More

    ಆರ್‌ಸಿಬಿ ಸೋಲಿಗೆ ಕಾರಣ ವಿವರಿಸಿದ ನಾಯಕ ಫಾಫ್​ ಡು ಪ್ಲೆಸಿಸ್

    ಮುಂಬೈ: ನಾಯಕ ಫಾಫ್​ ಡು ಪ್ಲೆಸಿಸ್ ಭರ್ಜರಿ ಬ್ಯಾಟಿಂಗ್ ನಿರ್ವಹಣೆಯ ನೆರವಿನಿಂದ ಆರ್‌ಸಿಬಿ ತಂಡ ಬೃಹತ್ ಮೊತ್ತ ಪೇರಿಸಿದ್ದರೂ, ಪಂಜಾಬ್ ಕಿಂಗ್ಸ್ ಎದುರು ಅದನ್ನು ರಕ್ಷಿಸಿಕೊಳ್ಳಲು ವಿಲವಾಯಿತು. ಈ ಮೂಲಕ ಆರ್‌ಸಿಬಿ ತಂಡ ಐಪಿಎಲ್-15ರಲ್ಲಿ ಸೋಲಿನ ಆರಂಭ ಕಂಡಿದೆ. ಇದಕ್ಕಾಗಿ ಫೀಲ್ಡಿಂಗ್ ವಿಭಾಗದ ವೈಫಲ್ಯವನ್ನು ಪ್ಲೆಸಿಸ್ ದೂರಿದ್ದಾರೆ.

    206 ರನ್ ಸವಾಲಿಗೆ ಪ್ರತಿಯಾಗಿ ಪಂಜಾಬ್, ನಾಯಕ ಮಯಾಂಕ್ ಅಗರ್ವಾಲ್ (32), ಶಿಖರ್ ಧವನ್ (43) ಮತ್ತು ಭಾನುಕ ರಾಜಪಕ್ಷ (43) ಹೋರಾಟದಿಂದ ದಿಟ್ಟ ಚೇಸಿಂಗ್‌ನತ್ತ ಸಾಗಿತ್ತು. ಆದರೆ ಕೊನೇ 5 ಓವರ್‌ಗಳಲ್ಲಿ 50 ರನ್ ಬೇಕಿದ್ದಾಗ ಪಂಜಾಬ್ ಅಗ್ರ ಐವರು ಬ್ಯಾಟರ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಜತೆಗೂಡಿದ ಶಾರುಖ್ ಖಾನ್ (24) ಮತ್ತು ಒಡೆನ್ ಸ್ಮಿತ್ (25) ಜೋಡಿ ಮುರಿಯದ 6ನೇ ವಿಕೆಟ್‌ಗೆ 25 ಎಸೆತಗಳಲ್ಲಿ 52 ರನ್ ಸೇರಿಸಿ 19 ಓವರ್‌ಗಳಲ್ಲೇ ಪಂಜಾಬ್ ತಂಡವನ್ನು ಗೆಲುವಿನ ದಡ ಸೇರಿಸಿತು. ಆದರೆ ಅದಕ್ಕೆ ಮುನ್ನ ವಿಂಡೀಸ್ ಆಲ್ರೌಂಡರ್ ಒಡೆನ್ ಸ್ಮಿತ್ ಕೇವಲ 1 ರನ್ ಗಳಿಸಿದ್ದಾಗ ಹರ್ಷಲ್ ಪಟೇಲ್ ಎಸೆತದಲ್ಲಿ ಅನುಜ್ ರಾವತ್ ಕ್ಯಾಚ್ ಕೈಚೆಲ್ಲಿದ್ದರೆ, ಅವರು 2 ರನ್ ಗಳಿಸಿದ್ದಾಗ ಹರ್ಷಲ್ ನಾನ್-ಸ್ಟ್ರೈಕರ್‌ನಲ್ಲಿ ರನೌಟ್ ಮಿಸ್ ಮಾಡಿದ್ದರು.

    ‘ಒಡೆನ್ ಸ್ಮಿತ್ ಪವರ್​ಫುಲ್ ಹಿಟ್ಟರ್. ಅವರು ಅಪಾಯಕಾರಿ ಆಗಬಲ್ಲರೆಂದು ಗೊತ್ತಿತ್ತು. ಅವರ ಕ್ಯಾಚ್‌ಗಳು ಬಂದಾಗ ಕೈಚೆಲ್ಲಬಾರದು’ ಎಂದು ಪ್ಲೆಸಿಸ್ 5 ವಿಕೆಟ್ ಸೋಲಿನ ಬಳಿಕ ನುಡಿದರು. ಐಪಿಎಲ್‌ಗೆ ಪದಾರ್ಪಣೆ ಮಾಡಿದ ಒಡೆನ್ ಸ್ಮಿತ್, ಕಳೆದ ಮೆಗಾ ಹರಾಜಿನಲ್ಲಿ 6 ಕೋಟಿ ರೂ.ಗೆ ಪಂಜಾಬ್ ಪಾಲಾಗಿದ್ದರು.

    ಪಿಚ್ ಬ್ಯಾಟಿಂಗ್‌ಗೆ ಅತ್ಯುತ್ತಮವಾಗಿತ್ತು. ಇಬ್ಬನಿಯಿಂದಾಗಿ 2ನೇ ಸರದಿಯಲ್ಲಿ ಬ್ಯಾಟಿಂಗ್ ಇನ್ನಷ್ಟು ಸುಲಭವಾಗಿತ್ತು. ನಾವು 15-20 ರನ್ ಹೆಚ್ಚು ಬಿಟ್ಟುಕೊಟ್ಟಿದ್ದೆವು. ಫಾಫ್​-ವಿರಾಟ್ ಬ್ಯಾಟಿಂಗ್ ಮೂಲಕ ಪಂದ್ಯವನ್ನು ನಮ್ಮ ಕೈಯಿಂದ ಬಹುತೇಕ ಕಸಿದಿದ್ದರು. ನಾವೂ ದಿಟ್ಟ ಚೇಸಿಂಗ್ ನಡೆಸಿದೆವು. ಒತ್ತಡಕ್ಕೆ ಸಿಲುಕಿಕೊಳ್ಳದೆ ಸಮರ್ಥ ಆಟವಾಡಿದೆವು ಎಂದು ಪಂಜಾಬ್ ಕಿಂಗ್ಸ್ ನಾಯಕ ಮಯಾಂಕ್ ಅಗರ್ವಾಲ್ ಹೇಳಿದರು.

    ಆರ್‌ಸಿಬಿ ತಂಡ ಐಪಿಎಲ್‌ನಲ್ಲಿ 21ನೇ ಬಾರಿ 200 ಪ್ಲಸ್ ಮೊತ್ತ ಪೇರಿಸಿತು. ಸಿಎಸ್‌ಕೆ 19 ಬಾರಿ ಈ ಸಾಧನೆ ಮಾಡಿರುವುದು ನಂತರದ ಗರಿಷ್ಠ. ಆರ್‌ಸಿಬಿ ತಂಡ 4ನೇ ಬಾರಿ 200 ಪ್ಲಸ್ ಮೊತ್ತವನ್ನು ರಕ್ಷಿಸಿಕೊಳ್ಳಲು ವಿಲವಾಯಿತು. ಅತ್ತ ಪಂಜಾಬ್ 4ನೇ ಬಾರಿ 200 ಪ್ಲಸ್ ಮೊತ್ತವನ್ನು ಬೆನ್ನಟ್ಟಿ ಗೆದ್ದಿತು. ಆರ್‌ಸಿಬಿ 21 ವೈಡ್‌ಗಳನ್ನು ಎಸೆದು ಐಪಿಎಲ್‌ನಲ್ಲಿ ಅನಪೇಕ್ಷಿತ ದಾಖಲೆ ಬರೆಯಿತು. ಪಂಜಾಬ್ 2011ರಲ್ಲಿ 19 ವೈಡ್ ಎಸೆದಿದ್ದು ಹಿಂದಿನ ಗರಿಷ್ಠ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts