More

    ಕುಟುಂಬಕ್ಕಾಗಿ ಶಾಲೆ ಬಿಟ್ಟ ವಿದ್ಯಾರ್ಥಿ!

    ಘಟಪ್ರಭಾ: ಪಟ್ಟಣದ ಎಸ್‌ಡಿಟಿ ಬಾಲಕರ ಪ್ರೌಢಶಾಲೆಗೆ ಶನಿವಾರ ಅನಿರೀಕ್ಷಿತವಾಗಿ ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ. ಬಳಗಾರ ಭೇಟಿ ನೀಡಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಯ ಮಾರ್ಗದರ್ಶನಕ್ಕೆ ಸೂಕ್ತ ಕ್ರಮ ಸೂಚಿಸಿದರು.

    ಈ ವೇಳೆ ಧೂಪದಾಳ ಗ್ರಾಮದ ಮಣಿಕಂಠ ಗಾಡಿವಡ್ಡರ ಎಂಬ ವಿದ್ಯಾರ್ಥಿ ದೀರ್ಘಾವಧಿಗೆ ಶಾಲೆಗೆ ಗೈರು ಆಗಿರುವುದು ಅವರ ಗಮನಕ್ಕೆ ಬಂತು. ಕೂಡಲೇ ಬಿಇಒ ಬಳಗಾರ ಅವರು ವಿದ್ಯಾರ್ಥಿ ಮಣಿಕಂಠ ಶಾಲೆಗೆ ಗೈರಾಗಲು ಕಾರಣವೇನು ಎಂದು ತಿಳಿದುಕೊಳ್ಳಲು ಧೂಪದಾಳ ಗ್ರಾಮಕ್ಕೆ ಭೇಟಿ ನೀಡಿದರು.

    ಸವಾಲಾದ ಕುಟುಂಬ ನಿರ್ವಹಣೆ: ಮಣಿಕಂಠನ ತಂದೆ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದು, ಆತನ ತಾಯಿ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾಳೆ. ಹೀಗಾಗಿ ತಾಯಿಯ ಔಷಧೋಪಚಾರಕ್ಕಾಗಿ ತಾಯಿ ಹಾಗೂ ಮಗ ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ. ಅವರ ಮನೆಯ ಕಷ್ಟಕರ ಪರಿಸ್ಥಿತಿ ಮನಗಂಡ ಬಿಇಒ, ಆತನ ತಾಯಿಗೆ ಔಷಧೋಪಚಾರಕ್ಕೆ ತಕ್ಷಣ 5 ಸಾವಿರ ರೂ. ನೀಡಿ ಮಾನವೀಯತೆ ಮೆರೆದರು. ವಿದ್ಯಾರ್ಥಿಯನ್ನು ಈ ಕ್ಷಣದಿಂದ ಶಾಲೆಗೆ ಕಳುಹಿಸುವಂತೆ ತಾಯಿಯಲ್ಲಿ ವಿನಂತಿಸಿಕೊಂಡಿದರು. ಅಲ್ಲದೆ, ಮಣಿಕಂಠ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದಿಂದ ಪಾಸಾದರೆ ಮುಂದಿನ ಶೈಕ್ಷಣಿಕ ಅಭ್ಯಾಸಕ್ಕೆ ಬೇಕಾಗುವ ನೆರವು ನೀಡುವುದಾಗಿ ಭರವಸೆ ನೀಡಿದರು.

    ಬಿಇಒ ಅವರ ಸಲಹೆ ಒಪ್ಪಿದ ತಾಯಿ, ಕೂಡಲೇ ಮಗನನ್ನು ಶಾಲೆಗೆ ಕಳುಹಿಸಿ ಕೊಟ್ಟಳು. ಅಲ್ಲದೆ, ಮುಂದೆ ಒಂದು ದಿನವೂ ಮಗ ಶಾಲೆ ಬಿಡದ ಹಾಗೆ ನೋಡಿಕೊಳ್ಳುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಿಕ್ಷಕರಿಗೆ ತಾಯಿ ಭರವಸೆ ನೀಡಿದಳು. ಜಿ.ಆರ್. ಮಾಳಗಿ, ಜೆ.ಸಿ. ಮಠಪತಿ, ಭರಮಪ್ಪ ಕರಿಗಾರ, ಸಿಆರ್‌ಪಿ ರಮೇಶ ಕೋಲಕಾರ ಹಾಗೂ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts