ಕೆಲ ಸಕ್ಕರೆ ಕಾರ್ಖಾನೆಗಳಿಂದ ತೂಕದಲ್ಲಿ ರೈತರಿಗೆ ಮೋಸ

2 Min Read
ಕೆಲ ಸಕ್ಕರೆ ಕಾರ್ಖಾನೆಗಳಿಂದ ತೂಕದಲ್ಲಿ ರೈತರಿಗೆ ಮೋಸ
ಸಿಂದಗಿ ಎಪಿಎಂಸಿಗೆ ಭೇಟಿ ನೀಡಿದ್ದ ಎಪಿಎಂಸಿ ಸಚಿವ ಶಿವಾನಂದ ಪಾಟೀಲ ತೂಕದ ಯಂತ್ರವನ್ನು ವೀಕ್ಷಿಸಿದರು. ಶಾಸಕ ಅಶೋಕ ಮನಗೂಳಿ, ಪುರಸಭೆ ಸದಸ್ಯ ಶಾಂತವೀರ ಬಿರಾದಾರ ಇದ್ದರು.

ಸಿಂದಗಿ: ರಾಜ್ಯದ ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿನ ಕೆಲವು ಸಕ್ಕರೆ ಕಾರ್ಖಾನೆಗಳು, ರೈತರು ತರುವ ಕಬ್ಬಿನ ತೂಕದಲ್ಲಿ ಹೆಚ್ಚಾಗಿ ಮೋಸ ಮಾಡುತ್ತಿರುವುದು ರೈತರ ದೂರುಗಳಿಂದ ಗಮನಕ್ಕೆ ಬಂದಿದ್ದು, ಇಂತಹ ಅನ್ಯಾಯವನ್ನು ಕಾರ್ಖಾನೆಗಳು ಕೂಡಲೇ ನಿಲ್ಲಿಸಬೇಕು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಎಚ್ಚರಿಕೆ ನೀಡಿದರು.

ಬುಧವಾರ ಕಲಬುರ್ಗಿಯತ್ತ ಹೊರಟಿದ್ದ ಸಚಿವರು ನಗರದ ಎಪಿಎಂಸಿಗೆ ದಿಢೀರ್ ಭೇಟಿ ನೀಡಿ, ಬೃಹತ್ ತೂಕದ ಯಂತ್ರವನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಸರ್ಕಾರ ರೈತರಿಗೆ ಕಬ್ಬಿನ ತೂಕದಲ್ಲಾಗುತ್ತಿರುವ ಮೋಸವನ್ನು ತಡೆಯಲು ಪ್ರಯತ್ನ ಮಾಡಿತು. ಆ ಹಿನ್ನೆಲೆಯಲ್ಲಿ ಕಾರ್ಖಾನೆಗಳ ಮಾಲಿಕರೇ ತೂಕದ ಯಂತ್ರವನ್ನು ನಿರ್ವಹಿಸಬೇಕು ಎಂದು ಆದೇಶ ಮಾಡಲಾಗಿತ್ತು. ಆದರೆ ಬಹಳಷ್ಟು ಕಾರ್ಖಾನೆಗಳು ಆದೇಶ ಪಾಲಿಸಲಿಲ್ಲ. ಕಳೆದ ಎರಡು ತಿಂಗಳಿಂದಲೂ ಈ ಬಗ್ಗೆ ಜಾಗ್ರತೆ ವಹಿಸಿದರೂ, ಕೆಲವರು ಮಾಡಿದರು. ಇನ್ನೂ ಕೆಲವರು ಮಾಡಲಿಲ್ಲ. ಆದರೆ, ಇಂದಿನವರೆಗೂ ತೂಕದಲ್ಲಿ ಮೋಸ ಮಾಡಲಾಗುತ್ತಿದೆ ಎಂಬ ದೂರನ್ನು ವಿಜಯಪುರ ಜಿಲ್ಲೆಯ ರೈತರು ನೀಡಿದ್ದಾರೆ ಎಂದರು.

ಕಳೆದ ಡಿ. 22ರಂದು ರಾಜ್ಯದ ಎಲ್ಲ ಎಪಿಎಂಸಿಯಲ್ಲಿನ ಬೃಹತ್ ತೂಕದ ಯಂತ್ರಗಳನ್ನು ದುರಸ್ಥಿಗೊಳಿಸಿ, ಸುಸ್ಥಿತಿಯಲ್ಲಿರಿಸಿ, ರೈತರಿಗೆ ಉಚಿತವಾಗಿ ಕಬ್ಬಿನ ಬೆಳೆಯ ನಿಖರ ತೂಕವನ್ನು ನಿರ್ವಹಿಸಲು ಸೂಚಿಸಲಾಗಿತ್ತು. ಆದರೆ ಕೆಲವೆಡೆ ಅಧಿಕಾರಿಗಳು ಸುಸ್ಥಿತಿಯಲ್ಲಿಟ್ಟರೆ, ಕೆಲವೆಡೆ ಇಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಸಿಂದಗಿ ಎಪಿಎಂಸಿ ಆವರಣದಲ್ಲಿನ ತೂಕದ ಯಂತ್ರವು ಯಾವುದೇ ದುರಸ್ಥಿಗೊಳಗಾಗಿಲ್ಲ. ಹೀಗಾಗಿ ಇಲ್ಲಿನ ಕಾರ್ಯದರ್ಶಿ ಬಸವರಾಜ ಜುಮನಾಳ ಅವರನ್ನು ಅಮಾನತು ಮಾಡುವಂತೆ ಕೃಷಿ ಮಾರುಕಟ್ಟೆ ಇಲಾಖೆಯ ನಿರ್ದೇಶಕ ಗಂಗಾಧರಸ್ವಾಮಿ ಜೆ.ಎಂ. ಅವರಿಗೆ ದೂರವಾಣಿ ಮೂಲಕ ಸೂಚಿಸಿ ಅಮಾನತುಗೊಳಿಸಲಾಗಿದೆ ಎಂದರು.

See also  ಹೊರಗಿನಿಂದ ಬಂದವರ ಮಾಹಿತಿ ಕಡ್ಡಾಯ

ರಾಜ್ಯದ ರೈತರಲ್ಲಿ ಸರ್ಕಾರದ್ದೊಂದು ಮನವಿಯಿದೆ. ಕಾರ್ಖಾನೆಗಳು ತೂಕದಲ್ಲಿ ಮೋಸ ಮಾಡುತ್ತಿರುವ ಬಗ್ಗೆ ಆರೋಪಿಸದೇ, ಮನವಿ ನೀಡದೇ, ರೈತರು ಎಪಿಎಂಸಿ ಅಥವಾ ಖಾಸಗಿಯಾಗಿ ಕಬ್ಬಿನ ಬೆಳೆಯನ್ನು ತೂಕ ಮಾಡಿಸಿ, ಕಾರ್ಖಾನೆಗಳಲ್ಲೂ ತೂಕ ಮಾಡಿಸಿ, ಅಲ್ಲಿ ಬರುವ ವ್ಯತ್ಯಾಸದ ಪಾವತಿಗಳನ್ನು ರೈತರು ಖುದ್ದಾಗಿ ದೂರಿನೊಂದಿಗೆ ಸರ್ಕಾರಕ್ಕೆ, ನನಗೆ ಸಲ್ಲಿಸಿದರೆ, ಅದನ್ನು ಪರಿಶೀಲಿಸಿ, ರೈತರಿಗೆ ಮೋಸ ಮಾಡುವ ಕಾರ್ಖಾನೆಗಳಲ್ಲಿ ಈ ವರ್ಷದ ಕಬ್ಬು ನುರಿಸುವ ಪರವಾನಿಗೆಯನ್ನು ನಿಷೇಧಿಸುವುದರ ಜತೆಗೆ ಜುಲ್ಮಾನೆಯೊಂದಿಗೆ ಕಾರಾಗೃಹ ಸಜೆಯನ್ನು ವಿಧಿಸಲು ಅವಕಾಶವಿದೆ. ಅನ್ಯಾಯವೆಸಗುವ ಕಾರ್ಖಾನೆ ಹಾಗೂ ಮಾಲೀಕರಿಗೆ ಬಿಸಿ ಮುಟ್ಟಿಸಲಾಗುವುದು ಎಂದರು.

ಶಾಸಕ ಅಶೋಕ ಮನಗೂಳಿ, ಪುರಸಭೆ ಸದಸ್ಯ ಶಾಂತವೀರ ಬಿರಾದಾರ ಇತರರಿದ್ದರು.

Share This Article