More

    ಕಬ್ಬಿಗೆ ಎಫ್​ಆರ್​ಪಿ ನಿಗದಿಗೆ ರೈತರ ಒತ್ತಾಯ

    ಮುಂಡರಗಿ: ಕಬ್ಬಿಗೆ ಎಫ್​ಆರ್​ಪಿ ನಿಗದಿಗೊಳಿಸುವುದು ಸೇರಿದಂತೆ ರೈತರ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಕಬ್ಬು ಬೆಳೆಗಾರರು ಪಟ್ಟಣದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

    ಕೆಇಬಿ ಗಣೇಶ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಬಸ್ ನಿಲ್ದಾಣ, ಕೊಪ್ಪಳ ಸರ್ಕಲ್​ನಲ್ಲಿ ಕೆಲ ಸಮಯ ರಸ್ತೆ ಸಂಚಾರ ಬಂದ್ ಮಾಡಲಾಯಿತು. ರೈತರು ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ನಂತರ ತಹಸೀಲ್ದಾರ್ ಕಚೇರಿಗೆ ತೆರಳಿ ಮುಖ್ಯದ್ವಾರಕ್ಕೆ ಟ್ರ್ಯಾಕ್ಟರ್ ಅಡ್ಡ ನಿಲ್ಲಿಸಿದರು. ತದನಂತರ ಕಚೇರಿ ಮುಖ್ಯಬಾಗಿಲು ಬಂದ್ ಮಾಡಿ ಪ್ರತಿಭಟಿಸಿದರು.

    ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ ಮಾತನಾಡಿ, ರಾಜ್ಯ ಸರ್ಕಾರವು ಕಬ್ಬಿಗೆ ಎಫ್​ಆರ್​ಪಿ ನಿಗದಿಗೊಳಿಸದೆ ರೈತರಿಗೆ ಅನ್ಯಾಯ ಮಾಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿವೆ. ಕಬ್ಬಿಗೆ ದರ ನಿಗದಿಗೊಳಿಸಲು ಹಲವು ಸಭೆ ನಡೆಸಿದ್ದರೂ ದರ ನಿಗದಿಗೊಳಿಸದೇ ಕಾಲಹರಣ ಮಾಡಲಾಗá-ತ್ತಿದೆ ಎಂದು ಆರೋಪಿಸಿದರು.

    ಕಬ್ಬು ಬೆಳೆಗಾರರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಇಳುವರಿ ಪರಿಶೀಲನಾ ಸಮಿತಿ ರಚಿಸಬೇಕು. ಚರ್ಮಗಂಟು ರೋಗದಿಂದ ಜಾನುವಾರುಗಳು ಸಾಯುತ್ತಲಿವೆ. ಅದನ್ನು ರಾಷ್ಟ್ರೀಯ ವಿಪತ್ತು ಎಂದು ಸರ್ಕಾರ ಘೊಷಿಸಬೇಕು. ವಿದ್ಯುತ್ ಖಾಸಗೀಕರಣ ನಿಲ್ಲಿಸಬೇಕು. ಪಂಪ್​ಸೆಟ್​ಗಳಿಗೆ ವಿದ್ಯುತ್ ಸಂಪರ್ಕ ಮುಂದುವರಿಸಬೇಕು. ಹಾಳಾಗಿರುವ ರಸ್ತೆ ದುರಸ್ತಿಗೊಳಿಸಬೇಕು. ಅತಿವೃಷ್ಟಿಯಿಂದ ಹಾಳಾದ ಬೆಳೆಗಳಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಎಸಗಿದೆ. ಶೀಘ್ರ ಬೆಳೆ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದರು.

    ಮಧ್ಯಾಹ್ನವಾದರೂ ಯಾವ ಅಧಿಕಾರಿಗಳು ಪ್ರತಿಭಟನಾಕಾರ ಬಳಿ ಆಗಮಿಸಲಿಲ್ಲ ಎಂದು ರೈತರು ತಹಸೀಲ್ದಾರ್ ಆವರಣದಲ್ಲಿ ಅಡುಗೆ ಮಾಡಿ ಅಲ್ಲಿಯೇ ಊಟ ಮಾಡಿದರು. ಜಿಲ್ಲಾಧಿಕಾರಿ ಬರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು.

    ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಶ್ರುತಿ ಮಳ್ಳಪ್ಪಗೌಡರ ಭೇಟಿ ನೀಡಿ ರೈತರೊಂದಿಗೆ ರ್ಚಚಿಸಿದರು. ಬೇಡಿಕೆಗಳ ಕುರಿತು ಒಂದು ವಾರದಲ್ಲಿ ಜಿಲ್ಲಾಧಿಕಾರಿಗಳನ್ನು ಕರೆಯಿಸಿ, ರೈತರೊಂದಿಗೆ ರ್ಚಚಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಕೈಬಿಟ್ಟರು.

    ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರವಿಕುಮಾರ ಕೊಳಲ, ಜಿಲ್ಲಾ ಗೌರವಾಧ್ಯಕ್ಷ ಪ್ರಕಾಶ ಸಜ್ಜನರ, ಮಾಬುಸಾಬ್ ಬಳ್ಳಾರಿ, ಹನುಮಂತ ಚೂರಿ, ಕೊಟೇಪ್ಪ ಚೌಡ್ಕಿ, ರಾಜಶೇಖರ ಕೊಂತನ್ನವರ, ಹನುಮಂತಪ್ಪ ಗೊಜನೂರ, ಶಿವನಗೌಡ ಪಾಟೀಲ, ಹನೀಫಸಾಬ ವಡ್ಡಟ್ಟಿ, ರವಿರಾಜಗೌಡ ಪಾಟೀಲ, ಬಸಪ್ಪ ಜಂತ್ಲಿ, ರಾಜಾಭಕ್ಷೀ ಬುಡೇನಾಯ್ಕರ, ಅಶೋಕ ಗಾಂಜಿ, ಮಲ್ಲಿಕಾರ್ಜುನಯ್ಯ ಕಲ್ಮಠ, ಮಹಾಂತಯ್ಯ ಡಂಬಳಮಠ, ಎಸ್.ಎಸ್. ಹಂಸಾಗರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts