More

    ಬ್ಯಾಡಗಿ ತಹಸೀಲ್ದಾರ್ ಕೊಠಡಿಯೊಳಗೆ ರೈತರ ಪ್ರತಿಭಟನೆ

    ಬ್ಯಾಡಗಿ: ಪ್ರಸಕ್ತ ಸಾಲಿನ ಬೆಳೆ ನಷ್ಟ ಪರಿಹಾರ ವಿತರಿಸಿದ ರೈತರ ಪಟ್ಟಿ ನೀಡದೆ, ನಿರ್ಲಕ್ಷ್ಯತೋರಿದ ತಹಸೀಲ್ದಾರ್ ವಿರುದ್ಧ ರೈತ ಸಂಘದ ಕಾರ್ಯಕರ್ತರು ತಹಸೀಲ್ದಾರ್ ಕೊಠಡಿಯೊಳಗೆ ತೆರಳಿ ಅರ್ಧ ಗಂಟೆ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ಜರುಗಿತು.
    ತಾಲೂಕಿನ ಸಾವಿರಾರು ರೈತರು ಕಳೆದ ವರ್ಷ ಅತಿವೃಷ್ಟಿ ಮಳೆಯಿಂದ ಬೆಳೆ ಹಾನಿಗೆ ಸಿಲುಕಿ ನಲುಗಿದ್ದಾರೆ. ಆದರೆ, ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಕಣ್ತಪ್ಪಿನಿಂದ ನೂರಾರು ರೈತರಿಗೆ ಪರಿಹಾರ ಹಣ ಜಮೆಯಾಗಿಲ್ಲ, ಈ ಕುರಿತು ಅಧಿಕಾರಿಗಳಿಗೆ ಹತ್ತಾರು ಬಾರಿ ಪ್ರತಿಭಟನೆ ನಡೆಸಿ ಸಂಘದ ಕಾರ್ಯಕರ್ತರು, ಮುಖಂಡರು ಮಾಹಿತಿ ನೀಡುವಂತೆ ಆಗ್ರಹಿಸಿದರೂ ಕ್ಯಾರೇ ಅನ್ನುತ್ತಿಲ್ಲ. ಕೆಲ ರೈತರ ಬೆಳೆ ಕುರಿತು ಬೆಳೆ ಆ್ಯಪ್‌ನಲ್ಲಿ ತಪ್ಪು ಮಾಹಿತಿ ಅಪ್‌ಲೋಡ್ ಆಗಿರುವ ಕಾರಣ ರೈತರಿಗೆ ಪರಿಹಾರದ ಹಣ ತಲುಪಿಲ್ಲ. ಪರಿಹಾರ ವಿತರಿಸಿದ ಫಲಾನುಭವಿಗಳ ಪಟ್ಟಿ ಕೊಡಬೇಕು. ದಾಖಲೆ ನೀಡುವವರೆಗೂ ಕಚೇರಿಯಿಂದ ಹೊರ ಹೋಗುವುದಿಲ್ಲವೆಂದು ರೈತರು ಪಟ್ಟು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಆದರೆ, ತಹಸೀಲ್ದಾರ್ ಹಾವೇರಿಯ ಸಭೆಗೆ ತೆರಳಿದ ಕಾರಣ ಅಧಿಕಾರಿಗಳು ಕೆಲಕಾಲ ಕೊಠಡಿಯತ್ತ ಹಾಯಲಿಲ್ಲ.

    ಮನವೊಲಿಸಿದ ಪೋಲಿಸರು

    ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಎಎಸ್‌ಐ ಬಸವರಾಜ ಅಂಜುಟಗಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಆಗಮಿಸಿ ಪ್ರತಿಭಟನಾಕಾರರು ಮನವೊಲಿಸಿದರು. ಶಿರಸ್ತೇದಾರ್ ಎಚ್.ಬಿ. ಹತ್ತಿಮತ್ತೂರ ಅವರನ್ನು ಕರೆಸಿ ಬೆಳೆ ನಷ್ಟ ಪರಿಹಾರ ಮಾಹಿತಿ ನೀಡುವುದಾಗಿ ಹೇಳಿಕೆ ಕೊಡಿಸಿದ ನಂತರ ಪ್ರತಿಭನಾನಿರತ ರೈತರು ಎದ್ದು ಹೊರನಡೆದರು.
    ರೈತ ಮುಖಂಡರಾದ ಕಿರಣ ಗಡಿಗೋಳ, ಮೌನೇಶ ಕಮ್ಮಾರ, ಗಂಗಣ್ಣ ಎಲಿ, ಪ್ರವೀಣ ಹೊಸಗೌಡ್ರ, ಬಸವರಾಜ ಬಡ್ಡಿಯವರ, ಹನುಮಂತ ಚಳಗೇರಿ, ಈರಪ್ಪ ಕುಮ್ಮೂರು, ಶಂಕರ ಮರಗಾಲ ಇತರರಿದ್ದರು.

    ಅನಾಹುತಕ್ಕೆ ಹೊಣೆ ಯಾರು ?

    ಕಂದಾಯ ಇಲಾಖೆಗೆ ಪ್ರತಿದಿನವೂ ನೂರಾರು ಸಾರ್ವಜನಿಕರು ಬಂದುಹೋಗುತ್ತಿದ್ದು, ಭದ್ರತಾ ಸಿಬ್ಬಂದಿ ಅಗತ್ಯವಿದೆ. ವಿವಿಧ ಸಂಘಟನೆಗಳು ಸೇರಿದಂತೆ ಹೋರಾಟಗಾರರು ಬಾಗಿಲಿಗೆ ಬೀಗ ಹಾಕುವುದು, ಬಾಗಿಲ ಬಳಿ ಪ್ರತಿಭಟನೆ ಕುಳಿತುಕೊಳ್ಳುವುದು ನಡೆಯುತ್ತಿರುತ್ತದೆ. ದುರ್ಘಟನೆಗಳು ಜರುಗದಂತೆ ತಹಸೀಲ್ದಾರ್ ಕಾರ್ಯಾಲಯಕ್ಕೆ ಭದ್ರತೆ ಒದಗಿಸಬೇಕೆಂಬ ಕೂಗು ಕೇಳಿಬಂತು. ಗುರುವಾರ ನಡೆದ ಘಟನೆಯಲ್ಲೂ ತಹಸೀಲ್ದಾರ್ ಕಾರ್ಯಾಲಯದ ಬಾಗಿಲಲ್ಲೇ ವಿಚಾರಿಸಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ಆಕ್ರೋಶದ ಸಂದರ್ಭದಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆ ಉದ್ಭವಿಸಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts