೇ ಸಾಲಿನಿಂದ ಎಂಎಆರ್-19 ವಹಿ ಪುಸ್ತಕದ ಬದಲಿಗೆ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಚಾಲ್ತಿಗೆ ಬಂದಿದ್ದು, ಅದರಂತೆ ಆಸ್ತಿಗಳ ವಿವರವನ್ನು ದಾಖಲಿಸಿಕೊಂಡು ನಮೂನೆ-3 ನೀಡಲಾಗುತ್ತಿತ್ತು. ತದನಂತರ ಕೆ.ಎಂ.ಎಫ್-24(ಕರ್ನಾಟಕ ಮುನ್ಸಿಪಾಲ್ ಫಾರಂ)ರ ಆಸ್ತಿ ವಹಿಯಲ್ಲಿ ಆಸ್ತಿ ತೆರಿಗೆ ರಿಜಿಸ್ಟ್ರಾರ್‌ನಲ್ಲಿ ಬರುವ ಮಾಲೀಕತ್ವದ ವಿವರಗಳನ್ನು ದಾಖಲಿಸಿಕೊಂಡು ಇ-ಸ್ವತ್ತು ನೀಡುವ ಪ್ರಕ್ರಿಯೆ ಆರಂಭವಾಯಿತು.

    ಅದಾದ ನಂತರದಲ್ಲಿ ಕೆಲ ಆಸ್ತಿಗಳು ನಗರಾಭಿವೃದ್ಧಿ ಪ್ರಾಧಿಕಾರದಿಂದ ವಿನ್ಯಾಸ ನಕ್ಷೆ ಅನುಮೋದನೆಗೊಂಡಿಲ್ಲ ಎಂಬ ಕಾರಣ ಮತ್ತು 2018ರ ಡಿಎಂಎ ಸುತ್ತೋಲೆ ಆದೇಶವೊಂದನ್ನು ಮುಂದಿಟ್ಟುಕೊಂಡು ಜನರಿಗೆ ಇ-ಸ್ವತ್ತು ದಾಖಲೆ ನೀಡದಿರುವುದು ಸರಿಯಲ್ಲ. ಹಾಗಾಗಿ, ಸುತ್ತೋಲೆ ಆದೇಶವನ್ನು ರದ್ದುಗೊಳಿಸಿ ಜನರಿಗೆ ಇ-ಸ್ವತ್ತು ನೀಡಬೇಕು. ಇಲ್ಲವಾದರೆ, ನಗರಸಭೆಯ ಪೌರಾಯುಕ್ತರ ಕಚೇರಿ ಎದುರು ಸಾರ್ವಜನಿಕರ ಪರವಾಗಿ ಆಮರಣಾಂತರ ಉಪವಾಸ ನಡೆಸುವುದಾಗಿ ಮನವಿ ಪತ್ರ ನೀಡುವ ಮೂಲಕ ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts