More

    ರೈತ ಸಂಪರ್ಕ ಕೇಂದ್ರ ಕಟ್ಟಡ ಕಳಪೆ

    ತುರುವೇಕೆರೆ: ದೆಬ್ಬೇಘಟ್ಟ ಹೋಬಳಿ ರೈತ ಸಂಪರ್ಕ ಕೇಂದ್ರ ಕಟ್ಟಡ ಕಳಪೆಯಾಗಿದೆ, ಹೀಗಾಗಿ ಕಟ್ಟಡ ಉದ್ಘಾಟಿಸಬೇಡಿ ಎಂದು ರೈತ ಸಂಘದ ಕಾರ್ಯಕರ್ತರು ಹಾಗೂ ಹಲವು ರೈತರು ಶಾಸಕ ಮಸಾಲಜಯರಾಂಗೆ ಮನವಿ ಮಾಡಿದರು.

    ಪಂಚಾಯತ್ ರಾಜ್ ಇಲಾಖೆಯಿಂದ 45 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು ಸೋಮವಾರ ಉದ್ಘಾಟನೆ ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನೆಗೆ ಆಗಮಿಸಿದ ಶಾಸಕ ಮಸಾಲಜಯರಾಂ ಜತೆ ಈ ಭಾಗದ ರೈತರು ಹಾಗೂ ರೈತ ಸಂಘದ ಪದಾಧಿಕಾರಿಗಳು ಮಾತನಾಡಿ, ರೈತ ಸಂಪರ್ಕ ಕೇಂದ್ರ ಕಟ್ಟಡ ಕಳಪೆಯಾಗಿದೆ. ಮಳೆ ಬಂದರೆ ಕಟ್ಟಡದೊಳಗೆ ನೀರು ನಿಲ್ಲುತ್ತದೆ. ಕೃಷಿ ಇಲಾಖೆ ಬಿತ್ತನೆ ಬೀಜ ದಾಸ್ತಾನು ಮಾಡಲು ಸಾಧ್ಯವಿಲ್ಲ ಎಂದು ದೂರಿದರು.

    ಮಸಾಲ ಜಯರಾಂ ಮಾತನಾಡಿ, ಕಟ್ಟಡ ಮೇಲ್ನೋಟಕ್ಕೆ ಕಳಪೆಯಾಗಿರುವುದು ಕಂಡು ಬಂದಿದೆ. ಗುತ್ತಿಗೆದಾರ ಹಾಗೂ ಇಂಜಿನಿಯರ್ ಶಾಮೀಲಾಗಿ ಕಳಪೆ ಕಟ್ಟಡ ನಿರ್ಮಾಣ ಮಾಡಿದ್ದು, ಉನ್ನತ ಅಧಿಕಾರಿಗಳಿಂದ ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸದ್ಯ ಹೋಬಳಿ ರೈತರ ಅನುಕೂಲಕ್ಕಾಗಿ ಕೃಷಿ ಇಲಾಖೆ ಸೇವೆ ಆರಂಭಿಸಲು ಅನುವು ಮಾಡಿಕೊಡಬೇಕು ಎಂದು ರೈತರನ್ನು ಕೋರಿ ಸಾಂಕೇತಿಕವಾಗಿ ಕಟ್ಟಡ ಉದ್ಘಾಟಸಿದರು.

    ಸುಸಜ್ಜಿತ ಕಟ್ಟಡ ನಿರ್ಮಿಸಿಕೊಡಲಿ: ರೈತ ಸಂಪರ್ಕ ಕೇಂದ್ರ ಕಟ್ಟಡ ಕಳಪೆ ಕಾಮಗಾರಿಯಾಗಿದೆ ಎಂದು ರೈತರು, ಜನಪ್ರತಿನಿಧಿಗಳು ಆರೋಪಿಸಿರುವ ಕಾರಣ ಪಿಆರ್‌ಡಿ ಇಲಾಖೆಯಿಂದ ಕೃಷಿ ಇಲಾಖೆ ಸುಪರ್ದಿಗೆ ತೆಗೆದುಕೊಳ್ಳುತ್ತಿಲ್ಲ. ರೈತರ ಅನುಕೂಲಕ್ಕಾಗಿ ಕಟ್ಟಡದಲ್ಲಿ ಸೇವೆ ಪ್ರಾರಂಭಿಸಲಿದ್ದು, ಸುಸಜ್ಜಿತ ಕಟ್ಟಡ ನಿರ್ಮಿಸಿಕೊಡಲಿ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಮೋದ್ ಹೇಳಿದರು.

    ಉತ್ತರ ನೀಡದೆ ತಪ್ಪಿಸಿಕೊಂಡ ಇಂಜಿನಿಯರ್: ಕಳಪೆ ಕಟ್ಟಡ ನಿರ್ಮಾಣ ಮಾಡಿದ್ದರೂ ಕಣ್ಣು ಮುಚ್ಚಿಕೊಂಡು ಬಿಲ್ ನೀಡಿದ್ದೀರಾ, 45 ಲಕ್ಷ ರೂಪಾಯಿ ಅವ್ಯವಹಾರವಾಗಿದೆ ಎಂದು ಉದ್ಘಾಟನೆ ಆಗಮಿಸಿದ್ದ ಪಿಆರ್‌ಡಿ ಇಂಜಿನಿಯರ್ ಶೈಲಜಾ ಅವರನ್ನು ಶಾಸಕ ಮಸಾಲಜಯರಾಮ್ ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು, ಗುತ್ತಿಗೆದಾರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದರು. ಆದರೆ ಅಧಿಕಾರಿ ಉತ್ತರ ನೀಡದೇ ಸುಮ್ಮನಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts