More

    ನ್ಯಾಯಬೆಲೆ ಅಂಗಡಿ ಕೈತಪ್ಪಿದ್ದರಿಂದ ಅನ್ಯಾಯ

    ಸವದತ್ತಿ: ಬೋಳಕಡಬಿ ಗ್ರಾಮಕ್ಕೆ ಮಂಜೂರಾದ ನ್ಯಾಯಬೆಲೆ ಅಂಗಡಿ ಬೇರೆ ಗ್ರಾಮಕ್ಕೆ ಕೊಟ್ಟದ್ದನ್ನು ಖಂಡಿಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ಬೋಳಕಡಬಿ ಗ್ರಾಮಸ್ಥರು ಶುಕ್ರವಾರ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಅವರಿಗೆ ಮನವಿ ಸಲ್ಲಿಸಿದರು.

    ಗ್ರಾಮಸ್ಥ ಮಾರುತಿ ದೇವರಮನಿ ಮಾತನಾಡಿ, ಬೋಳಕಡಬಿ ಗ್ರಾಮದಲ್ಲಿ ವಿಶೇಷ ಪ್ರಕರಣದಡಿ ಮಂಜೂರಾದ ಹೊಸ ನ್ಯಾಯ ಬೆಲೆ ಅಂಗಡಿಯನ್ನು ಗೊರಗುದ್ದಿ ಗ್ರಾಮಕ್ಕೆ ನೀಡಿದ್ದರಿಂದ ನಮಗೆ ಅನ್ಯಾಯವಾಗಿದೆ. ಅರ್ಜಿ ನಿಯಮಗಳ ಪ್ರಕಾರ ಬೋಳಕಡಬಿ ಗ್ರಾಮದ ಸಂಘ-ಸಂಸ್ಥೆ ಹಾಗೂ ಅಂಗವಿಕಲರು ಅರ್ಜಿ ಸಲ್ಲಿಸಲು ಅವಕಾಶವಿತ್ತು. ಬೋಳಕಡಬಿ ಗ್ರಾಮದ ಎಲ್ಲ ಅರ್ಜಿಗಳನ್ನು ’ಎ’ ಫಾರ್ಮ್‌ನಲ್ಲಿನ ಸಣ್ಣ ಪುಟ್ಟ ತಪ್ಪು ತೋರಿಸಿ ತಿರಸ್ಕೃತಗೊಳಿಸಿ 7 ಕಿ.ಮೀ ಅಂತರದಲ್ಲಿರುವ ಗೊರಗುದ್ದಿ ಗ್ರಾಮದವರಿಗೆ ಅನುಮತಿ ನೀಡಿದ್ದು ಸಂಶಯಕ್ಕೆ ಕಾರಣವಾಗಿದೆ. ಅದಕ್ಕೆ ತಕರಾರು ಅರ್ಜಿ ಸಲ್ಲಿಸಿದರೂ ಲೆಕ್ಕಿಸದ ಅಧಿಕಾರಿಗಳು ಗೊರಗುದ್ದಿ ಗ್ರಾಮದವರಿಗೆ ಪಡಿತರ ವಿತರಣೆಗೆ ಅವಕಾಶ ನೀಡಿದ್ದನ್ನು ಬೋಳಕಡಬಿ ಗ್ರಾಮಸ್ಥರೆಲ್ಲ ಖಂಡಿಸುತ್ತೇವೆ ಎಂದರು.

    ಈ ಕುರಿತು ಉಚ್ಚ ನ್ಯಾಯಾಲಯ ಮೊರೆಹೋದರೂ ನ್ಯಾಯ ಸಿಕ್ಕಿಲ್ಲ. ಬೇರೊಬ್ಬರ ಸ್ವಾರ್ಥಕ್ಕಾಗಿ ನಮ್ಮೂರಿನ ನ್ಯಾಯಬೆಲೆ ಅಂಗಡಿ ಬೇರೆ ಗ್ರಾಮದವರ ಪಾಲಾಗಿದೆ. ಕಾರಣ ಈ ಕೂಡಲೇ ಆದೇಶ ರದ್ದುಪಡಿಸಿ ಪಡಿತರ ಹಂಚಿಕೆ ನಿಲ್ಲಿಸಿ ನಮಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. ಲಕ್ಷ್ಮಣ ಪೂಜೇರಿ, ಮಹಾದೇವ ಸೋಮನಟ್ಟಿ, ಸಾಬಣ್ಣ ಮೂಡಲಗಿ, ಲಕ್ಷ್ಮಣ ದಳವಾಯಿ, ಶಿವಪ್ಪ ಕೊಡಮ್ಮನವರ, ನಿಂಗಪ್ಪ ದೇವರಮನಿ, ಫಕೀರಪ್ಪ ಆಲದಕಟ್ಟಿ, ಲಕ್ಷ್ಮಣ ದೇವರಮನಿ, ಹೂವಪ್ಪ ತಳವಾರ, ಮಹಾದೇವ ಪೂಜೇರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts