More

    ಮಣಿಪಾಲದಲ್ಲಿ ವಿದ್ಯಾರ್ಥಿಗಳ ಸುಲಿಗೆ ಇಬ್ಬರು ಆರೋಪಿಗಳ ಬಂಧನ

    ಉಡುಪಿ: ಮಣಿಪಾಲದಲ್ಲಿ ವಿದ್ಯಾರ್ಥಿಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದ್ದು, ಶಿವಮೊಗ್ಗ ಜಿಲ್ಲೆ, ಟಿಪ್ಪುನಗರ ನಿವಾಸಿಗಳಾದ ಆಶಿಫ್(24) ಮತ್ತು ದಸ್ತಗೀರ್ ಬೇಗ್(24) ಬಂಧಿತ ಆರೋಪಿಗಳಾಗಿದ್ದಾರೆ.

    ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ತನಿಖೆ ಮುಂದುವರಿದಿದೆ ಎಂದು ಎಸ್‌ಪಿ ಎನ್.ವಿಷ್ಣುವರ್ಧನ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜ.31ರಂದು ಮಧ್ಯರಾತ್ರಿ 12.15ಕ್ಕೆ ಮಣಿಪಾಲ ಕೆಎಫ್‌ಸಿ ಬಿಲ್ಡಿಂಗ್ ಬಳಿ ಮಾತನಾಡುತ್ತಿದ್ದ ಒಬ್ಬ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯನ್ನು ನೋಡಿದ ಮೂವರು ಆರೋಪಿಗಳು ಸಿಗರೇಟ್ ಕೇಳುವ ನೆಪದಲ್ಲಿ ವಿದ್ಯಾರ್ಥಿನಿಯ ಬಳಿ ಬಂದು ಕುತ್ತಿಗೆಗೆ ಚಾಕು ಹಿಡಿದು ಬೆದರಿಸಿದ್ದಾರೆ. ಅವರ ಬಳಿಯಿದ್ದ 2 ಮೊಬೈಲ್‌ಗಳು 250 ರೂ. ನಗದು ಹಣ ಹಾಗೂ ಇಯರ್‌ಫೋನ್ ಸುಲಿಗೆ ಮಾಡಿ ಪರಾರಿಯಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಮತ್ತು ಡಿವೈಎಸ್‌ಪಿ ಸುಧಾಕರ ನಾಯಕ್ ಮೇಲುಸ್ತುವಾರಿಯಲ್ಲಿ ಆರೋಪಿಗಳನ್ನು ಪತ್ತೆ ಮಾಡುವಂತೆ ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ ಅವರ ನಾಯಕತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಅದರಂತೆ ಕಾರ್ಯಚರಣೆ ನಡೆಸಿ ಮಣಿಪಾಲದಲ್ಲಿಯೇ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಭಾನುವಾರ ಬೆಳಗ್ಗೆ ಮಣಿಪಾಲ ಪ್ಲಾನೆಟ್ ಕಫೆ ಹೊಟೆಲ್ ಸಮೀಪ ಬಂಧಿಸಿದ್ದಾರೆ. ಬಂಧಿತರಿಂದ ಹೋಂಡಾ ಸಿವಿಕ್ ಕಾರು, ಒಂದು ಮಾರಕಾಯುಧವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.

    ಪಿಎಸ್‌ಐ ರಾಜ್‌ಶೇಖರ ವಂದಲಿ, ಪ್ರೊಬೆಶನರಿ ಪಿಎಸ್‌ಐ ನಿರಂಜನ್ ಗೌಡ, ದೇವರಾಜ ಬಿರದಾರ, ಎಎಸ್‌ಐ ಶೈಲೇಶ್‌ಕುಮಾರ್, ಎಚ್‌ಸಿ ಮಹೇಶ್, ಅಬ್ದುಲ್ ರಜಾಕ್, ಥಾಮ್ಸನ್, ಪ್ರಸನ್ನ , ವಿಶ್ವಜಿತ್, ಪಿಸಿ ಮೊಹಮ್ಮದ್ ರಫೀಕ್, ಆದರ್ಶ ನಾಯ್ಕ, ಸಿಡಿಆರ್ ಘಟಕದ ದಿನೇಶ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು ಎಂದು ಎಸ್‌ಪಿ ವಿಷ್ಣುವರ್ಧನ್ ತಿಳಿಸಿದರು.

    ಬ್ಯಾಂಕ್ ಕಳ್ಳತನ ಸುಳಿವು ಲಭ್ಯ
    ಇತ್ತೀಚೆಗೆ ಮಿಶನ್‌ಕಾಂಪೌಂಡ್ ನಲ್ಲಿರುವ ಸಹಕಾರ ಬ್ಯಾಂಕ್ ಒಂದರಲ್ಲಿ ಜರುಗಿದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಸುಳಿವು ದೊರೆತಿದ್ದು, ತನಿಖೆ ನಡೆಯುತ್ತಿದೆ. ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಎಸ್‌ಪಿ ವಿಷ್ಣುವರ್ಧನ್ ತಿಳಿಸಿದರು. ಮಣಿಪಾಲದ ದಿಲೀಪ್ ಕುಮಾರ್ ರೈ ಎಂಬವರ ನರ್ಸರಿಯಲ್ಲಿ ಕೆಲಸಕ್ಕಿದ್ದ ಬಾಗಲಕೋಟೆ ಬಸವರಾಜ್ ಎಂಬಾತ ದಿಲೀಪ್ ಅವರಿಗೆ ಹಣಕ್ಕಾಗಿ ಬೆದರಿಕೆಯೊಡ್ಡಿ ಪರಾರಿಯಾಗಿದ್ದು, ಆತನನ್ನು ಬಾಗಲಕೋಟೆಯಲ್ಲಿ ಮಣಿಪಾಲ ಪೊಲೀಸರು ಬಂಧಿಸಿದ್ದಾರೆ ಎಂದು ಎಸ್‌ಪಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts