More

    ಪೊಲೀಸರ ಹೆಸರಲ್ಲಿ ವಂಚಿಸ್ತಾರೆ, ಜೋಕೆ!

    ಮಂಗಳೂರು/ಉಡುಪಿ: ಕರಾವಳಿಯಲ್ಲಿ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಗಳನ್ನು ಸೃಷ್ಟಿಸಿ ವಂಚನೆಗೆ ಯತ್ನಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.
    ಮಂಗಳೂರು ಸಂಚಾರ ವಿಭಾಗದ ಎಸಿಪಿ ನಟರಾಜ್, ಕರಾವಳಿ ಕಾವಲು ಪೊಲೀಸ್ ಎಸ್‌ಪಿ ಚೇತನ್ ಆರ್, ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ, ಬಂಟ್ವಾಳ ಗ್ರಾಮಾಂತರ ಪಿಎಸ್‌ಐ ಪ್ರಸನ್ನ, ಮೈಸೂರಿನ ಲಷ್ಕರ್ ಠಾಣೆಯ ಇನ್ಸ್‌ಪೆಕ್ಟರ್ ಕಡಬ ಮೂಲದ ಸುರೇಶ್ ಕುಮಾರ್ ಮತ್ತಿತರ ಅಧಿಕಾರಿಗಳ ಫೋಟೊ, ಹೆಸರು ಬಳಸಿ ವಂಚನೆಗೆ ಯತ್ನಿಸಲಾಗಿದೆ.

    ವಂಚಕರು ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಮೆಸೆಂಜರ್ ಮೂಲಕ ಪರಿಚಯಸ್ಥರು, ಗೆಳೆಯರೊಂದಿಗೆ ಇಂಗ್ಲಿಷ್, ಹಿಂದಿಯಲ್ಲಿ ಚಾಟ್ ಮಾಡಿ ತುರ್ತು ಅಗತ್ಯದ ಕಾರಣ ಹೇಳಿ ಹಣ ಕೇಳುತ್ತಾರೆ.
    ಚೇತನ್ ಅವರ ಫೋಟೋ ಮತ್ತು ಹುದ್ದೆ ನಮೂದಿಸಿ, ಎಸ್.ಪಿ. ಸಿಂಗ್ ಎಂಬ ಹೆಸರಿನ ಖಾತೆ ತೆರೆಯಲಾಗಿದ್ದು, ಅರ್ಧ ಗಂಟೆಯಲ್ಲಿ ಎಸ್ಪಿ ಚೇತನ್ ಕುಮಾರ್ ಅವರಿಗೆ ಮಾಹಿತಿ ಲಭಿಸಿದೆ. ಕೂಡಲೇ ಸ್ಥಳೀಯ ಮತ್ತು ಬೆಂಗಳೂರು ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ. ಫೇಸ್‌ಬುಕ್ ಟೀಮ್‌ಗೂ ದೂರು ನೀಡಿದ್ದಾರೆ. ಇನ್ನು ಎಸಿಪಿ ನಟರಾಜ್ ಹೆಸರಿನಲ್ಲಿ ಖಾತೆ ತೆರೆದು ಹಲವರಿಗೆ ಸಂದೇಶವನ್ನೂ ಕಳುಹಿಸಲಾಗಿದೆ.
    ಮೃತಪಟ್ಟವರ ಹೆಸರಲ್ಲೂ ಖಾತೆ: ಇತ್ತೀಚೆಗೆ ಮೃತಪಟ್ಟ ಬಂದರು ಠಾಣೆ ಹೆಡ್ ಕಾನ್‌ಸ್ಟೆಬಲ್ ದಿನೇಶ್ ಕುಮಾರ್ ಹೆಸರಲ್ಲೂ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ಗೆಳೆಯರಿಂದ ಹಣ ಕೇಳಲಾಗಿದೆ. ಹಿಂದಿಯಲ್ಲೇ ಸಂದೇಶಗಳನ್ನು ಕಳುಹಿಸಲಾಗಿದ್ದು, ಸಂಶಯಗೊಂಡ ಗೆಳೆಯರು ವಿಚಾರಿಸಿದಾಗ ವಂಚನೆಗೆ ಯತ್ನಿಸಿರುವುದು ಗೊತ್ತಾಗಿದೆ.

    ಎಚ್ಚರಿಕೆ ವಹಿಸಲು ಎಸ್ಪಿ ಸೂಚನೆ: ಪೊಲೀಸ್ ಅಧಿಕಾರಿಗಳು, ರಾಜಕೀಯ ಮುಖಂಡರು, ಸಾರ್ವಜನಿಕರ ಫೇಸ್‌ಬುಕ್/ಇನ್‌ಸ್ಟಾಗ್ರಾಂ ಖಾತೆಗಳಲ್ಲಿರುವ ಮೂಲ ಡಿಪಿ, ಫೋಟೊಗಳನ್ನು ಬಳಸಿ ನಕಲಿ ಖಾತೆ ತೆರೆದು ಗೆಳೆಯರಿಗೆ ಫ್ರೆಂಡ್ ರಿಕ್ವೆಸ್ಟ್, ಭಾವನಾತ್ಮಕ ಸಂದೇಶ ಕಳುಹಿಸಿ ಹಣ ವರ್ಗಾಯಿಸುವಂತೆ ಕೋರುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಇಂತಹ ಸೈಬರ್ ವಂಚಕರ ಬಗ್ಗೆ ಸಾರ್ವಜನಿಕರು ಜಾಗರೂಕರಾಗಿರಬೇಕು. ಖಾತ್ರಿ ಮಾಡಿಕೊಳ್ಳದೆ ಹಣ ವರ್ಗಾವಣೆ ಮಾಡಬಾರದು ಎಂದು ದಕ್ಷಿಣ ಕನ್ನಡ ಎಸ್‌ಪಿ ಬಿ.ಎಂ. ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ. ಪ್ರೊಫೈಲ್ ಪಿಕ್ಚರ್‌ನ್ನು ಕಾಪಿ, ಡೌನ್‌ಲೋಡ್ ಮಾಡಲು ಆಗದಂತೆ ಲಾಕ್ ಮಾಡಿಟ್ಟುಕೊಳ್ಳಬೇಕು. ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲಿರುವ ಮಾಹಿತಿ ಸಾರ್ವಜನಿಕವಾಗಿ ದೊರಕದಂತೆ ಪ್ರೈವೆಸಿ ಸೆಟ್ಟಿಂಗ್ ಮುಖಾಂತರ ಹೈಡ್ ಮಾಡಿ ಖಾತೆ ಬಳಸಿ. ಹಣದ ಬೇಡಿಕೆ ಇಟ್ಟಾಗ ಪೊಲೀಸ್ ಠಾಣೆ, ಸೆನ್ ಅಪರಾಧ ಠಾಣೆಯನ್ನು ಸಂಪರ್ಕಿಸಬೇಕು ಎಂದು ಸೂಚಿಸಿದ್ದಾರೆ.

    ಯುವತಿ ಹೆಸರಿನಲ್ಲಿ ವಂಚನೆ: ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಯುವತಿಯಿಂದಾಗಿ ಉಡುಪಿಯ ಯುವಕನೊಬ್ಬ 58 ಸಾವಿರ ರೂ. ಕಳೆದುಕೊಂಡಿದ್ದಾನೆ.
    ನಾಗೂರು ನಿವಾಸಿ ನಾಗರಾಜ ಪೂಜಾರಿ ಎಂಬುವರನ್ನು ಬೆರ್ನಿಟ್ ವಿನ್ಸೆಂಟ್ ಎಂಬಾಕೆ ತಾನು ಲಂಡನ್ ಡಬ್ಲೂೃಎಚ್‌ಒ ಸಂಸ್ಥೆ ಉದ್ಯೋಗಿ ಎಂದು ಹೇಳಿಕೊಂಡು ಪರಿಚಯ ಮಾಡಿಕೊಂಡಿದ್ದಳು. ಬಳಿಕ ವಾಟ್ಸಾೃಪ್ ಚಾಟಿಂಗ್ ನಡೆಸಿ, ಭಾರತಕ್ಕೆ ಬಂದು ಹೂಡಿಕೆ ಮಾಡುವುದಾಗಿ ನಂಬಿಸಿದ್ದಳು. ಸೆ.15ರಂದು ಅಪರಿಚಿತ ವ್ಯಕ್ತಿ ತಾನು ದೆಹಲಿ ಏರ್‌ಪೋರ್ಟ್‌ನ ಅಧಿಕಾರಿ ಎಂದು ಕರೆ ಮಾಡಿ ಬೆರ್ನಿಟ್ ಅವರ ಡಿ.ಡಿ.ಯ ರಿಜಿಸ್ಟ್ರೇಶನ್ ಬಾಬ್ತು 58,800 ರೂ. ದೆಹಲಿಯ ಐಡಿಬಿಐ ಬ್ಯಾಂಕ್‌ನ ಖಾತೆಗೆ ಜಮೆ ಮಾಡಲು ತಿಳಿಸಿದ್ದ. ನಂಬಿದ ನಾಗೇಶ್ ಹಣ ವರ್ಗಾವಣೆ ಮಾಡಿದ್ದರು. ಪುನಃ ಕರೆ ಮಾಡಿ ಕೋವಿಡ್ ಟೆಸ್ಟ್‌ಗಾಗಿ 45,500 ರೂ. ಪಾವತಿಸುವಂತೆ ತಿಳಿಸಿದ್ದಾನೆ. ಇದು ಮೋಸದ ಜಾಲವೆಂದು ಮನವರಿಕೆಯಾದ ಬಳಿಕ ನಾಗೇಶ್ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts