More

    ರಾಜ್ಯಕ್ಕೆ ಖೋಟಾ ಕರೆನ್ಸಿ ಕಾಟ: ನಕಲಿ ನೋಟು ಹಾವಳಿ 4 ಪಟ್ಟು ಹೆಚ್ಚಳ, ಕರ್ನಾಟಕಕ್ಕೆ 2ನೇ ಸ್ಥಾನ

    | ಕೀರ್ತಿನಾರಾಯಣ ಸಿ. ಬೆಂಗಳೂರು

    ಕಪ್ಪುಹಣ, ಖೋಟಾನೋಟು ದಂಧೆಗೆ ಕಡಿವಾಣ ಹಾಕುವ ಉದ್ದೇಶದಿಂದ 2016ರಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ನೋಟು ಅಮಾನ್ಯೀಕರಣದ ನಿರ್ಧಾರದ ಬಳಿಕವೂ ದೇಶದಲ್ಲಿ ನಕಲಿ ಕರೆನ್ಸಿಯ ಕಳ್ಳಾಟ ಎರಡರಿಂದ ಮೂರು ಪಟ್ಟು ಹೆಚ್ಚಾಗಿದೆ! ಗುಜರಾತ್ ನಕಲಿ ನೋಟು ಹೆಚ್ಚು ಪತ್ತೆಯಾದ ರಾಜ್ಯಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ ಕರ್ನಾಟಕ 2ನೇ ಸ್ಥಾನದಲ್ಲಿದೆ. ಭಯೋತ್ಪಾದನೆ ಮೂಲಕ ಭಾರತದಲ್ಲಿ ಅಶಾಂತಿ ಎಬ್ಬಿಸಲು ಹವಣಿಸುವ ಪಾಕಿಸ್ತಾನ ಕಳ್ಳನೋಟು ತಯಾರಿಸಿ ಭಾರತದಲ್ಲಿ ಚಲಾವಣೆ ಮಾಡುವ ಕುಕೃತ್ಯ ಮುಂದುವರಿಸಿ ರುವುದನ್ನು ತನಿಖಾ ಸಂಸ್ಥೆಗಳು ಪತ್ತೆಹಚ್ಚಿವೆ. 2016ರ ನ.8ರಂದು ಕೇಂದ್ರ ಸರ್ಕಾರ 500, 1000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣಗೊಳಿಸಿತು. ಇದಾದ 4 ವರ್ಷದ ಅವಧಿಯಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು, ಸ್ಥಳೀಯ ಪೊಲೀಸರು ದೇಶಾದ್ಯಂತ 103 ಕೋಟಿ ರೂ. ಮೌಲ್ಯದ ಖೋಟಾ ನೋಟುಗಳನ್ನು ಜಪ್ತಿ ಮಾಡಿದ್ದಾರೆ. ನೋಟು ಅಮಾನ್ಯೀಕರಣಕ್ಕೂ ಮುಂಚೆಗೆ ಹೋಲಿಸಿದರೆ ಜಪ್ತಿಯಾಗಿರುವ ನಕಲಿ ನೋಟಿನ ಪ್ರಮಾಣ 3 ಪಟ್ಟು ಏರಿಕೆಯಾಗಿದೆ.

    ಬ್ಯಾಂಕ್​ಗಳಿಗೂ ಕಾಟ: ಆರ್​ಬಿಐ ವರದಿ ಪ್ರಕಾರ ಬ್ಯಾಂಕ್​ಗಳಲ್ಲಿ ಸ್ವೀಕರಿಸಿರುವ ಹಣದಲ್ಲೂ ಕಳ್ಳನೋಟಿನ ಪ್ರಮಾಣ ಹೆಚ್ಚಾಗಿದೆ. ಇದರಲ್ಲಿ 500 ರೂ. ಮುಖಬೆಲೆಯ ನೋಟುಗಳ ಶೇ.121 ಹಾಗೂ 2 ಸಾವಿರ ರೂ. ಮುಖಬೆಲೆಯ ನೋಟುಗಳ ಶೇ.21.9 ನಕಲಿ ಆಗಿದ್ದವೆಂಬುದು ಬಯಲಾಗಿದೆ.

    ವರ್ಷದಿಂದ ವರ್ಷಕ್ಕೆ ಏರಿಕೆ: ನೋಟು ಅಮಾನ್ಯೀಕರಣದ ನಂತರ ಕರ್ನಾಟಕದಲ್ಲಿ ಪತ್ತೆಯಾಗಿರುವ ಖೋಟಾನೋಟು ಪ್ರಮಾಣ 4 ಪಟ್ಟು ಏರಿಕೆಯಾಗಿದೆ. 2016ರಲ್ಲಿ 80 ಲಕ್ಷ ರೂ. ಕಳ್ಳನೋಟು ಪತ್ತೆಯಾಗಿತ್ತು. 2017ರಲ್ಲಿ 52 ಲಕ್ಷ ಸಿಕ್ಕಿತ್ತು. 2018ರಲ್ಲಿ 1.71 ಕೋಟಿ ಹಾಗೂ 2019-20ರಲ್ಲಿ 4.33 ಕೋಟಿ ರೂ. ನಕಲಿ ನೋಟುಗಳು ಪತ್ತೆಯಾಗಿವೆ.

    ರಾಜ್ಯಕ್ಕೆ ಖೋಟಾ ಕರೆನ್ಸಿ ಕಾಟ: ನಕಲಿ ನೋಟು ಹಾವಳಿ 4 ಪಟ್ಟು ಹೆಚ್ಚಳ, ಕರ್ನಾಟಕಕ್ಕೆ 2ನೇ ಸ್ಥಾನ2000, 500 ರೂ. ನೋಟೆಷ್ಟು?: 2016ರಲ್ಲಿ 2000 ರೂ. ಮುಖಬೆಲೆಯ 2272 ಹಾಗೂ 500 ರೂ. ಮುಖಬೆಲೆಯ 1,32,227 ನಕಲಿ ನೋಟುಗಳು ಪತ್ತೆಯಾಗಿದ್ದವು. ಕ್ರಮವಾಗಿ 2017ರಲ್ಲಿ 74898 ಮತ್ತು 8879 ನೋಟುಗಳು, 2018ರಲ್ಲಿ 48319 ಮತ್ತು 25547 ನೋಟುಗಳು, 2019ರಲ್ಲಿ 90566 ಮತ್ತು 52893 ಖೋಟಾನೋಟುಗಳನ್ನು ಜಪ್ತಿ ಮಾಡಲಾಗಿದೆ. 4 ವರ್ಷದಲ್ಲಿ ಒಟ್ಟು 2000 ರೂ.ನ 4,32,110 ಹಾಗೂ 500 ರೂ.ನ 2,19,546 ನೋಟುಗಳನ್ನು ತನಿಖಾ ಸಂಸ್ಥೆಗಳು ವಶಕ್ಕೆ ಪಡೆದಿವೆ. ಉಳಿದಂತೆ 200, 100, 50 ಹಾಗೂ 20 ರೂ. ಮುಖಬೆಲೆಯ ನಕಲಿ ನೋಟುಗಳು ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿವೆ.

    ಆರ್​ಬಿಐ ಹೇಳೋದೇನು?: ಕೇಂದ್ರ ತನಿಖಾ ಸಂಸ್ಥೆಗಳು ಹಾಗೂ ಸ್ಥಳೀಯ ಪೊಲೀಸರಲ್ಲದೆ ಬ್ಯಾಂಕ್​ಗಳಲ್ಲಿ ಸಿಕ್ಕಿರುವ ನಕಲಿ ನೋಟುಗಳ ಪ್ರಮಾಣ ಹೆಚ್ಚಾಗಿದೆ. 2018-19ರಲ್ಲಿ 500 ರೂ.ನ 21,865 ನಕಲಿ ನೋಟುಗಳು ಪತ್ತೆಯಾಗಿತ್ತು. ಆದರೆ, 2019-20ರಲ್ಲಿ ಈ ಪ್ರಮಾಣ ಶೇ.37 ಹೆಚ್ಚಳವಾಗಿದ್ದು, 500 ರೂ.ನ 30,054 ಖೋಟಾ ನೋಟುಗಳು ಬ್ಯಾಂಕ್​ಗಳಲ್ಲಿ ಪತ್ತೆಯಾಗಿವೆ. 2018-10ರಲ್ಲಿ 200 ರೂ. ಮುಖಬೆಲೆಯ 12,728 ನಕಲಿ ನೋಟುಗಳು ಪತ್ತೆಯಾಗಿವೆ.

    ಸಿಕ್ಕಿಬಿದ್ದವರೆಷ್ಟು?: ನಕಲಿ ನೋಟು ಚಲಾವಣೆ ವೇಳೆ 4 ವರ್ಷದಲ್ಲಿ ದೇಶಾದ್ಯಂತ 4200 ಆರೋಪಿಗಳನ್ನು ಬಂಧಿಸಲಾಗಿದೆ. 2016ರಲ್ಲಿ 1107, 2017ರಲ್ಲಿ 1046, 2018ರಲ್ಲಿ 1002 ಮತ್ತು 2019ರಲ್ಲಿ 1045 ಅರೋಪಿಗಳು ಸಿಕ್ಕಿಬಿದ್ದಿದ್ದಾರೆ. ಈ ಪೈಕಿ 4 ವರ್ಷದಲ್ಲಿ ಕರ್ನಾಟಕದಲ್ಲಿ 254 ಆರೋಪಿಗಳನ್ನು ಬಂಧಿಸಲಾಗಿದೆ.

    2019ರಲ್ಲಿ ಕರ್ನಾಟಕವೇ ಟಾಪ್

    ಒಟ್ಟಾರೆಯಾಗಿ ಗುಜರಾತ್ ಮೊದಲ ಸ್ಥಾನದಲ್ಲಿದ್ದರೂ 2019ರಲ್ಲಿ ಮಾತ್ರ 4.33 ಕೋಟಿ ರೂ. ನಕಲಿ ನೋಟು ಪತ್ತೆಯಾಗುವುದರೊಂದಿಗೆ ಕರ್ನಾಟಕ ಮೊದಲ ಸ್ಥಾನದಲ್ಲಿದೆ. 3.77 ಕೋಟಿ ರೂ. ಕಳ್ಳನೋಟು ಪತ್ತೆಯಾಗುವ ಮೂಲಕ ಗುಜರಾತ್ 2ನೇ ಸ್ಥಾನದಲ್ಲಿದೆ. ಆಂಧ್ರಪ್ರದೇಶದಲ್ಲಿ 3.54 ಕೋಟಿ ಪತ್ತೆಯಾಗಿ 3ನೇ ಸ್ಥಾನದಲ್ಲಿದೆ. ಉಳಿದಂತೆ ಮಹಾರಾಷ್ಟ್ರ, ಗೋವಾ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 2 ಕೋಟಿ ರೂ. ಖೋಟಾನೋಟು ಪತ್ತೆಯಾಗಿವೆ.

    ಎಲ್ಲಿ-ಹೇಗೆ ಚಲಾವಣೆ?

    • ದೊಡ್ಡಮಟ್ಟದ ವ್ಯವಹಾರ ಜಾಗದಲ್ಲಿ ಅಸಲಿ ನೋಟುಗಳ ಮಧ್ಯೆ ನಕಲಿ ನೋಟಿಟ್ಟು ಚಲಾವಣೆ
    • ಬಾರ್ ಮತ್ತು ರೆಸ್ಟೋರೆಂಟ್, ಕಿರಾಣಿ ಅಂಗಡಿ, ಬಸ್​ಗಳ ಟಿಕೆಟ್​ಗೆ ಕೊಡುವಾಗ
    • ಆಸ್ತಿ ಖರೀದಿ, ಬ್ಯಾಂಕ್ ಜಮೆ, ಚೀಟಿ ವ್ಯವಹಾರದ ವೇಳೆ ಅಸಲಿ ನೋಟಿನ ಜತೆ ಬಚ್ಚಿಟ್ಟು ಚಲಾವಣೆ
    • ಗ್ರಾಮೀಣ ಭಾಗದ ಸಂತೆ, ದನ-ಕರುಗಳ ಮಾರಾಟದ ವೇಳೆ ನಕಲಿ ನೋಟು ಚಲಾವಣೆ ಜಾಸ್ತಿ

    ಪಾಕ್ ಉಗ್ರ ನಂಟು ಬಯಲು

    ನೋಟು ಅಮಾನ್ಯೀಕರಣಕ್ಕೂ ಮುನ್ನ ಅಂದರೆ 2015ರ ಅ.9ರಂದು ಎನ್​ಐಎ ತಂಡ ಆಂಧ್ರದ ವಿಶಾಖಪಟ್ಟಣಂ ರೈಲು ನಿಲ್ದಾಣದಲ್ಲಿ ಸದ್ದಾಂ ಹುಸೇನ್ ಎಂಬಾತನನ್ನು ಬಂಧಿಸಿ 5,01,500 ರೂ. ಮೌಲ್ಯದ ನಕಲಿ ನೋಟು ಜಪ್ತಿ ಮಾಡಿತ್ತು. ಈತ ಕೊಟ್ಟ ಮಾಹಿತಿ ಆಧರಿಸಿ ಇನ್ನೂ ಹಲವರನ್ನು ಬಂಧಿಸಲಾಗಿತ್ತು. ಪಾಕಿಸ್ತಾನದಲ್ಲಿ ತಯಾರಾಗುವ ನಕಲಿ ನೋಟುಗಳನ್ನು ಬಾಂಗ್ಲಾ ಗಡಿ ಮುಖಾಂತರ ಭಾರತಕ್ಕೆ ತಲುಪಿಸಿ ಅಲ್ಲಿಂದ ಪಶ್ಚಿಮ ಬಂಗಾಳದ ಮಾಲ್ಡಾಗೆ ತರಲಾಗಿತ್ತು.

    ಅಲ್ಲಿಂದ ಬೆಂಗಳೂರು, ಮುಂಬೈ, ದೆಹಲಿ, ಚೆನ್ನೈ ಹೀಗೆ ದೇಶದ ಪ್ರಮುಖ ವಾಣಿಜ್ಯ ವಹಿವಾಟು ನಡೆಯುವ ನಗರಗಳಿಗೆ ಪೂರೈಸಿ ಅಲ್ಲಿ ವ್ಯವಸ್ಥಿತ ರೀತಿಯಲ್ಲಿ ಚಲಾವಣೆ ಮಾಡಲಾಗುತ್ತದೆ. ಈ ಕೇಸಲ್ಲಿ ಉಗ್ರ ಸಂಪರ್ಕ ಹೊಂದಿರುವ ಕುರಿತು 2019ರಲ್ಲಿ ಎನ್​ಐಎ ಸಲ್ಲಿಸಿದ್ದ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿತ್ತು. ಈಗಲೂ ಪಾಕಿಸ್ತಾನದಿಂದಲೇ ನಕಲಿ ನೋಟು ಬರುವ ಬಗ್ಗೆ ಅಧಿಕಾರಿಗಳಿಗೆ ಅನುಮಾನ ಇದೆ.

    14 ನಕಲಿ ನೋಟು ವಶ

    ಹರಿಹರ: ನಗರದ ತರಕಾರಿ ಮಾರುಕಟ್ಟೆಯಲ್ಲಿ 100 ರೂ. ಮುಖಬೆಲೆಯ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ತರಕಾರಿ ಮಾರುಕಟ್ಟೆ ನಿವಾಸ 19 ವರ್ಷದ ವಿನೋದ ಬಂಧಿತ. ಈತ ರಿಲೆಯನ್ಸ್ ಪೇಟ್ರೋಲ್ ಬಂಕ್​ನಲ್ಲಿ ಕೆಲಸಮಾಡುತ್ತಿದ್ದ ಎನ್ನಲಾಗಿದೆ. ಕೃತ್ಯಕ್ಕೆ ಬಳಸಿದ್ದ ಜೆರಾಕ್ಸ್ ಮಷಿನ್ ಹಾಗೂ 14 ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ನೈಟ್​ ಕರ್ಫ್ಯೂ ಇಲ್ಲ ಅಂತ ಹೊಸ ವರ್ಷಕ್ಕೆ ಬೇಕಾಬಿಟ್ಟಿ ಓಡಾಡಿದರೆ ಬೀಳುತ್ತೆ ಕೇಸ್​! ಬೆಂಗಳೂರಲ್ಲಿ ನ್ಯೂ ಇಯರ್​ ಪಾರ್ಟಿಗೆ ಬ್ರೇಕ್​!

    ಬಿಎಂಟಿಸಿ ಬಸ್ಸಿನ ವಿಂಡೋ ಸೀಟಲ್ಲಿ ಕೂತು ಫೋನಲ್ಲಿ ಮಾತಾಡೋರೇ ಇವರ ಟಾರ್ಗೆಟ್​! 101 ಮೊಬೈಲ್​ ಕದ್ದ ಭೂಪ

    ಫಲಿತಾಂಶ ನೋಡಲು ಅಭ್ಯರ್ಥಿಯೇ ಇಲ್ಲ; ಗ್ರಾಮ ಪಂಚಾಯತ್ ಚುನಾವಣೆ ಸುತ್ತಮುತ್ತ ಅಭ್ಯರ್ಥಿಗಳಿಬ್ಬರ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts