More

    ಜನರಲ್ಲಿ ಭೀತಿ ಸೃಷ್ಟಿಸಲು ಹುಸಿ ಬಾಂಬ್ ಬೆದರಿಕೆ; ಇ-ಮೇಲ್ ಸಂಸ್ಥೆಗೆ ಪತ್ರ

    ಬೆಂಗಳೂರು: ಖಾಸಗಿ ಶಾಲೆಗಳಿಗೆ ಇಮೇಲ್‌ನಲ್ಲಿ ಬಂದಿರುವುದು ಹುಸಿ ಬೆದರಿಕೆ ಸಂದೇಶವಾಗಿದೆ. ಜನರಲ್ಲಿ ಭೀತಿ ಸೃಷ್ಟಿಸುವ ಸಲುವಾಗಿ ಕಿಡಿಗೇಡಿಗಳು ಕೃತ್ಯ ಎಸಗಿದ್ದಾರೆ. ಇಮೇಲ್ ಜಾಡು ಪತ್ತೆಗೆ ಇ-ಮೇಲ್ ಸಂಸ್ಥೆಗೆ ಪತ್ರ ಬರೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
    ಬಾಂಬ್ ಬೆದರಿಕೆ ಇ ಮೇಲ್ ಬಂದಿದ್ದ ನಗರದ ಎಲ್ಲ 44 ಶಾಲೆಗಳಲ್ಲಿ ಬಾಂಬ್ ನಿಷ್ಕ್ರಿಯ ದಳ ಮತ್ತು ಪೊಲೀಸರು ತಪಾಸಣೆ ನಡೆಸಿದ್ದಾರೆ. ಇದೊಂದು ಹುಸಿ ಸಂದೇಶ ಎಂಬುದು ಖಚಿತವಾಗಿದೆ. ಈ ಕೃತ್ಯ ಎಸಗಿದ ಆರೋಪಿಗಳ ಪತ್ತೆಗೆ ಹೆಚ್ಚುವರಿ ಆಯುಕ್ತ (ಪಶ್ಚಿಮ)ರ ಮೇಲುಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ.

    ಇದೇ ರೀತಿ ಕೆಲದಿನಗಳ ಹಿಂದೆ ಮಲೇಷ್ಯಾ, ಜರ್ಮನಿ, ಫ್ರಾನ್ಸ್ ದೇಶಗಳಲ್ಲಿ ಕೂಡಾ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಇ ಮೇಲ್‌ಗಳು ರವಾನೆಯಾಗಿದ್ದ ಸಂಗತಿ ಗೊತ್ತಾಗಿದೆ. ಹೀಗಾಗಿ ಈ ಬೆದರಿಕೆ ಸಂದೇಶ ಕಳುಹಿಸಿರುವ ಕಿಡಿಗೇಡಿಗಳ ಹಿಂದಿನ ಹುನ್ನಾರ ಪತ್ತೆ ಹಚ್ಚಲಾಗುತ್ತದೆ.
    ಖಾಸಗಿ ಶಾಲೆಗಳಿಗೆ ಬೆದರಿಕೆ ಇ-ಮೇಲ್ ಬಂದಿರುವ ಖರೆಜೆಟ್ಸ್ ಅಟ್ ಬೀಬಲ್ ಡಾಟ್ ಕಾಮ್ ವಿವರ ಕುರಿತು ಇ-ಮೇಲ್ ಕಂಪನಿಗೆ ಪತ್ರ ಬರೆಯಲಾಗಿದ್ದು, ಪ್ರತಿಕ್ರಿಯೆ ಬಳಿಕ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

    ವಿಚ್ಯುವಲ್ ಪ್ರೆವೈಟ್ ನಂಬರ್ (ವಿಪಿಎನ್) ಬಳಸಿ ಇ.ಮೇಲ್ ಬಂದಿರುವ ಕಾರಣ ಆರೋಪಿ ಪತ್ತೆಗೆ ತಾಂತ್ರಿಕ ಅಡಚಣೆ ಇದೆ. ಮೊಬೈಲ್ ಅಥವಾ ದೂರವಾಣಿ ಕರೆ ಮಾಡಿದರೆ ಸುಲಭವಾಗಿ ದುಷ್ಕರ್ಮಿಯನ್ನು ಸುಲಭವಾಗಿ ಹುಡುಕಬಹುದು. ವಿಪಿಎನ್ ಬಳಸಿ ಇ.ಮೇಲ್ ಮಾಡಿದರೆ ಅದರ ಮೂಲ ಭೇದಿಸುವುದು ಸವಾಲಿನ ಕೆಲಸವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ವಿಪಿಎನ್ ಬಳಸಿ ಬೆದರಿಕೆ ಇಮೇಲ್ :

    ಇಮೇಲ್‌ನಲ್ಲಿ ಹುಸಿ ಬಾಂಬ್ ಬೆದರಿಕೆ ಸಂದೇಶ ಬರುವ ಪ್ರಕರಣಗಳಲ್ಲಿ ಕಿಡಿಗೇಡಿಗಳನ್ನು ಪತ್ತೆ ಮಾಡಲು ಪೊಲೀಸರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ. ಬಹುತೇಕ ಇಮೇಲ್ ಮಾಡಿದ ಆರೋಪಿಗಳ ಸುಳಿವೇ ಲಭ್ಯವಾಗಿಲ್ಲ.

    ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕಿಡಿಗೇಡಿಗಳು ‘ವರ್ಚುವಲ್ ಪ್ರೈವೆಟ್ ನೆಟ್‌ವರ್ಕ್ (ವಿಪಿಎನ್) ಬಳಸುತ್ತಿರುವುದ ಕಂಡುಬಂದಿದೆ. ಸಾರ್ವಜನಿಕ ನೆಟ್‌ವರ್ಕ್‌ಗಳನ್ನು ಬಳಸುವಾಗ ಸಂರಕ್ಷಿತ ನೆಟ್‌ವರ್ಕ್ ಸಂಪರ್ಕವನ್ನು ಸ್ಥಾಪಿಸುವ ಅವಕಾಶವನ್ನು ವಿವರಿಸುತ್ತದೆ. ಇದು ಇಂಟರ್ನೆಟ್ ಟ್ರಾಫಿಕ್ ಅನ್ನು ಗೌಪ್ಯತೆ ಕಾಪಾಡುತ್ತದೆ. ಬಳಕೆದಾರನ ಆನ್‌ಲೈನ್ (ಐಪಿ ಅರ್ಡಸ್) ಗುರುತನ್ನು ಮರೆಮಾಚುತ್ತದೆ.

    3ನೇ ವ್ಯಕ್ತಿಗಳಿಗೆ ಬಳಕೆದಾರನ ಚಟುವಟಿಕೆಗಳನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಲು ಮತ್ತು ಡೇಟಾವನ್ನು ಕದಿಯಲು ಸುಲಭವಾಗಿ ಬಿಡುವುದಿಲ್ಲ. ಅಲ್ಲದೆ, ವಿಪಿಎನ್ ಸಂಸ್ಥೆ ಸಹ ತನ್ನ ಗ್ರಾಹಕನ ಮಾಹಿತಿಯನ್ನು 3ನೇ ವ್ಯಕ್ತಿ ಜತೆಗೆ ಹಂಚಿಕೊಳ್ಳುವುದಿಲ್ಲ. ಇದರಿಂದ ಕಿಡಿಗೇಡಿಗಳು ವಿಪಿಎನ್‌ನಲ್ಲಿ ಇ-ಮೇಲ್ ಮಾಡಿದರೇ ಪತ್ತೆ ಹಚ್ಚುವುದು ಕಷ್ಟಸಾಧ್ಯವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts