More

    ಹಾನಗಲ್ಲನಲ್ಲಿ ಜಿಂಕೆ ರಕ್ಷಿಸಿ, ಉಪಚರಿಸಿದ ರೈತರು

    ಹಾನಗಲ್ಲ: ನಾಯಿಗಳ ದಾಳಿಯಿಂದ ಗಾಯಗೊಂಡಿದ್ದ ಜಿಂಕೆಯನ್ನು ರೈತರು ರಕ್ಷಿಸಿ, ಪ್ರಾಥಮಿಕ ಚಿಕಿತ್ಸೆ ಒದಗಿಸಿ ಅರಣ್ಯಾಧಿಕಾರಿಗೆ ಒಪ್ಪಿಸಿದ ಘಟನೆ ಗುರುವಾರ ನಡೆದಿದೆ.

    ರಾಮತೀರ್ಥ ಹೊಸಕೊಪ್ಪ ಗ್ರಾಮ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದೆ. ಅರಣ್ಯದಲ್ಲಿನ ವನ್ಯಜೀವಿಗಳು ಆಗಾಗ ಗ್ರಾಮಕ್ಕೆ ಆಗಮಿಸುತ್ತವೆ. ಗುರುವಾರ ಬೆಳಗ್ಗೆ ಜಿಂಕೆಯೊಂದು ದಾರಿತಪ್ಪಿ ಗ್ರಾಮದ ಒಳಗೆ ಬಂದಿತ್ತು. ಆಗ ಗ್ರಾಮದ ನಾಯಿಗಳೆಲ್ಲ ಸುತ್ತುವರಿದು ಜಿಂಕೆಗೆ ಕಚ್ಚಿ ಗಾಯಗೊಳಿಸಿದ್ದವು. ಸ್ಥಳದಲ್ಲಿದ್ದ ರೈತ ಎಂ.ಎಂ. ಮುಲ್ಲಾ, ರೈತರ ಸಹಕಾರದೊಂದಿಗೆ ನಾಯಿಗಳನ್ನು ಓಡಿಸಿ, ಜಿಂಕೆ ರಕ್ಷಿಸಿ, ಅರಣ್ಯ ರಕ್ಷಕ ಮಂಜುನಾಥ ಲಮಾಣಿ ಅವರಿಗೆ ಮಾಹಿತಿ ನೀಡಿದ್ದರು. ನಂತರ ಹಾನಗಲ್ಲಿನ ಪಶುವೈದ್ಯ ಇಲಾಖೆಗೆ ಕೊಂಡೊಯ್ದು ಗಾಯಗೊಂಡ ಜಿಂಕೆಗೆ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು.

    ನಾಯಿಗಳ ದಾಳಿಗೆ ತುತ್ತಾದ ಜಿಂಕೆ ರೈತರ ಸಕಾಲಿಕ ರಕ್ಷಣೆ ಹಾಗೂ ಚಿಕಿತ್ಸೆಯಿಂದ ಮರುಜನ್ಮ ಪಡೆದಿದೆ. ನಾಯಿಗಳಿಂದ ಜಿಂಕೆ ಬಿಡಿಸುವ ಸಂದರ್ಭದಲ್ಲಿ ರೈತ ಎಂ.ಎಂ. ಮುಲ್ಲಾ ಅವರಿಗೂ ಗಾಯಗಳಾಗಿವೆ.

    ಸದ್ಯ ಜಿಂಕೆಯನ್ನು ಹಾನಗಲ್ಲ ಸಮೀಪದ ಕುಮಾರೇಶ್ವರ ಉದ್ಯಾನದಲ್ಲಿ ಇರಿಸಲಾಗಿದ್ದು, ಚೇತರಿಸಿಕೊಂಡ ನಂತರ ಮತ್ತೆ ಕಾಡಿಗೆ ಬಿಡಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

    ಅರಣ್ಯ ಪಾಲಕರಾದ ನಾಗಪ್ಪ ಬಾಳಿಹಳ್ಳಿ, ಮಂಜುನಾಥ ಲಮಾಣಿ, ಗಣೇಶ ಮಹರಾಜಪೇಟೆ, ರೈತರಾದ ಅಬ್ದುಲ್​ವಾಹಿದ್ ಮುಲ್ಲಾ, ಮಹ್ಮದ್​ನವಾಜ್, ಮಹ್ಮದ್ ಹಯಾತ ಮುಲ್ಲಾ, ಬಸವರಾಜ ಬೆಳಗಾಲ, ಸಾದಿಕ್ ನಾಯಕ್, ಕುಮಾರ ಸುಬ್ಬಣ್ಣನವರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts