More

    ತಹಸೀಲ್ದಾರ್ ಕಚೇರಿ ಎದುರು ರೈತರ ಪ್ರತಿಭಟನೆ

    ಬ್ಯಾಡಗಿ: ಬೆಳೆ ವಿಮೆ, ಪರಿಹಾರ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಪುನಃ ಪರಿಶೀಲಿಸಿ ಪರಿಹಾರ ಜಮೆ ಮಾಡಬೇಕು ಎಂದು ಒತ್ತಾಯಿಸಿ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯ ಎದುರು ರೈತ ಸಂಘದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

    ತಾಲೂಕು ರೈತ ಸಂಘದ ಕಾರ್ಯಾಧ್ಯಕ್ಷ ಕಿರಣಕುಮಾರ ಗಡಿಗೋಳ ಮಾತನಾಡಿ, ತಾಲೂಕಿನಲ್ಲಿ 20 ಸಾವಿರ ಹೆಕ್ಟೇರ್ ಬೆಳೆ ನಾಶವಾಗಿದ್ದು, ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುವ ಮೂಲಕ ರೈತರಿಗೆ ಅನ್ಯಾಯವೆಸಗಿದ್ದಾರೆ. ಮೂರು ತಿಂಗಳಿಂದ ಇಲ್ಲಿನ ತಹಸೀಲ್ದಾರ್ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ರಜೆ, ಸಭೆಯ ನೆಪ, ಬೇರೆ ಬೇರೆ ಕಾರಣಗಳ ಮೂಲಕ ಕಚೇರಿಯಲ್ಲಿ ಲಭ್ಯವಾಗುತ್ತಿಲ್ಲ. ಈಗ 15 ದಿನಗಳಿಂದ ರಜೆ ಮೇಲೆ ತೆರಳಿದ್ದು, ಪ್ರಭಾರಿ ತಹಸೀಲ್ದಾರ್ ಅಸಹಾಯಕತೆ ತೋರಿಸುವ ಮೂಲಕ, ನಾನು ಹಿರೇಕೆರೂರು ತಹಸೀಲ್ದಾರ ಇಲ್ಲಿ ಪ್ರಭಾರಿ ಮಾತ್ರ ಎನ್ನುವ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

    ಗ್ರಾಮಲೆಕ್ಕಾಧಿಕಾರಿಗಳು ಹಾಗೂ ಸಹಾಯಕ ಕೃಷಿ ನಿರ್ದೇಶಕರು ಹಾನಿಗೊಳಗಾದ ಯಾವುದೇ ಹೊಲಗಳಿಗೆ ಭೇಟಿ ನೀಡಿ ಸಮೀಕ್ಷೆ ಮಾಡಿಲ್ಲ. ಇದರಿಂದ ಬೆಳೆ ಹಾನಿಯಾದ ರೈತರಿಗೆ ಅನ್ಯಾಯವಾಗಿದೆ. ಮೂರು ದಿನದಲ್ಲಿ ಎಲ್ಲ ರೈತರಿಗೆ ಸಮರ್ಪಕ ಪರಿಹಾರ ವಿತರಿಸಬೇಕು. ನಿರ್ಲಕ್ಷ್ಯ ತೋರಿದಲ್ಲಿ ತಹಸೀಲ್ದಾರ್ ಕಾರ್ಯಾಲಯ ಎದುರು ಅಹೋರಾತ್ರಿ ಧರಣಿ ಆರಂಭಿಸುತ್ತೇವೆ ಎಂದು ಎಚ್ಚರಿಸಿದರು.

    ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಜಿಲ್ಲೆಯ ಗೋವಿನಜೋಳ ಹಾಗೂ ಇತರ ಬೆಳೆಗೆ ಮಧ್ಯಂತರ ವಿಮೆಯನ್ನು 15 ದಿನಗಳಲ್ಲಿ ನೀಡುವುದಾಗಿ ವಿಮೆ ಕಂಪನಿ, ಜನಪ್ರತಿನಿಧಿಗಳು ಒಪ್ಪಿಕೊಂಡಿದ್ದು, ಈವರೆಗೂ ಯಾವುದೇ ಪ್ರಕ್ರಿಯೆ ಕಂಡುಬರುತ್ತಿಲ್ಲ. ಬಹುತೇಕ ರೈತರಿಗೆ ಬೆಳ ವಿಮೆ ತಾರತಮ್ಯವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. 10 ಎಕರೆಗೆ 2 ಸಾವಿರ ರೂಪಾಯಿ, ಒಂದು ಎಕರೆಗೂ ಎರಡು ಸಾವಿರ ರೂಪಾಯಿ ಬಿಡುಗಡೆ ಮಾಡಿದರೆ ರೈತರ ಗತಿ ಏನು. ತಾಲೂಕಿನಲ್ಲಿ ಎಷ್ಟು ಹೆಕ್ಟೇರ್​ಗೆ ಪರಿಹಾರ ಹಣ ಬಿಡುಗಡೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು.

    ಸ್ಥಳಕ್ಕೆ ಆಗಮಿಸಿದ ಸಹಾಯಕ ಕೃಷಿ ನಿರ್ದೇಶಕ ಎಂ.ಬಿ. ವೀರಭದ್ರಪ್ಪ, ಪರಿಹಾರ ವಿತರಿಸಿದ ಮಾಹಿತಿ ಲಭ್ಯವಿಲ್ಲ. ಗ್ರಾಮಲೆಕ್ಕಾಧಿಕಾರಿ, ಕಂದಾಯ ಇಲಾಖೆ ಆಪರೇಟರ್ ಬಳಿ ಸಂಗ್ರಹಿಸಿ, ಹೋರಾಟಗಾರರಿಗೆ ನೀಡುವುದಾಗಿ ತಿಳಿಸಿದರಲ್ಲದೆ, ಈವರೆಗೂ 7500 ಹೆಕ್ಟೇರ್​ಗೆ ಪರಿಹಾರ ಹಣ ವಿತರಣೆಯಾಗಿದೆ ಎಂದರು. ಬಳಿಕ ರೈತರು ಮೂರು ದಿನ ಗಡುವು ನೀಡಿ ಪ್ರತಿಭಟನೆ ಹಿಂಪಡೆದರು.

    ರೈತ ಮುಖಂಡರಾದ ರುದ್ರಗೌಡ್ರ ಕಾಡನಗೌಡ್ರ, ಚಿಕ್ಕಪ್ಪ ಛತ್ರದ, ಗ್ರಾಪಂ ಸದಸ್ಯ ಕರಬಸಪ್ಪ ಶಿರಗಂಬಿ, ಮಂಜುನಾಥ ತೋಟದ, ಶೇಖಪ್ಪ ಕಾಶಿ, ನಿಂಗಪ್ಪ ಮಾಸಣಗಿ, ಮಲ್ಲೇಶಪ್ಪ ಡಂಬಳ, ರಾಜಣ್ಣ ಹೇರೂರ, ಬಸವರಾಜ ಹಿರೇಹಳ್ಳಿ, ಶಿವರಾಜ ಬಣಕಾರ, ರಾಜು ಪಾಟೀಲ, ಶಿವರುದ್ರಪ್ಪ ಹಿರೇಹಳ್ಳಿ ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts