More

    ರೈತರ ಸೌಲಭ್ಯದ ಹಣ ಸಾಲಕ್ಕೆ ಜಮಾ ಮಾಡಿಕೊಳ್ಳಬೇಡಿ

    ಜಗಳೂರು: ತಾಲೂಕು ಬರಪೀಡಿತ ಪ್ರದೇಶವಾಗಿದ್ದು, ಬೆಳೆ ಕೈಗೆ ಬಾರದೆ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹಾಗಾಗಿ, ಸರ್ಕಾರದಿಂದ ಸಿಗುವ ಸೌಲಭ್ಯದ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳದೆ ಅವರಿಗೆ ಕಾಲಾವಕಾಶ ನೀಡಿ ಹಂತ ಹಂತವಾಗಿ ಸಾಲ ಮರುಪಾವತಿ ಮಾಡಿಕೊಳ್ಳಬೇಕು ಎಂದು ಕಲೀಂ ಉಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಪಟ್ಟಣದ ತಾಲೂಕು ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿವಿಧ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

    ಬಹುತೇಕ ರೈತರು ಮಳೆ ನಂಬಿ ಕೃಷಿ ಮಾಡುತ್ತಾರೆ. ಆದರೆ, ಮಳೆ ಕೊರತೆಯಿಂದ ಎಲ್ಲ ಬೆಳೆ ಹಾನಿಯಾಗಿ ರೈತರು ಸಾಲದ ಸುಳಿಯಲ್ಲಿದ್ದಾರೆ. ಇದರ ನಡುವೆ ಫೈನಾನ್ಸ್ ಕಂಪನಿಗಳು, ಬ್ಯಾಂಕ್‌ಗಳು ಬಲವಂತವಾಗಿ ಸಾಲ ವಸೂಲಿ ಮಾಡುವುದು ಸರಿಯಲ್ಲ ಎಂದರು.

    ಕೆಲವರಿಗೆೆ ವಕೀಲರಿಂದ ನೋಟಿಸ್ ಜಾರಿ ಮಾಡಿದ್ದಾರೆ ಎಂದು ರೈತರು ಈಗಾಗಲೇ ಮನವಿ ಮಾಡಿದ್ದಾರೆ. ಹಾಗಾಗಿ, ಬ್ಯಾಂಕ್ ಅಧಿಕಾರಿಗಳು ಸಹಕರಿಸಬೇಕು. ರೈತರಿಗೆ ಯಾವುದೇ ತೊಂದರೆ ಕೊಡಬಾರದು ಎಂದು ತಿಳಿಸಿದರು.

    ರೈತ ಮುಖಂಡ ಕಾನನಕಟ್ಟೆ ತಿಪ್ಪೇಸ್ವಾಮಿ ಮಾತನಾಡಿ, ಗ್ರಾಮಗಳಲ್ಲಿ ಕೆಲಸವಿಲ್ಲದೇ ರೈತರು, ಮಹಿಳೆಯರು ಮನೆಯಲ್ಲಿದ್ದಾರೆ. ನರೇಗಾದಡಿ ಕೆಲಸ ಮಾಡಿದ ಕೂಲಿ ಹಣ, ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ಪಿಂಚಣಿ ಹಣವನ್ನು ಬ್ಯಾಂಕ್‌ಗಳಲ್ಲಿ ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲ ಬ್ಯಾಂಕಿನ ಸಿಬ್ಬಂದಿ ಮನೆಗಳಿಗೆ ಹೋಗಿ ನೋಟಿಸ್ ಅಂಟಿಸಿ, ಮಹಿಳೆಯರನ್ನು ನಿಲ್ಲಿಸಿ ಪೋಟೋ ತೆಗೆದುಕೊಂಡು ಭಯದ ವಾತಾವರಣ ನಿರ್ಮಿಸುತ್ತಿದ್ದಾರೆ. ಇದರಿಂದ ಮನನೊಂದು ರೈತರು ಆತ್ಮಹತ್ಯೆ ಮಾಡಿಕೊಂಡರೆ ಯಾರು ಹೊಣೆ? ಎಂದು ಪ್ರಶ್ನಿಸಿದರು.

    ಅಣಬೂರು ಮತ್ತು ಮಲ್ಲಾಪುರ ಬ್ಯಾಂಕ್‌ಗಳು ರೈತರಿಗೆ ತುಂಬ ಕಿರಿಕಿರಿ ಮಾಡುತ್ತಿವೆ. ರೈತರ ಖಾತೆಗಳಲ್ಲಿ ಇರುವ ಸಾವಿರಾರು ರೂ. ಮತ್ತೊಬ್ಬರ ಖಾತೆಗೆ ಜಮಾ ಆಗುತ್ತಿವೆ. ನಮ್ಮ ಹಣಕ್ಕೆ ಭದ್ರತೆ ಇಲ್ಲದಿದ್ದರೆ ಹೇಗೆ? ರೈತರಿಗೆ ತೊಂದರೆ ಕೊಡಬೇಡಿ. ಅವರಿಗೇನಾದರೂ ತೊಂದರೆಯಾದರೆ ಬ್ಯಾಂಕ್‌ಗಳಿಗೆ ಬೀಗ ಹಾಕಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಕೆನರಾ ಬ್ಯಾಂಕ್ ವ್ಯವಸ್ಥಾಪಕ ಹನುಮಂತರಾಯ ಮಾತನಾಡಿ, ಗೃಹ ಮತ್ತು ವಾಹನ ಖರೀದಿ ಸಾಲ ವಸೂಲಿ ಮಾಡಲು ಮೇಲಧಿಕಾರಿಗಳಿಂದ ಒತ್ತಡವಿದೆ. ಹಾಗಾಗಿ, ಮನೆಗೆ ಹೋಗಿ ನೋಟಿಸ್ ನೀಡಲಾಗುತ್ತಿದೆ. ರೈತರಿಗೆ ತೊಂದರೆ ಕೊಟ್ಟಿಲ್ಲ. ನಮಗೂ ಮಾನವೀಯತೆ ಇದೆ. ಆದರೆ, ಕೆಲವರು ಐದಾರು ವರ್ಷಗಳಾದರೂ ಮರುಪಾವತಿ ಮಾಡುತ್ತಿಲ್ಲ. ಅಂತಹವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ನಮ್ಮ ಕರ್ತವ್ಯ ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

    ತಾಪಂ ಇಒ ಕರಿಬಸಪ್ಪ, ರೈತ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್, ನಗರ ಘಟಕದ ಅಧ್ಯಕ್ಷ ಬೈರನಾಯಕನಹಳ್ಳಿ ರಾಜು, ದಸಂಸ ಸಂಚಾಲಕ ಮಲೆಮಾಚಿಕೆರೆ ಸತೀಶ್, ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಶಿವಕುಮಾರ್, ಸತ್ಯಮೂರ್ತಿ, ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಯಶವಂತ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts