More

    ಮಳೆ ನಿರೀಕ್ಷೆಯಲ್ಲಿ ಅನ್ನದಾತರು

    ಮುಂಡರಗಿ: ಮುಂಗಾರು ಮಳೆ ಆರಂಭಗೊಂಡಿದ್ದರೂ ತಾಲೂಕಿನಲ್ಲಿ ಸಮರ್ಪಕ ಮಳೆ ಸುರಿಯದೆ ಬಿತ್ತನೆ ಕಾರ್ಯ ಸಂಪೂರ್ಣ ಕುಂಠಿತಗೊಂಡಿದೆ. ಮಳೆಯ ನಿರೀಕ್ಷೆಯಲ್ಲಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದ ಹಾಗೂ ಈಗಾಗಲೆ ಕೆಲವೆಡೆ ಬಿತ್ತನೆ ಕಾರ್ಯ ಮಾಡಿರುವ ರೈತರು ಇದೀಗ ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

    ಜೂನ್‌ನಲ್ಲಿ ಕೆಲವೆಡೆ ಅಲ್ಪಸ್ವಲ್ಪ ಸುರಿದಿದ್ದ ಮಳೆಗೆ ರೈತರು ಹೆಸರು, ಶೇಂಗಾ, ಸೂರ್ಯಕಾಂತಿ, ಗೋವಿನಜೋಳ ಮೊದಲಾದ ಬೆಳೆಗಳ ಬಿತ್ತನೆ ಮಾಡಿದ್ದರೆ ಮತ್ತೆ ಕೆಲವೆಡೆ ರೈತರು ಭೂಮಿ ಹದಗೊಳಿಸಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಮಳೆ ಕೈಕೊಟ್ಟಿದ್ದರಿಂದ ರೈತರನ್ನು ತೊಂದರೆಗೀಡು ಮಾಡಿದೆ.
    ಬಿತ್ತನೆಗೆ ಹಾಗೂ ಭೂಮಿಹದಗೊಳಿಸಲು ಸಾವಿರಾರು ರೂ. ಖರ್ಚು ಮಾಡಿಕೊಂಡ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ತಾಲೂಕಿನಲ್ಲಿ ಕೆಲವೊಮ್ಮೆ ಜಿಟಿಜಿಟಿ ಮಳೆ ಸುರಿದಿದ್ದು ಬಿಟ್ಟರೆ ಸಂಪೂರ್ಣವಾಗಿ ಭೂಮಿ ಹದಗೊಳ್ಳುವಷ್ಟು ಮಳೆ ಸುರಿದಿಲ್ಲ. ಹೀಗಾಗಿ ತಾಲೂಕಿನಲ್ಲಿ ಇನ್ನೂ ಶೇ. 54ರಷ್ಟು ಬಿತ್ತನೆ ಕಾರ್ಯ ಮಾಡಿಲ್ಲ. ಇನ್ನಾದರೂ ಮಳೆ ಸುರಿದರೆ ಬಿತ್ತನೆ ಮಾಡಬೇಕೆಂದು ರೈತರು ಈಗಲೂ ಕಾದು ಕುಳಿತಿದ್ದಾರೆ.

    ತಾಲೂಕಿನಲ್ಲಿ ಪ್ರಮುಖ ಬೆಳೆಯಲ್ಲಿ ಹೆಸರು ಬೆಳೆಯಾಗಿತ್ತು. ಆದರೆಮುಂಗಾರು ಪ್ರಾರಂಭದಲ್ಲೇ ಬಿತ್ತನೆ ಮಾಡಬೇಕಿತ್ತು. ಬಹುತೇಕ ಕಡೆಗಳಲ್ಲಿ ಬಿತ್ತನೆ ಮಾಡಿಲ್ಲ. ಕೆಲವಡೆ ಬಿತ್ತನೆ ಮಾಡಿದ ಹೆಸರು ಬೆಳೆಗೆ ತೇವಾಂಶ ಕೊರತೆಯಿಂದ ಬೆಳೆ ನಷ್ಟವಾಗುವ ಸಾಧ್ಯತೆ ಹೆಚ್ಚಿದೆ. ಶೇಂಗಾ, ಸೂರ್ಯಕಾಂತಿ, ಗೋವಿನಜೋಳ ಬಿತ್ತನೆ ಮಾಡುವುದಕ್ಕೆ ಅವಕಾಶವಿದ್ದು, ಮಳೆಬಂದರೆ ಬಿತ್ತನೆಗೆ ಅನುಕೂಲವಾಗಲಿದೆ. ಇಷ್ಟರೊಳಗೆ ಬಿತ್ತನೆ ಮಾಡಬೇಕಿದ್ದ ಬೆಳೆಯು ನಿಗದಿತ ಅವಧಿಯೊಳಗೆ ಬಿತ್ತನೆ ಮಾಡದ ಕಾರಣ ತಡವಾಗಿಬಿತ್ತನೆ ಮಾಡುವುದರಿಂದ ಬೆಳೆಗಳಿಗೆ ಕೀಟ, ರೋಗಬಾಧೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ.

    ಮೂರ‌್ನಾಲ್ಕು ದಿನದಿಂದ ಆಗಾಗ ಮೋಡಕವಿದ ವಾತಾವರಣವಿದ್ದು, ಕೆಲ ಬಾರಿ ಜಿಟಿಜಿಟಿ ಮಳೆ ಬಂದುಹೋಗಿ ಮತ್ತೆ ಬಿಸಿಲು ಬೀಳುತ್ತಿದೆ. ಭೂಮಿಯ ತೇವಾಂಶ ಹೆಚ್ಚಾಗುವಷ್ಟು ಮಳೆ ಬಾರದ ಕಾರಣ ರೈತರು ಮುಗಿಲಿನತ್ತ ಮುಖ ಮಾಡುವಂತಾಗಿದೆ. ಭೂಮಿತಾಯಿಯನ್ನು ನಂಬಿ ಬದುಕು ನಡೆಸುವ ರೈತರಿಗೆ ಮಳೆ ಬೆಳೆ ಇಲ್ಲದೇ ತೊಂದರೆಯಾಗಿದೆ. ಬಿತ್ತನೆ ಮಾಡಿದ ಬೆಳೆಗಳಿಗೆ ತೇವಾಂಶ ಕೊರತೆಯಿಂದಾಗಿ ಬೆಳೆಹಾನಿ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.

    ವಾಡಿಕೆಗಿಂತ ಕಡಿಮೆ ಮಳೆ: ಮುಂಗಾರಿನಲ್ಲಿ ವಾಡಿಕೆಗಿಂತಲೂ ಮಳೆ ಕಡಿಮೆಯಾಗಿದ್ದು, ಮೇ ತಿಂಗಳಲ್ಲಿ 107 ಮೀ.ಮೀ.ಮಳೆ ಆಗಬೇಕಿತ್ತು. ಸುರಿದಿದ್ದು 59 ಮೀ.ಮೀ. ಮಾತ್ರ. ಜೂನ್‌ನಲ್ಲಿ 62.8 ಮೀ.ಮೀ. ಮಳೆ ಸುರಿಯಬೇಕಿತ್ತು. ಆದರೆ, 42.5ರಷ್ಟು ಮಾತ್ರ ಮಳೆಯಾಗಿದೆ.

    ಬಿತ್ತನೆಯಾದ ಪ್ರದೇಶ
    ಹೆಸರು-30 ಹೆಕ್ಟೇರ್
    ಶೇಂಗಾ- 2,200 ಹೆಕ್ಟೇರ್
    ಸೂರ್ಯಕಾಂತಿ- 3,100 ಹೆಕ್ಟೇರ್
    ಜೋಳ- 20 ಹೆಕ್ಟೇರ್
    ಸಜ್ಜೆ- 15 ಹೆಕ್ಟೇರ್
    ಮೆಕ್ಕೆಜೋಳ- 5,680 ಹೆಕ್ಟೇರ್ ತೊಗರಿ- 135 ಹೆಕ್ಟೇರ್

    ಮುಂಗಾರು ಮಳೆ ಕೈಕೊಟ್ಟಿರುವುದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ. ಹೆಸರು, ಶೇಂಗಾ ಇತರ ಬೆಳೆ ಬೆಳೆಯಲಾಗಿದೆ. ತೇವಾಂಶ ಕೊರತೆಯಿಂದಾಗಿ ಬಿತ್ತನೆ ಮಾಡದಂತಾಗಿದೆ. ಬಿತ್ತನೆ ಮಾಡಿದ ಬೆಳೆ ಒಣಗುವ ಹಂತಕ್ಕೆ ತಲುಪುತ್ತಿದೆ. ಹೀಗಾದರೆ ರೈತರು ಬದುಕು ನಡೆಸಲು ತೊಂದರೆಯಾಗುತ್ತದೆ. ಅಧಿಕಾರಿಗಳು ಸರ್ಕಾರಕ್ಕೆ ಸರಿಯಾದ ವರದಿ ಸಲ್ಲಿಸಿ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು.

    I ಮಹಾಂತೇಶ ಮುಗಳಿ, ಯಕ್ಲಾಸಪುರ ರೈತ

    ತಾಲೂಕಿನಲ್ಲಿ ಶೇ.50ರಷ್ಟು ಮಳೆ ಕೊರತೆಯಾಗಿದೆ. ಮಳೆ ಕೊರತೆಯಿಂದಾಗಿ ಬಿತ್ತನೆ ಪ್ರಮಾಣವು ಕಡಿಮೆಯಾಗಿದೆ. ಹೆಸರು ಬಿತ್ತನೆ ಸಮಯವು ಮುಗಿದಿದೆ. ಶೇಂಗಾ, ಗೋವಿನಜೋಳ ಕೆಲವೊಂದು ಬೆಳೆ ಬಿತ್ತನೆ ಮಾಡುವುದಕ್ಕೆ ಜು.15ರವರೆಗೆ ಅವಕಾವಿದೆ.

    I ವೆಂಕಟೇಶಮೂರ್ತಿ ಟಿ.ಸಿ, ಸಹಾಯಕ ಕೃಷಿ ನಿರ್ದೇಶಕ ಮುಂಡರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts