ಮದುವೆಗೆ ಕುತ್ತು ತಂದ ಫೇಸ್‌ಬುಕ್ ನಕಲಿ ಪೋಸ್ಟ್!

face book
Published on

ಮದ್ದೂರು: ನಿಶ್ಚಿತಾರ್ಥವಾಗಿದ್ದ ಯುವತಿಯ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಅಕೌಂಟ್ ತೆರೆದು, ಬೇರೆ ವ್ಯಕ್ತಿಯ ಜತೆಗಿರುವ ಫೋಟೋ ಹಾಕಿದ ಪರಿಣಾಮ, ಮದುವೆಗೇ ಸಂಚಕಾರ ಬಂದ ಘಟನೆ ನಡೆದಿದೆ.

ಕಬ್ಬಾರೆ ಗ್ರಾಮದ ತಿಮ್ಮಯ್ಯ ಅವರ ಪುತ್ರಿ ಗೀತಾ (22) ಅವರಿಗೆ ಡಿ.ಹೊಸೂರು ಗ್ರಾಮದ ಹೀರೇಶ್‌ರೊಂದಿಗೆ ಮೇ 5ರಂದು ನಿಶ್ಚಿತಾರ್ಥವಾಗಿತ್ತು. ಮೇ 18ರಂದು ಮದುವೆ ನಿಗದಿಯಾಗಿತ್ತು.

ಈ ನಡುವೆ ಇದೇ ಗ್ರಾಮದ ರಾಜು ಮತ್ತವನ ಸ್ನೇಹಿತರು ಗೀತಾ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ರಾಜು ಮತ್ತು ಗೀತಾ ಅವರಿರುವ ಫೋಟೋಗಳನ್ನು ಹಾಕಿಬಿಟ್ಟಿದ್ದರು. ವಿಷಯ ತಿಳಿದ ವರನ ಕಡೆಯವರು ಗೀತಾ ಅವರ ಮನೆಗೆ ಬಂದು ‘ನಿಮ್ಮ ಪುತ್ರಿಗೆ ಬೇರೆ ಯುವಕನ ಜತೆ ಪ್ರೀತಿ ಇರುವ ಶಂಕೆಯಿದೆ. ಆದ್ದರಿಂದ ನಮಗೆ ಈ ಮದುವೆ ಇಷ್ಟವಿಲ್ಲ’ ಎಂದು ಹೇಳಿ ನಿಶ್ಚಿತಾರ್ಥಕ್ಕೆ ಪಡೆದಿದ್ದ 10 ಸಾವಿರ ರೂ. ವಾಪಸ್ ನೀಡಿ ಹೋಗಿದ್ದರು.

ಇದರಿಂದ ಮನ ನೊಂದ ಗೀತಾ ಗುರುವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅದೇ ಸಮಯಕ್ಕೆ ಅಲ್ಲಿಗೆ ಬಂದ ಆಕೆಯ ಅಣ್ಣ ಗಿರೀಶ್ ಆಕೆಯನ್ನು ಪಟ್ಟಣದ ಖಾಸಗಿ ಆಸ್ಪತ್ರೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಘಟನೆಗೆ ಕಾರಣದವರರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ನಿಶ್ಚಿತಾರ್ಥ ಆಗಿರುವ ಯುವಕನ ಜತೆಗೇ ಮುಂದೆ ಮದುವೆ ಆಗುವುದೋ ಇಲ್ಲವೋ ಎಂಬುದನ್ನು ಕಾಲವೇ ಹೇಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net