More

    ಸ್ಪರ್ಧೆಯಿಂದ ಹಿಂಜರಿಯುವ ಪ್ರಶ್ನೆಯೇ ಇಲ್ಲ: ಕೆ.ಎಸ್.ಈಶ್ವರಪ್ಪ

    ಭದ್ರಾವತಿ: ಈಶ್ವರಪ್ಪ ಅವರಿಗೆ ಅನ್ಯಾಯವಾಗಿದೆ. ಹಿಂದುತ್ವಕ್ಕೆ ಧಕ್ಕೆಯಾಗಿದೆ ಎಂದು ಜಿಲ್ಲೆಯ ಕಾಂಗ್ರೆಸಿಗರು, ಕಮ್ಯುನಿಷ್ಟರು ನನ್ನನ್ನು ಬೆಂಬಲಿಸುತ್ತಿದ್ದಾರೆ. ನಾನು ಅವರ ನಂಬಿಕೆಗೆ ಎಂದೂ ಧಕ್ಕೆ ಬಾರದಂತೆ ನಡೆದುಕೊಂಡು ಋಣ ತೀರಿಸುತ್ತೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
    ಮಂಗಳವಾರ ಸಂಜೆ ಸಿದ್ಧಾರೂಢನಗರದ ಧರ್ಮಶ್ರೀ ಸಭಾಭವನದಲ್ಲಿ ಹಿಂದು ಸ್ವಾಭಿಮಾನಿ ಯುವಕರ ತಂಡ, ಹಾಗೂ ನೊಂದ ಬಿಜೆಪಿ ಕಾರ್ಯಕರ್ತರು ಆಯೋಜಿದ್ದ ಸಭೆಯಲ್ಲಿ ಮಾತನಾಡಿದರು.
    ರಾಜ್ಯದಲ್ಲಿ ಬಿಜೆಪಿ ಒಂದು ಕುಟುಂಬದ ಕೈ ಸೇರಿದೆ. ಇದರಿಂದಾಗಿ ಕಳೆದ 35 ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ನಾಯಕರಿಗೆ ನೋವಾಗಿದೆ. ದೊಡ್ಡವರು ಕರೆದರೆ ಹೋಗಿ ಇಲ್ಲಿನ ಎಲ್ಲ ಸಮಸ್ಯೆಗಳನ್ನು ಚರ್ಚಿಸುತ್ತೇನೆ. ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
    ನಾನು ಚುನಾವಣೆಗೆ ನಿಲ್ಲುವ ಅವಶ್ಯಕತೆ ಇರಲಿಲ್ಲ. ಆದರೆ ಇಡೀ ರಾಜ್ಯದಲ್ಲಿ ಅನ್ಯಾಯದ ವಿರುದ್ಧ ಹಾಗೂ ನನ್ನ ಚುನಾವಣೆ ವಿಚಾರ ಚರ್ಚೆಯಾಗುತ್ತಿದೆ. ಚರ್ಚೆಯಾಗಲೆಂದೇ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ಯಡಿಯೂರಪ್ಪ ಕೈಗೆ ಪಕ್ಷ ಕೊಟ್ಟರೆ ಇಡೀ ರಾಜ್ಯವೇ ನಮ್ಮ ಕೈಗೆ ಬರುತ್ತದೆಂಬ ಭ್ರಮೆ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರಲ್ಲಿದೆ. ದಲಿತರು, ಕುರುಬರು, ಹಿಂದುಳಿದವರಿಗೆ ಇಂದು ಅನ್ಯಾಯವಾಗಿದೆ. ಪಕ್ಷದ ಕಾರ್ಯಕರ್ತರು ಹಾಗೂ ಅಲ್ಲಿನ ಜನರು ಗೋಬ್ಯಾಕ್ ಎಂದು ಹೇಳಿ ಕಳಿಸಿದವರಿಗೆ ಸೀಟು ಕೊಟ್ಟಿದ್ದಾರೆ. ಚಿತ್ರದುರ್ಗದಲ್ಲಿ ಎಡ-ಬಲ ಎಂಬ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ಸಂಸ್ಕೃತಿ ಈಗ ಬಿಜೆಪಿಗೂ ಬಂದಿದೆ ಎಂದು ದೂರಿದರು.
    ಸಮಾಜಸೇವಕ ಮಹೇಶ್‌ಕುಮಾರ್ ಮಾತನಾಡಿ, ಹಿಂದುಳಿದ ನಾಯಕರಾಗಿರುವ ಈಶ್ವರಪ್ಪ ಅವರಿಗೆ ಪಕ್ಷದಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಾಗೂ ಇಂದಿನ ಲೋಕಸಭಾ ಚುನಾವಣೆಯಲ್ಲೂ ಅನ್ಯಾಯವಾಗಿದೆ. ಈಶ್ವರಪ್ಪ ನಾಮಪತ್ರ ಸಲ್ಲಿಸಿ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿ ಕ್ಷೇತ್ರಕ್ಕೆ ಬರಲಿ. ಕನಕಮಂಟಪ ಮೈದಾನದಲ್ಲಿ ಕಾರ್ಯಕರ್ತರ ಬೃಹತ್ ವೇದಿಕೆ ಸಿದ್ಧಪಡಿಸಿ ಬಿ.ವೈ.ರಾಘವೇಂದ್ರ ಏಕೆ ಗೆಲ್ಲಬಾರದು? ಈಶ್ವರಪ್ಪ ಏಕೆ ಗೆಲ್ಲಬೇಕು? ಕಾಂಗ್ರೆಸ್‌ನ ಗೀತಾ ಏಕೆ ಗೆಲ್ಲಲೇಬಾರದು ಎಂಬುದನ್ನು ದಾಖಲಾತಿ ಮೂಲಕ ಸ್ಪಷ್ಟಪಡಿಸುತ್ತೇನೆ ಎಂದರು.
    ಬಿಜೆಪಿ ಮುಖಂಡ ಪ್ರಭಾಕರ್, ಪ್ರಮುಖರಾದ ಸುರೇಶ್, ರಾಜೇಶ್, ಶಾರದಮ್ಮ, ಹೇಮಾವತಿ ಕನ್ಯಾಕುಮಾರಿ, ವಿಜಯಕುಮಾರ್, ನಾರಾಯಣಪ್ಪ, ತ್ಯಾಗರಾಜ್ ಇತರರಿದ್ದರು.
    ಸಭಾ ಕಾರ್ಯಕ್ರಮಕ್ಕೂ ಮುನ್ನ ನಗರದ ಹುತ್ತಾ ಕಾಲನಿ, ಅಂಬೇಡ್ಕರ್ ವೃತ್ತದ ಮೂಲಕ ಹಾಲಪ್ಪ ವೃತ್ತ, ಮಾಧವಾಚಾರ್ ವೃತ್ತ ರಂಗಪ್ಪ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನೂರಾರು ಅಭಿಮಾನಿಗಳು ಬೈಕ್ ರ‌್ಯಾಲಿ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts