More

    ಉಳ್ಳಾಗಡ್ಡಿ ಉಳಿಸಿಕೊಳ್ಳುವುದೇ ಸವಾಲು!

    ವಿಜಯವಾಣಿ ವಿಶೇಷ ರಾಣೆಬೆನ್ನೂರ

    ತಾಲೂಕಿನಲ್ಲಿ ನಿತ್ಯ ರಾತ್ರಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಉಳ್ಳಾಗಡ್ಡಿ ಬೆಳೆ ಉಳಿಸಿಕೊಳ್ಳುವ ದೊಡ್ಡ ಸವಾಲು ರೈತರಿಗೆ ಎದುರಾಗಿದೆ.

    ಈಗಾಗಲೇ ಗಡ್ಡೆ ಕಟ್ಟಿರುವ ಉಳ್ಳಾಗಡ್ಡಿಯನ್ನು ರೈತರು ಕಿತ್ತು ಗೂಡು ಹಾಕುವ ಮೂಲಕ ಬೆಳೆ ಒಣಗಿಸಲು ಮುಂದಾಗಿದ್ದಾರೆ. ಆದರೆ, ಕಳೆದ ವಾರದಿಂದ ಮಳೆಯು ಹಗಲಿನಲ್ಲಿ ಜಿಟಿಜಿಟಿಯಾಗಿ ಸುರಿದರೆ, ರಾತ್ರಿ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸುರಿಯುತ್ತಿದೆ. ಹೀಗಾಗಿ, ಮಳೆಯಿಂದ ಉಳ್ಳಾಗಡ್ಡಿಯನ್ನು ರಕ್ಷಿಸಿಕೊಳ್ಳದಿದ್ದರೆ, ರೈತರ ಬಾಳು ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಸ್ಥಿತಿಗೆ ತಲುಪಲಿದೆ.

    ಕೊಳೆಯುವ ಭೀತಿ: ತಾಲೂಕಿನ ಹಲಗೇರಿ, ಕುಪ್ಪೇಲೂರ, ಗಂಗಾಪುರ, ಯರೇಕುಪ್ಪಿ, ಉಕ್ಕುಂದ, ಸರ್ವಂದ, ವಿವಿಧ ಗ್ರಾಮಗಳ ರೈತರು ಈ ಬಾರಿ 10 ಸಾವಿರ ಹೆಕ್ಟೇರ್​ನಷ್ಟು ಉಳ್ಳಾಗಡ್ಡಿ ಬೆಳೆದಿದ್ದಾರೆ. ಆರಂಭದ ದಿನದಲ್ಲಿ ಉತ್ತಮ ಮಳೆಯಾದ ಕಾರಣ ಉಳ್ಳಾಗಡ್ಡಿ ಕೂಡ ಚೆನ್ನಾಗಿ ಬೆಳೆದಿದೆ. ಜೂನ್-ಜುಲೈನಲ್ಲಿ ಹೆಚ್ಚಿನ ಮಳೆಯಾದ ಕಾರಣ ರೈತರು ಔಷಧ, ಗೊಬ್ಬರ ಒದಗಿಸಿ ಹಗಲು-ರಾತ್ರಿ ಎನ್ನದೆ ದುಡಿದು ಉಳ್ಳಾಗಡ್ಡಿಯನ್ನು ಉಳಿಸಿಕೊಂಡಿದ್ದಾರೆ.

    ಸದ್ಯ ಗೂಡು ಹಾಕಿರುವ ಉಳ್ಳಾಗಡ್ಡಿಗೆ ಬಿಸಿಲಿನ ಅವಶ್ಯಕತೆಯಿದೆ. ಆದರೀಗ ಮತ್ತೆ ನಿರಂತರ ಮಳೆಯಾಗುತ್ತಿರುವ ಕಾರಣ ಅಲ್ಲಲ್ಲಿ ರೈತರು ಹಾಕಿದ್ದ ಗೂಡುಗಳು ನೆಲಕ್ಕುರುಳುತ್ತಿವೆ. ಮತ್ತೊಂದೆಡೆ ತೇವಾಂಶ ಹೆಚ್ಚಳವಾಗಿ ಉಳ್ಳಾಗಡ್ಡಿ ಕೊಳೆಯುವ ಭೀತಿ ಎದುರಾಗಿದೆ. ಮಳೆ ಇದೇ ರೀತಿ ಮುಂದುವರಿದರೆ ಸಂಪೂರ್ಣ ಬೆಳೆ ನಾಶವಾಗುವ ಸಾಧ್ಯತೆಯಿದೆ ಎಂಬುದು ರೈತರ ಅಳಲು.

    ಸದ್ಯ ಮಾರುಕಟ್ಟೆಯಲ್ಲಿಲ್ಲ ಬೆಲೆ: 2019 ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಮಹಾರಾಷ್ಟ್ರದ ನಾಸಿಕ್ ಸೇರಿ ವಿವಿಧೆಡೆ ನೆರೆ ಹಾವಳಿ ಉಂಟಾದ ಕಾರಣ ಉಳ್ಳಾಗಡ್ಡಿಗೆ ಭಾರಿ ಡಿಮ್ಯಾಂಡ್ ಬಂದಿತ್ತು. ಕಳೆದ ವರ್ಷ ಎಪಿಎಂಸಿ ಮಾರುಕಟ್ಟೆಯಲ್ಲಿ 1 ಕ್ವಿಂಟಾಲ್ ಉಳ್ಳಾಗಡ್ಡಿಗೆ 5ರಿಂದ 8 ಸಾವಿರ ರೂ.ವರೆಗೂ ಬೆಲೆಯಿತ್ತು. ರೈತರು ಅತಿವೃಷ್ಟಿ ನಡುವೆಯೂ ಉಳಿಸಿಕೊಂಡಿದ್ದ ಅಳಿದುಳಿದ ಉಳ್ಳಾಗಡ್ಡಿಯನ್ನು ಸಹ ತಂದು ಮಾರಾಟ ಮಾಡಿದ್ದರು. ಈ ಬೆಲೆ ಕೆಲವೇ ತಿಂಗಳಲ್ಲಿ 300 ರೂ.ಗೆ ಕುಸಿತ ಕಂಡಿತ್ತು. ಆದರೆ, ಸದ್ಯ 1 ಕ್ವಿಂಟಾಲ್ ಉಳ್ಳಾಗಡ್ಡಿ ಬೆಲೆ 100ರಿಂದ 1400 ರೂ.ವರೆಗೆ ಇದೆ. ಈ ಬೆಲೆಗೆ ಮಾರಾಟ ಮಾಡಿದರೆ ಬಿತ್ತನೆಗೆ ಮಾಡಿದ ಖರ್ಚು ಸಹ ಬರಲ್ಲ ಎಂಬ ಕಾರಣಕ್ಕೆ ರೈತರು ಉಳ್ಳಾಗಡ್ಡಿಯನ್ನು ಕಿತ್ತು ಗೂಡು ಹಾಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆ ಫಸಲನ್ನು ಮಳೆಯಿಂದ ಕಾಪಾಡಿಕೊಳ್ಳುವ ದೊಡ್ಡ ಸವಾಲು ರೈತರಿಗೆ ತಲೆನೋವಾಗಿ ಪರಿಣಮಿಸಿದೆ.

    ಮಳೆಯ ನಡುವೆಯೂ ಈ ಬಾರಿ ಉಳ್ಳಾಗಡ್ಡಿಯನ್ನು ಚೆನ್ನಾಗಿ ಬೆಳೆದಿದ್ದೇವೆ. ಬೆಳೆ ಸಂಪೂರ್ಣ ಗಡ್ಡೆ ಕಟ್ಟಿದ್ದು, ಒಣಗಿಸುವ ಸಲುವಾಗಿ ಕಿತ್ತು ಗೂಡು ಹಾಕಿದ್ದೇವೆ. ನಿರಂತರ ಮಳೆ ಬರುತ್ತಿರುವ ಕಾರಣ ಕೆಲವೆಡೆ ಗೂಡುಗಳು ಬೀಳುತ್ತಿವೆ. ಹೀಗಾದರೆ ಉಳ್ಳಾಗಡ್ಡಿ ಕೊಳೆತು ನಾಶವಾಗುತ್ತದೆ. ಸದ್ಯ ಮಾರಾಟ ಮಾಡಬೇಕು ಎಂದುಕೊಂಡರೆ ಮಾರುಕಟ್ಟೆಯಲ್ಲಿ ಬೆಲೆ ಕೂಡ ಇಲ್ಲ. ಮಳೆ ಕೊಂಚ ಬಿಡುವು ನೀಡಿದರೆ ಅನುಕೂಲವಾಗಲಿದೆ.

    | ಶರಣಪ್ಪ ಶೆಟ್ಟೆಪ್ಪನವರ, ಉಳ್ಳಾಗಡ್ಡಿ ಬೆಳೆಗಾರ

    ಸದ್ಯ ಉಳ್ಳಾಗಡ್ಡಿ ಹಸಿ ಇರುವ ಕಾರಣ ಮಾರುಕಟ್ಟೆಯಲ್ಲಿ ಕ್ವಿಂಟಾಲ್​ಗೆ 100ರಿಂದ 1400 ರೂ.ವರೆಗೆ ಬೆಲೆಯಿದೆ. ನಿತ್ಯ 100 ಚೀಲದಷ್ಟು ಆವಕ ಆಗುತ್ತಿದೆ. ಒಣಗಿಸಿದ ಉಳ್ಳಾಗಡ್ಡಿ ಮಾರುಕಟ್ಟೆಗೆ ಬಂದರೆ, ಕೊಂಚ ಬೆಲೆ ಏರಿಕೆಯಾಗಬಹುದು.

    | ಪರಮೇಶ ನಾಯಕ, ಎಪಿಎಂಸಿ ಸಹಾಯಕ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts