More

    ರೈತರಿಗೆ ಆನ್‌ಲೈನ್ ತರಬೇತಿ, ಕೃಷಿ ಪೂರಕ ಮಾಹಿತಿ

    ಬೆಳಗಾವಿ: ಕರೊನಾ ಹೆಮ್ಮಾರಿಗೆ ಹೆದರಿ ಜನಸಮೂಹ ಆತಂಕದಲ್ಲಿ ಕಾಲ ಕಳೆಯುತ್ತಿದ್ದು, ಅದಕ್ಕೆ ರೈತರು ಹೊರತಾಗಿಲ್ಲ. ಕರೊನಾ ಭಯದಿಂದ ರೈತರು ರೈತ ಸಂಪರ್ಕ ಕೇಂದ್ರಗಳಿಗೆ ತೆರಳಿ ಅಗತ್ಯ ಮಾಹಿತಿ ಪಡೆಯುವುದಕ್ಕೆ ಹಿಂಜರಿಯುತ್ತಿದ್ದಾರೆ. ಹೀಗಾಗಿ ಕೃಷಿ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಈ ಸಮಸ್ಯೆ ನಿವಾರಿಸಲು ಕೃಷಿ ಇಲಾಖೆ ಅಧಿಕಾರಿಗಳು ಆನ್‌ಲೈನ್ ತರಬೇತಿ ಮೊರೆ ಹೋಗಿದ್ದು, ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಮೂಡಲಗಿ ತಾಲೂಕಿನ ಅರಬಾವಿಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ ಆನ್‌ಲೈನ್ ತರಬೇತಿ ನೀಡಲಾಗುತ್ತಿದೆ. ಆನ್‌ಲೈನ್‌ನಲ್ಲಿ ಪಾಲ್ಗೊಳ್ಳುವ ರೈತರಿಗೆ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನಿಗಳು ಪೂರಕ ಮಾಹಿತಿ ನೀಡುತ್ತಿದ್ದಾರೆ.

    135 ರೈತರು ಭಾಗಿ: ಒಂದೂವರೆ ತಿಂಗಳಿಂದ ಸುಮಾರು 6 ಆನ್‌ಲೈನ್ ತರಬೇತಿ ಕಾರ್ಯಕ್ರಮ ನಡೆಸಲಾಗಿದೆ. ಇದುವರೆಗೆ 135 ರೈತರು ಮೊಬೈಲ್ ಮೂಲಕವೇ ಮನೆಯಿಂದ ಆನ್‌ಲೈನ್ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ. ತರಬೇತಿಯಲ್ಲಿ ಪ್ರಮುಖವಾಗಿ ಸಮಗ್ರ ಕೀಟ ನಿರ್ವಹಣೆ, ಬೀಜೋಪಚಾರ, ಬಿತ್ತನೆ, ಕ್ರಿಮಿನಾಷಕ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

    ಪಾಲ್ಗೊಳ್ಳುವುದು ಹೇಗೆ?: ತರಬೇತಿಯಲ್ಲಿ ಪಾಲ್ಗೊಳ್ಳಲು ತಾಲೂಕು ಕೃಷಿ ಅಧಿಕಾರಿಗಳು ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ತೆರಳಿ ರೈತರು ಹೆಸರು ನೋಂದಣಿ ಮಾಡಬೇಕು. ಬಳಿಕ ಅಧಿಕಾರಿಗಳು ವಾಟ್ಸ್‌ಆ್ಯಪ್ ಗ್ರುಪ್ ರಚಿಸಿ, ರೈತರಿಗೆ ತರಬೇತಿ ನಡೆಯುವ ಬಗ್ಗೆ ತಿಳಿಸುತ್ತಾರೆ. ಜತೆಗೆ ಆನ್‌ಲೈನ್ ತರಬೇತಿ ಲಿಂಕ್‌ಗಳನ್ನು ವಾಟ್ಸ್ ಆ್ಯಪ್‌ಗೆ ಶೇರ್ ಮಾಡುತ್ತಾರೆ. ಲಿಂಕ್ ಬಳಸುವ ಮೂಲಕ ರೈತರು ತರಬೇತಿಯಲ್ಲಿ ಪಾಲ್ಗೊಳ್ಳಬಹುದು.

    ಕೃಷಿ ಇಲಾಖೆ ಅಧಿಕಾರಿಗಳ ಕ್ರಮಕ್ಕೆ ರೈತರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಮುಂಗಾರು ಹಂಗಾಮಿನ ಸಂದರ್ಭದಲ್ಲಿ ಅಧಿಕಾರಿಗಳ ಈ ಉಪಕ್ರಮದಿಂದ ಹಲವಾರು ರೈತರಿಗೆ ಲಾಭವಾಗುತ್ತಿದೆ.

    ವಿಷಯವಾರು ತರಬೇತಿಗೂ ಅಣಿ

    ರೈತರಿಗೆ ವಿಷಯವಾರು ತರಬೇತಿ ನೀಡಲು ಅಧಿಕಾರಿಗಳು ಅಣಿಯಾಗಿದ್ದಾರೆ. ಪಶು ಸಂಗೋಪನೆ, ಮಾರುಕಟ್ಟೆ, ರೇಷ್ಮೆ ಕೃಷಿ, ಜೇನು ಸಾಕಣೆ ಹೀಗೆ ಹಲವು ವಿಷಯವಾರು ತರಬೇತಿ ನೀಡಲು ರೈತರ ಪ್ರತ್ಯೇಕ ಗುಂಪು ರಚಿಸಲು ತಯಾರಿ ನಡೆಸಿದ್ದಾರೆ. ಪ್ರತ್ಯೇಕ ಗುಂಪಿಗೆ ಪ್ರತ್ಯೇಕ ತರಬೇತಿ ನಡೆಯಲಿದೆ. ಆಸಕ್ತರು ಮೊ.ಸಂ. 9535321850 ಸಂಪರ್ಕಿಸಿ ಹೆಸರು ನೋಂದಣಿ ಮಾಡಿ, ತಮಗೆ ಯಾವ ವಿಷಯದ ತರಬೇತಿ ಬೇಕು ಎನ್ನುವುದನ್ನು ತಿಳಿಸಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಆನ್‌ಲೈನ್ ತರಬೇತಿಗೆ ರೈತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ತರಬೇತಿಯಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಪಾಲ್ಗೊಂಡು ಕೃಷಿಗೆ ಪೂರಕವಾದ ಮಾಹಿತಿ ಪಡೆಯಬಹುದು. ಕೃಷಿ ಕಾಲೇಜಿನ ಪ್ರಾಧ್ಯಾಪಕರು, ಕೃಷಿ ವಿಜ್ಞಾನಿಗಳು ಸಹ ಉಪಯುಕ್ತ ಮಾಹಿತಿ ನೀಡುತ್ತಿದ್ದು ರೈತರು ಲಾಭ ಪಡೆದುಕೊಳ್ಳಬೇಕು.
    | ಜಿಲಾನಿ ಮೊಖಾಶಿ ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಬೆಳಗಾವಿ

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts