More

    ನೀರು, ಪರಿಹಾರಕ್ಕಾಗಿ ಪಾದಯಾತ್ರೆ ; ಹೊನ್ನವಳ್ಳಿಯಿಂದ ಬಿದರೇಗುಡಿವರೆಗೂ ಜಾಥಾ

    ತಿಪಟೂರು: ಎತ್ತಿನಹೊಳೆ ಯೋಜನೆಯಲ್ಲಿ ತಾಲೂಕಿಗೆ ನೀರು ಹಂಚಿಕೆ ಹಾಗೂ ಭೂ ಸ್ವಾಧೀನವಾದ ಜಮೀನಿಗೆ ಪರಿಹಾರ ನೀಡುವಂತೆ ಸೋಮವಾರ ಎತ್ತಿನಹೊಳೆ ಹೋರಾಟ ಸಮಿತಿ ತಾಲೂಕಿನ ಹೊನ್ನವಳ್ಳಿಯಿಂದ ಬಿದರೇಗುಡಿ ವರೆಗೂ ಪಾದಯಾತ್ರೆ ನಡೆಸಿತು, ಸೂಕ್ತ ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್ ಆರ್.ಜಿ.ಚಂದ್ರಶೇಖರ್‌ಗೆ ಮನವಿ ಸಲ್ಲಿಸಿತು.

    ತಾಲೂಕಿನ ಎಲ್ಲ ಕೆರೆಗಳು ತುಂಬಲು ಅಗತ್ಯವಿರುವ ನೀರಿನ ಹಂಚಿಕೆ ಆಗಿಲ್ಲ, ಹೊನ್ನವಳ್ಳಿ, ಕಿಬ್ಬನಹಳ್ಳಿ, ಕಸಬಾ ಹೋಬಳಿ ರೈತರು ನೀರಿನ ಬವಣೆ ಎದುರಿಸುತ್ತಿದ್ದಾರೆ. ಹೊನ್ನವಳ್ಳಿ ಭಾಗದ ಕೆರೆಗಳಿಗೆ ಹೇಮಾವತಿ ನೀರು ತುಂಬಿಸುವ ಸರ್ಕಾರದ ಆದೇಶ ಕಾಗದದ ಮೇಲಷ್ಟೇ ಹರಿಯುತ್ತಿದೆ. ಜೀವ ಜಲಕ್ಕಾಗಿ ಕೊಳವೆಬಾವಿ ಕೊರೆಸಲು ಮುಂದಾಗುವ ರೈತರ ಮೇಲೆ ಸರ್ಕಾರ ಕ್ರಿಮಿನಲ್ ಪ್ರಕರಣ ದಾಖಲಿಸುವ ಬೆದರಿಕೆ ಒಡ್ಡುತ್ತಿದೆ ಎಂದು ತಾಲೂಕು ರೈತ ಸಂಘದ ಕಾರ್ಯದರ್ಶಿ ಎಸ್.ಎನ್.ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

    ತರಾತುರಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ, ಹಾಸನ ಜಿಲ್ಲೆಯ ಬೇಲೂರು, ಸಕಲೇಶಪುರ, ಅರಸಿಕೆರೆ ತಾಲೂಕುಗಳಲ್ಲಿ ಭೂಸ್ವಾಧೀನದ ಪರಿಹಾರ ಇನ್ನೂ ನೀಡಿಲ್ಲ. ಈಗ ತಿಪಟೂರು, ತುಮಕೂರು, ಗುಬ್ಬಿ, ಕೊರಟಗೆರೆ ತಾಲೂಕುಗಳಲ್ಲೂ ಸಂತ್ರಸ್ತರ ಅಹವಾಲು ಆಲಿಸದೇ ಕೇವಲ ತ್ರಿಪಕ್ಷೀಯ ಒಪ್ಪಂದ (ರೈತ, ಗುತ್ತಿಗೆದಾರ ಮತ್ತು ಸರ್ಕಾರ)ದ ಮೂಲಕ ಅನ್ನದಾತರನ್ನು ಮರಳು ಮಾಡುವ ಮೂಲಕ ಭೂ ಸ್ವಾಧೀನ ಪಡಿಸಿಕೊಂಡು ಕಾಮಗಾರಿ ನಡೆಸುತ್ತಿರುವುದು ಪ್ರಜಾಪ್ರಭುತ್ವ ನೀತಿಗೆ ವಿರುದ್ಧವಾಗಿದೆ ಎಂದರು.

    ಜಿಪಂ ಸದಸ್ಯ ಜಿ.ನಾರಾಯಣ್, ಕಾಂಗ್ರೆಸ್ ಮುಖಂಡ ಸಿ.ಬಿ.ಶಶಿಧರ್, ತಾಲೂಕು ರೈತ ಸಂಘದ ಅಧ್ಯಕ್ಷ ತಿಮ್ಲಾಪುರ ದೇವರಾಜು, ಸಹ ಕಾರ್ಯದರ್ಶಿಗಳಾದ ಭೈರನಾಯಕನಹಳ್ಳಿ ಲೋಕೇಶ್, ಬಸ್ತಿಹಳ್ಳಿ ರಾಜಣ್ಣ, ಕೆಳಹಟ್ಟಿ ಶ್ರೀಕಾಂತ್, ಆರ್.ಡಿ.ಯೋಗಾನಂದ ಸ್ವಾಮಿ, ಮನೋಹರ್ ಪಟೇಲ್, ಮುಖಂಡರಾದ ಬೆನ್ನಾಯಕನಹಳ್ಳಿ ಶಿವಪ್ಪ, ಸೂಗೂರು ಪ್ರಕಾಶ್, ರೈತರು ಇದ್ದರು.

    ಪ್ರಮುಖ ಬೇಡಿಕೆಗಳು: 1.ವಿಶ್ವೇಶ್ವರ ನೀರಾವರಿ ನಿಗಮವು ತಾಲೂಕಿನ ಎಲ್ಲ ಕೆರೆಗಳನ್ನೂ ತುಂಬಿಸಲು ಅಗತ್ಯವಿರುವ 1.5 ನೀರು ಹಂಚಿಕೆ ಮಾಡಬೇಕು ಮತ್ತು ಈ ಕುರಿತಾದ ಸರ್ಕಾರಿ ಆದೇಶದ ಪ್ರತಿಯನ್ನು ರೈತರಿಗೆ ತೋರಿಸಬೇಕು. 2. ಭೂ ಸ್ವಾಧೀನ ಕಾಯ್ದೆ ಪ್ರಕಾರ ರೈತರಿಗೆ ಒಂದು ಮತ್ತು ಎರಡನೆ ಷೆಡ್ಯೂಲ್‌ನ ಪರಿಹಾರ ನೀಡಿದ ನಂತರ ಭೂ ಸ್ವಾಧೀನಕ್ಕೆ ಬರಬೇಕು, ಅಲ್ಲಿವರೆಗೂ ಕಾಮಗಾರಿಗೆ ಕೈ ಹಾಕಬಾರದು. 3.ಯೋಜನೆಯಡಿ ಭೂಮಿ, ಮನೆ, ಕಟ್ಟಡ, ಮರ, ಮುಟ್ಟು ಕಳೆದುಕೊಳ್ಳುವ ರೈತರು ತಮ್ಮ ಬದುಕು ಕಟ್ಟಿಕೊಳ್ಳುವಷ್ಟು ನ್ಯಾಯಬದ್ಧ ಪರಿಹಾರ ನೀಡಬೇಕು.4. ರೈತರಿಗೆ ಮಾರಕವಾಗಿರುವ ತ್ರಿಪಕ್ಷೀಯ ಒಪ್ಪಂದ ರದ್ದಾಗಬೇಕು. 5. ಕೊಳವೆಬಾವಿ ಕೊರೆಸುವ ರೈತರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಪ್ರಸ್ತಾವನೆ ತಕ್ಷಣ ಹಿಂಪಡೆಯಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts