More

    ರೈತರ ಹೊಲಗಳತ್ತ ಕೃಷಿ ತಾಂತ್ರಿಕ ಆಂದೋಲನ ತಂಡಗಳು

    ಬೆಳಗಾವಿ: ಮಳೆಯಾಶ್ರಿತ ಪ್ರದೇಶದ ರೈತರ ಆದಾಯ ವೃದ್ಧಿಸಲು, ಖರ್ಚು-ವೆಚ್ಚ ನಿಯಂತ್ರಿಸುವ ನಿಟ್ಟಿನಲ್ಲಿ ರೈತರಿಗೆ ಅರಿವು ಮೂಡಿಸಲು ಕೃಷಿ ತಾಂತ್ರಿಕ ಆಂದೋಲನ ತಂಡಗಳು ಕೃಷಿ ಜಮೀನುಗಳತ್ತ ಮುಖ ಮಾಡಿವೆ. ಹಲವು ಸಮಸ್ಯೆಗಳಿಂದ ಹೈರಾಣಾಗಿರುವ ರೈತರು ಕೃಷಿಯಿಂದ ವಿಮುಖರಾಗುತ್ತಿರುವುದನ್ನು ತಪ್ಪಿಸಲು, ಅವರಲ್ಲಿ ಕೃಷಿಯೆಡೆಗಿನ ಸಹಜ ತುಡಿತ ಜೀವಂತ ಇಡಲು ಈ ತಂಡಗಳು ಶ್ರಮಿಸುತ್ತಿವೆ.

    ನಾಲ್ಕೈದು ವರ್ಷಗಳ ಅವಧಿಯಲ್ಲಿ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಸಂಭವಿಸಿದ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ 4.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿತ್ತು. ಸುಮಾರು 2 ಸಾವಿರ ಕೋಟಿ ರೂ. ನಷ್ಟ ಸಂಭವಿಸಿದ್ದರೂ ಸೂಕ್ತ ಪರಿಹಾರ ಸಿಗದೆ ಸಣ್ಣ ಮತ್ತು ಮಧ್ಯಮ ರೈತರು ಕೃಷಿ ಚಟುವಟಿಕೆಗಳಿಂದ ದೂರ ಉಳಿಯುತ್ತಿದ್ದಾರೆ.

    ಇಲಾಖೆಯ ಪ್ರಥಮ ಹೆಜ್ಜೆ: ಲಕ್ಷಾಂತರ ರೈತರು ಆದಾಯ ಇಲ್ಲದೆ, ಬೆಳೆಹಾನಿಯಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೆಲ ರೈತರು ಹಂಗಾಮಿನಲ್ಲಿ ಬಿತ್ತನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇಂತಹ ರೈತರು ಕೃಷಿ ಚಟುವಟಿಕೆಗಳಿಂದ ದೂರ ಉಳಿಯಬಾರದು. ಕೃಷಿ ತಾಂತ್ರಿಕತೆ ಅಳವಡಿಸಿಕೊಂಡು ಕಡಿಮೆ ಸಮಯ, ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಆದಾಯ ಗಳಿಸುವ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯುವ ಮೊದಲ ಬಾರಿಗೆ ಕೃಷಿ ವಿಜ್ಞಾನಿಗಳು, ನುರಿತ ಕೃಷಿ ಅಧಿಕಾರಿಗಳು, ಸಾಧಕ ರೈತರ ಒಳಗೊಂಡ ತಂಡ ರಚಿಸಿ ಕೃಷಿ ತಾಂತ್ರಿಕ ಪ್ರಚಾರ ಆಂದೋಲನ ನಡೆಸಲು ನಿರ್ಧರಿಸಿದೆ.

    ಕೃಷಿಯತ್ತ ಆಕರ್ಷಣೆ: ಪ್ರತಿವರ್ಷವೂ ಭೂಮಿಯ ತೇವಾಂಶದ ಆಧಾರದ ಮೇಲೆ ರೈತರು ವಿವಿಧ ಬೆಳೆ ಬೆಳೆಯುತ್ತಾರೆ. ಮುಂಗಾರು ಹಂಗಾಮಿನಲ್ಲಿ 4.60 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ, ಹೆಸರು, ಅವರೆ, ಮೆಕ್ಕೆಜೋಳ, ಸೂರ್ಯಕಾಂತಿ, ಸಜ್ಜೆ, ಸೋಯಾಬೀನ್, ಭತ್ತ, ರಾಗಿ ಬೆಳೆಗಳು ಮತ್ತು ಹಿಂಗಾರು ಹಂಗಾಮಿನಲ್ಲಿ 3.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜೋಳ, ಗೋಧಿ, ಕಡಲೆ, ಸೂರ್ಯಕಾಂತಿ ಸೇರಿ ಇತರ ಬೆಳೆ ಬೆಳೆಯುತ್ತಿದ್ದಾರೆ. ಆದರೆ, ಹವಾಮಾನ ವೈಪರೀತ್ಯದಿಂದಾಗಿ ಬೆಳೆಗಳು ಹಾನಿಯಾಗುತ್ತಿವೆ. ಇದರಿಂದ ರೈತರು ಕೃಷಿಯಿಂದ ದೂರ ಸರಿಯುವಂತಾಗಿದ್ದು, ಈ ದಿಢೀರ್ ಅಸಮತೋಲನ ತಪ್ಪಿಸಲು ಕೃಷಿ ಇಲಾಖೆ ತಂಡಗಳು ಕಾರ್ಯ ನಿರ್ವಹಿಸುತ್ತಿವೆ.

    ರೈತರಿಗೆ ತಿಳಿವಳಿಕೆ: ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಬೆಳೆಗಳನ್ನು ಮಣ್ಣಿನ ಫಲವತ್ತತೆ ಆಧಾರದ ಮೇಲೆ ಬಿತ್ತನೆ ಮಾಡಬೇಕು. ಗೊಬ್ಬರ ಯಾವ ಪ್ರಮಾಣದಲ್ಲಿ ಬಳಕೆ ಮಾಡಬೇಕು? ತಾಂತ್ರಿಕತೆ ಅಳವಡಿಸಿಕೊಂಡು ಕಡಿಮೆ ಶ್ರಮದಲ್ಲಿ ಹೆಚ್ಚಿನ ಆದಾಯ ಗಳಿಸಬೇಕು ಎಂಬ ಬಗ್ಗೆ ರೈತರಲ್ಲಿ ತಿಳಿವಳಿಕೆ ನೀಡಲು ಆಂದೋಲನ ನಡೆಸಲಾಗುತ್ತಿದೆ. ಪ್ರತಿ ತಾಲೂಕಿನಲ್ಲಿ ಕೃಷಿ ವಿಜ್ಞಾನಿ, ಅಧಿಕಾರಿಗಳು, ಪಗ್ರತಿ ರೈತರನ್ನು ಒಳಗೊಂಡಂತೆ 30 ತಂಡ ರಚಿಸಿಕೊಂಡು ರೈತರ ಜಮೀನುಗಳಿಗೆ ಭೇಟಿ ನೀಡಿ ಅರಿವು ಮೂಡಿಸಲಿದ್ದಾರೆ ಎಂದು ಕೃಷಿ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಎಚ್.ಕೊಳೇಕರ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಬಿತ್ತನೆಯಲ್ಲಿ ತೊಡಗಿರುವ ರೈತರಲ್ಲಿ ಬಿತ್ತನೆ ಬೀಜ, ಗೊಬ್ಬರ, ಮಣ್ಣಿನ ಗುಣಮಟ್ಟದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಕೃಷಿ ಚಟುವಟಿಕೆಗಳಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಅರಿವು ಮೂಡಿಸಲು ಹಳ್ಳಿಗಳಿಗೆ ಹೋಗಿ ಪ್ರಚಾರ ನಡೆಸಲಾಗುತ್ತಿದೆ. ರೈತರು ಸದುಪಯೋಗ ಮಾಡಿಕೊಳ್ಳಬೇಕು.
    | ಶಿವನಗೌಡ ಪಾಟೀಲ ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts