More

    ಮಕ್ಕಳಲ್ಲಿ ಸ್ವಂತಿಕೆ ಬೆಳೆಸಲು ಪಠ್ಯೇತರ ಚಟುವಟಿಕೆ ಅಗತ್ಯ

    ಚಿಕ್ಕಮಗಳೂರು: ಮಕ್ಕಳಲ್ಲಿ ಸ್ವಂತಿಕೆ ಮತ್ತು ಸೃಜನಶೀಲತೆ ಬೆಳೆಸಲು ಪಾಲಕರು ಮನೆಯಲ್ಲಿ ಮಕ್ಕಳಿಗೆ ಕಥೆ ಹೇಳುವುದು, ಹಾಡು ಹಾಡಿಸುವುದು, ನೃತ್ಯ ಮಾಡಿಸುವುದು, ವಾದ್ಯ ನುಡಿಸುವುದು ಸೇರಿ ಆಟೋಟಗಳಲ್ಲಿ ಪಾಲ್ಗೊಳ್ಳುವುದನ್ನು ಕಲಿಸಬೇಕು ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಸಲಹೆ ನೀಡಿದರು.

    ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿದ್ದ ಓಣಿ ಮನೆ ಪ್ರಕಾಶನದ 25ನೇ ಸಂಭ್ರಮೋತ್ಸವ ಕಾರ್ಯಕ್ರಮದಲ್ಲಿ ಸಾಹಿತಿ ಮೇಕನಗದ್ದೆ ಲಕ್ಷ್ಮಣ ಗೌಡ ವಿರಚಿತ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
    ಬದಲಾದ ವಿದ್ಯಮಾನಗಳಿಂದ ನಾವೆಲ್ಲ ಇಂದು ಕೃತ್ರಿಮವಾದ ಬದುಕನ್ನು ಬದುಕುತ್ತಿದ್ದೇವೆ. ವಿಸ್ಮತಿಗೊಳಗಾಗಿ ನಮ್ಮ ಪರಂಪರೆ, ಸಾಂಪ್ರದಾಯಿಕವಾಗಿ ಬಂದಿದ್ದ ವಿಜ್ಞಾನವನ್ನು ಮರೆಯುತ್ತಿದ್ದೇವೆ. ಹೀಗಾಗಿಯೇ ನಮ್ಮ ಮಕ್ಕಳು ಪುಸ್ತಕದ ಹುಳುಗಳಾಗುವ ಜತೆಗೆ ಅಂಕಗಳಿಸುವ ಯಂತ್ರಗಳಾಗಿವೆ ಎಂದು ಬೇರಸ ವ್ಯಕ್ತಪಡಿಸಿದರು.
    ತಂದೆ, ತಾಯಿ, ಅಜ್ಜ, ಅಜ್ಜಿ ಮನೆಯಲ್ಲಿ ಮಕ್ಕಳನ್ನು ಬೆಳೆಯಲು ಬಿಡಬೇಕು. ಇದರಿಂದ ಮಕ್ಕಳು ಸ್ವಂತಿಕೆ ಬೆಳೆಸಿಕೊಂಡು ಸೃಜನಶೀಲರಾಗುತ್ತಾರೆ. ಜತೆಗೆ ಮಾನಸಿಕ, ದೈಹಿಕವಾಗಿಯೂ ಸದೃಢರಾಗುತ್ತಾರೆ. ಮೇಕನಗದ್ದೆ ಲಕ್ಷ್ಮಣ ಗೌಡ ಅವರು ಸಾಹಿತಿ, ಸಂಶೋಧಕ, ಲೇಖಕರಾಗಿ ಬೆಳೆದಿರುವುದು ಮಲೆನಾಡಿನ ಹೆಮ್ಮೆಯ ಸಂಗತಿ. ಅವರು ರಾಷ್ಟ್ರಕವಿ ಕುವೆಂಪು ಮತ್ತು ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರಿಂದ ಪ್ರಭಾವಿತರಾಗಿದ್ದು ತಮ್ಮ ಬರಹಗಳಲ್ಲಿ ಅದರ ಛಾಪನ್ನು ಮೂಡಿಸುತ್ತಿದ್ದಾರೆ ಎಂದು ಶ್ಲಾಘಿಸಿದರು
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಶಾಕಿರಣ ಅಂಧ ಮಕ್ಕಳ ಶಾಲೆ ಅಧ್ಯಕ್ಷ ಡಾ. ಜೆ.ಪಿ.ಕೃಷ್ಣೇಗೌಡ, ಪುಸ್ತಕಗಳನ್ನು ಓದುವುದರಿಂದ ಮಸ್ತಕ ಬೆಳೆಯುವ ಜೊತೆಗೆ ನಮ್ಮ ಜ್ಞಾನ ವೃದ್ಧಿಸುತ್ತದೆ ಎಂದರು.
    ಸಾಹಿತಿ ಮೇಕನಗದ್ದೆ ಲಕ್ಷ್ಮಣ ಗೌಡ ಅವರನ್ನು ಸನ್ಮಾನಿಸಲಾಯಿತು. ಓಣಿಮನೆ ಪ್ರಕಾಶನದ ಮಹಾಪೋಷಕ ಎಂ.ಬಿ.ಲಕ್ಷ್ಮಣ ಅಧ್ಯಕ್ಷತೆ ವಹಿಸಿದ್ದರು. ಅಂತಾರಾಷ್ಟ್ರೀಯ ಕನ್ನಡ ಸಂಘಟನೆಗಳ ಒಕ್ಕೂಟದ ಸಂಚಾಲಕ ವಿ.ಎಂ.ಕುಮಾರಸ್ವಾಮಿ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಸಾಹಿತಿ ಡಾ. ಎಂ.ಪಿ.ಮಂಜಪ್ಪ ಶೆಟ್ಟಿ ಮಸಗಲಿ, ಭಾಷಾಂತರಕಾರ ಡಾ. ಡಿ.ಎಸ್.ಜಯಪ್ಪ ಗೌಡ, ನಿವೃತ್ತ ಶಾಸನ ತಜ್ಞ ಎಚ್.ಎಂ.ನಾಗರಾಜ ರಾವ್, ತಾಲೂಕು ಕಸಾಪ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ಇಂಜಿನಿಯರ್ ಅರವಿಂದ ಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts