More

    ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಗೆ ಖಂಡನೆ

    ಮೊಳಕಾಲ್ಮೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ರೈತಸಂಘದ ಪದಾಧಿಕಾರಿಗಳು ಬುಧವಾರ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.

    ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ ಮಾತನಾಡಿ, ಪ್ರತಿದಿನ ನೂರಾರು ಜನರು ವೈದ್ಯಕೀಯ ಸೇವೆ ಪಡೆದುಕೊಳ್ಳುವ ಆಸ್ಪತ್ರೆಯಲ್ಲಿ ಒಂದು ವಾರದಿಂದ ವಿದ್ಯುತ್ ವ್ಯವಸ್ಥೆ ಇಲ್ಲದಿರುವುದು ದುರಂತ ಎಂದರು.

    ಸಾರ್ವಜನಿಕ ಆಸ್ಪತ್ರೆಗಳಲ್ಲಿ ಇಂತಹ ದಯನೀಯ ಸ್ಥಿತಿ ಇರುವುದರಿಂದ ಜೀವ ಸುರಕ್ಷತೆಗೆ ಬಡವರು ದುಬಾರಿ ಹಣ ನೀಡಿ ಖಾಸಗಿ ಕ್ಲಿನಿಕ್‌ಗಳ ಮೊರೆ ಹೋಗುವಂತಾಗಿದೆ ಎಂದು ತಿಳಿಸಿದರು.

    ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಬಿ.ನಿಜಲಿಂಗಪ್ಪ ಮಾತನಾಡಿ, ರಾಜ್ಯದ ಗಡಿಯಲ್ಲಿರುವ ಮೊಳಕಾಲ್ಮೂರು ಅತ್ಯಂತ ಬರಪೀಡಿತ ತಾಲೂಕು. ಈ ಭಾಗದ ಜನರು ಜೀವನ ನಡೆಸುವುದೇ ದೊಡ್ಡ ಸವಾಲು.

    ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಸರ್ಕಾರಿ ಆಸ್ಪತ್ರೆಗಳು ಪ್ರಾಣ ಉಳಿಸುವ ದೇಗುಲ ಇದ್ದಂತೆ ವಾರದಿಂದ ಕರೆಂಟ್ ಕೈಕೊಡುತ್ತಿದ್ದರೂ ತಕ್ಷಣ ಏಕೆ ಸರಿಪಡಿಸಿಲ್ಲ ಎಂದರು.

    ವಿದ್ಯುತ್ ಅಭಾವದ ನಡುವೆ ತುರ್ತು ವೈದ್ಯಕೀಯ ಸೇವೆ ಯಾವ ರೀತಿ ಕೊಡುತ್ತೀರಾ. ಸಣ್ಣ-ಪುಟ್ಟ ಕಾಯಿಲೆಗೂ ಚಿತ್ರದುರ್ಗ, ಬಳ್ಳಾರಿ ಆಸ್ಪತ್ರೆಗೆ ಕಳುಹಿಸುವ ಪ್ರವೃತ್ತಿ ನಿಲ್ಲಬೇಕು. ಅಮಾಯಕ ಜೀವಗಳ ಜತೆ ಚೆಲ್ಲಾಟವಾಡುವುದನ್ನು ಬಿಡಬೇಕು ಎಂದು ಆಗ್ರಹಿಸಿದರು.

    ತಾಲೂಕಾಧ್ಯಕ್ಷ ರವಿಕುಮಾರ ಮಾತನಾಡಿ, ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಉಚಿತ ಸೇವೆ ಇದ್ದರೂ ಮಾತ್ರೆ, ಔಷಧ ತರಲು ವೈದ್ಯರು ಹೊರಗಡೆ ಚೀಟಿ ಬರೆದುಕೊಡುವುದು ನಿಲ್ಲಬೇಕು.

    ಅರವಳಿಕೆ ತಜ್ಞರು ಹಾಗೂ ಮಹಿಳಾ ಪ್ರಸೂತಿ ವೈದ್ಯರ ನೇಮಕವಾಗಬೇಕು. ಶುದ್ಧ ಕುಡಿವ ನೀರು, ಗುಣಮಟ್ಟದ ಹಾಲು, ಬ್ರೆಡ್ ನೀಡಬೇಕು, ಸ್ವಚ್ಛತೆಗೆ ಹೆಚ್ಚು ಒತ್ತುಕೊಡಬೇಕು ಎಂದರು.

    ರೈತಸಂಘದ ಪದಾಧಿಕಾರಿಗಳಾದ ತಿಮ್ಮಪ್ಪಯ್ಯ, ಶಿವಣ್ಣ, ಬೊಮ್ಮಣ್ಣ, ಸೂರಯ್ಯ, ಶಿವಾನಂದಪ್ಪ, ಹೇಮಣ್ಣ, ದೊಡ್ಡ ಸೂರಯ್ಯ, ಬೆಲ್ಲದ ಮಲ್ಲಯ್ಯ, ವಿಜಯಣ್ಣ, ಗೋಪಾಲ, ತಿಪ್ಪೇಸ್ವಾಮಿ ಇತರರಿದ್ದರು.

    ಆಸ್ಪತ್ರೆಯಲ್ಲಿ ಎಲ್ಲ ರೀತಿಯಲ್ಲೂ ಸಮರ್ಪಕ ವೈದ್ಯಕೀಯ ಸೇವೆ ಲಭ್ಯವಿದೆ. ವೈದ್ಯರು, ಸಿಬ್ಬಂದಿ ಹಗಲು ರಾತ್ರಿ ಎನ್ನದೆ ಜನರ ಸೇವೆ ಮಾಡುತ್ತಿದ್ದಾರೆ. ವಾರದ ಮಳೆಯ ಅವಾಂತರದಲ್ಲಿ ವಿದ್ಯುತ್ ಸಮಸ್ಯೆಯಲ್ಲೂ ರೋಗಿಗಳಿಗೆ ತೊಂದರೆ ಆಗದ ರೀತಿ ಚಿಕಿತ್ಸೆ ನೀಡಿದ್ದೇವೆ. ಸದ್ಯ ಜನರೇಟರ್ ದುರಸ್ತಿ ಆಗಿದೆ.
    ಡಾ.ಮಂಜುನಾಥ, ಆಡಳಿತಾಧಿಕಾರಿ, ಸರ್ಕಾರಿ ಆಸ್ಪತ್ರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts