More

    ಮೀನಿಗಾಗಿ ಮುಗಿಬೀಳುವ ವ್ಯಾಪಾರಿಗಳು, ಅಂತರ ಕಾಯ್ದುಕೊಳ್ಳುವಲ್ಲಿ ವಿಫಲ

    ಮಂಗಳೂರು: ನಗರದ ಬಂದರು ಮೀನುಗಾರಿಕಾ ದಕ್ಕೆಯಲ್ಲಿ ವ್ಯಾಪಾರಿಗಳು ಮೀನು ಖರೀದಿಗೆ ಮುಗಿಬೀಳುತ್ತಿದ್ದು, ಲಾಕ್‌ಡೌನ್ ನಿಯಮದಂತೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ.

    ಆಳಸಮುದ್ರ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿದ್ದು, ಇಲ್ಲಿಗೆ ಹೊರ ರಾಜ್ಯಗಳಿಂದ ಮೀನು ಸರಬರಾಜಾಗುತ್ತಿದೆ. ರಾತ್ರಿ 2 ಗಂಟೆಯಿಂದ ಬೆಳಗ್ಗೆ 7 ಗಂಟೆ ತನಕ ಏಲಂ ನಡೆಯುತ್ತದೆ. ಚಿಲ್ಲರೆ ವ್ಯಾಪಾರಿಗಳು ಬಂದರ್‌ಗೆ ತೆರಳಿ ಮೀನು ಖರೀದಿಸುತ್ತಾರೆ. ಆದರೆ ಕರೊನಾ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ಅನುಸರಿಸುತ್ತಿಲ್ಲ ಎನ್ನುವ ಆರೋಪ ವ್ಯಕ್ತವಾಗಿದೆ.

    ದಕ್ಕೆಗೆ ಹೋಗುವ ರಸ್ತೆಯಲ್ಲಿ ಮೀನು ಏಲಂ ಮಾಡಲು ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿದೆ. ರಾತ್ರಿ ವೇಳೆ ಪೂರಕ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಹೊರರಾಜ್ಯದ 25ರಷ್ಟು ಬೃಹತ್ ಲಾರಿಗಳು ಮೀನು ಹೇರಿಕೊಂಡು ಬರುತ್ತಿವೆ. ಟೆಂಪೋ, ಬೈಕ್‌ಗಳಲ್ಲಿ ಚಿಲ್ಲರೆಯಾಗಿ ಮೀನು ಮಾರಾಟ ಮಾಡುವವರು ಬಂದು ಏಲಂನಲ್ಲಿ ಖರೀದಿಸುತ್ತಾರೆ.

    ಪೊಲೀಸರೂ ಇರುವುದಿಲ್ಲ: ವ್ಯಾಪಾರಿಗಳು ಮೀನು ಖರೀದಿಗೆ ಮುಗಿಬೀಳುವಾಗ ಅವರನ್ನು ನಿಯಂತ್ರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲು ಪೊಲೀಸರೂ ಸ್ಥಳದಲ್ಲಿ ಇರುವುದಿಲ್ಲ. ಪಿಸಿಆರ್‌ನಲ್ಲಿ ಬರುವ ಪೊಲೀಸರು ದೂರದಿಂದಲೇ ಎಚ್ಚರಿಕೆ ನೀಡಿ ಹೋಗುತ್ತಿದ್ದು, ಅವರು ಹಿಂತಿರುಗಿದ ಕೂಡಲೇ ವ್ಯಾಪಾರಿಗಳು ಮತ್ತೆ ಗುಂಪುಗೂಡುತ್ತಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ದಕ್ಕೆ ಸ್ತಬ್ಧ: ದಕ್ಕೆಯಲ್ಲಿ ಮೀನುಗಾರಿಕೆ ಚಟುವಟಿಕೆ ಸಂಪೂರ್ಣ ಸ್ತಬ್ಧಗೊಂಡಿದೆ. ಮೀನು ಏಲಂ ನಡೆಯುವ ಸ್ಥಳ ಖಾಲಿ ಖಾಲಿಯಾಗಿದೆ. ಮೀನು ತುಂಬಿಸಿಡುವ ಟ್ರೇಗಳನ್ನು ವ್ಯವಸ್ಥಿತವಾಗಿ ಜೋಡಿಸಿಟ್ಟು, ಟಾರ್ಪಾಲಿನಲ್ಲಿ ಕಟ್ಟಿಡಲಾಗಿದೆ. ಬೋಟುಗಳು ಲಂಗರು ಹಾಕಿವೆ. ಅಂಗಡಿಗಳು ಸಂಪೂರ್ಣ ಬಾಗಿಲು ಹಾಕಿವೆ. ದಕ್ಕೆಗೆ ವಾಹನ ಸಂಚಾರವನ್ನೂ ಪೊಲೀಸರು ಸ್ಥಗಿತ ಮಾಡಿದ್ದಾರೆ.

    ದೋಣಿಯಲ್ಲೂ ಅಂತರವಿಲ್ಲ: ಬೆಂಗ್ರೆ ನಿವಾಸಿಗಳು ನಗರವನ್ನು ಸಂಪರ್ಕಿಸಲು ಪ್ರಸ್ತುತ ದಕ್ಕೆಗೆ ಬರುವ ದೋಣಿ ಮಾತ್ರ ಲಭ್ಯವಿದ್ದು, ಅಗತ್ಯ ಸಾಮಗ್ರಿ ಸಾಗಾಟಕ್ಕೆ ಇದನ್ನೇ ಅವಲಂಬಿಸಿದ್ದಾರೆ. ಬೆಳಗ್ಗೆಯಿಂದ ಮಧ್ಯಾಹ್ನ 12 ಗಂಟೆ ತನಕ ಬೆಂಗ್ರೆ-ದಕ್ಕೆ ನಡುವೆ ದೋಣಿ ಸಂಚಾರ ನಡೆಸುತ್ತಿದೆ. ಆದರೆ ಇದರಲ್ಲಿ ಒಂದು ಬಾರಿಗೆ 30ಕ್ಕಿಂತಲೂ ಅಧಿಕ ಮಂದಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸಂಚಾರ ಮಾಡುತ್ತಿದ್ದಾರೆ. ಕೆಲವರು ಅನಗತ್ಯವಾಗಿ ತಿರುಗಾಡಲು ಬರುತ್ತಿರುವುದು ಕಂಡುಬರುತ್ತಿದೆ.

    ಹೊರ ರಾಜ್ಯದಿಂದ ಬಂದ ಮೀನುಗಳನ್ನು ಜಿಲ್ಲಾಡಳಿತದ ಸೂಚನೆಯಂತೆ ದಕ್ಕೆಗೆ ಹೋಗುವ ರಸ್ತೆಯಲ್ಲಿ ಏಲಂ ಮಾಡಲಾಗುತ್ತಿದೆ. 500ರಷ್ಟು ಚಿಲ್ಲರೆ ವ್ಯಾಪಾರಿಗಳು ಬರುವುದರಿಂದ ಮತ್ತು ರಸ್ತೆ ಇಕ್ಕಟ್ಟಾಗಿರುವುದರಿಂದ ರಶ್ ಆಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿವಳಿಕೆ ನೀಡುತ್ತಿದ್ದೇವೆ. ಪೊಲೀಸರು ಆಗಮಿಸಿ ಸಹಕಾರ ನೀಡಿದರೆ ಅನುಕೂಲ.
    – ಮಜೀದ್, ಬಂದರು ಮೀನು ಏಲಂ ಮಾಡುವವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts