More

    ನೇತಾಜಿ ಸಾವಿನ ರಹಸ್ಯ ಬಹಿರಂಗವಾಗಲಿ…

    ಐಎನ್​ಎ ಸ್ಥಾಪಿಸಿ ಹೋರಾಡುವ ಮೂಲಕ ಬ್ರಿಟಿಷರಲ್ಲಿ ಭೀತಿ ಮೂಡಿಸಿದ್ದವರು ನೇತಾಜಿ ಸುಭಾಶ್ಚಂದ್ರ ಬೋಸ್. ವಿಮಾನ ದುರಂತದಲ್ಲಿ ಸಂಭವಿಸಿದೆ ಎನ್ನಲಾದ ಅವರ ಸಾವು ಇನ್ನೂ ರಹಸ್ಯಮಯವಾಗಿದೆ. ಅಖಂಡ ಭಾರತದ ಪ್ರಥಮ ಪ್ರಧಾನಿ ಎಂದೇ ಗುರುತಿಸಲಾಗುವ ನೇತಾಜಿಯವರ 126 ನೇ ಜನ್ಮದಿನವನ್ನು ಜ. 23ರಂದು ಆಚರಿಸಲಾಗುತ್ತಿದೆ.

    | ವಿ.ಎಂ. ಕುಲಕರ್ಣಿ

    ಭಾರತದ ಸ್ವಾತಂತ್ರ್ಯ ಸಂಗ್ರಾಮವು ಜಗತ್ತಿನ ಮೇಲೆ ಬಹಳ ಮಹತ್ವದ ಪರಿಣಾಮಗಳನ್ನು ಬೀರಿತ್ತು. ಎರಡನೇ ಮಹಾಯುದ್ಧದಲ್ಲಿ ಭಾರತದ ಪ್ರಭಾವ ಸಾಕಷ್ಟು ಇತ್ತು. ಅಹಿಂಸೆಯಿಂದ ಮಾತ್ರ ಸ್ವಾತಂತ್ರ್ಯ ದೊರೆಯಿತೆಂದು ಕೆಲವರು ಹೇಳಿಕೊಂಡು ಬಂದಿದ್ದಾರೆ. ಮಹಾತ್ಮಾ ಗಾಂಧೀಜಿ ಅವರನ್ನು ರಾಷ್ಟ್ರಪಿತ ಎಂದು ಮೊದಲು ಸಂಬೋಧಿಸಿದವರೇ ನೇತಾಜಿ ಸುಭಾಶ್ಚಂದ್ರ ಬೋಸ್. ನೇತಾಜಿಯವರು ಗಾಂಧಿಯವರನ್ನು ಎಂದೂ ವೈಯಕ್ತಿಕವಾಗಿ ವಿರೋಧಿಸಲಿಲ್ಲ. ಆದರೆ, ಗಾಂಧೀಜಿ ಹಿಂದಿದ್ದ ಕೆಲವು ನಾಯಕರು ಕಾಂಗ್ರೆಸ್​ನಲ್ಲಿ ಇಂತಹ ಪರಿಸ್ಥಿತಿ ನಿರ್ವಣವಾಗುವಂತೆ ನೋಡಿಕೊಂಡರು. ಅಂದಿನ ದೇಶದ ಎಲ್ಲ ಕಠಿಣ ಪರಿಸ್ಥಿತಿಗಳಿಗೂ ನೇತಾಜಿಯೇ ಹೊಣೆಗಾರರು ಎಂದು ಹೇಳಿ, ನ್ಯಾಯಸಮ್ಮತವಾಗಿ ಚುನಾಯಿತರಾದ ನೇತಾಜಿ ಕಾಂಗ್ರೆಸ್ ಅಧ್ಯಕ್ಷ ಪದವಿಗೆ ರಾಜೀನಾಮೆ ಕೊಡುವಂತೆ ಮಾಡಿದರು. 1948ರ ಜ. 29ರಂದು ಗಾಂಧೀಜಿಯವರು ಕಾಂಗ್ರೆಸ್ ವಿಸರ್ಜಿಸಿ ಎಂದು ಸೂಚಿಸಿದ್ದರು. ಅದರ ಮರುದಿನವೇ ಅವರ ಕೊಲೆಯಾಯಿತು.

    ಸುಭಾಶ್ಚಂದ್ರರು ನಿಷ್ಠಾವಂತರೂ ಧೈರ್ಯವಂತರೂ ಆಗಿದ್ದರು. ಸಿ.ಆರ್. ದಾಸ್ ಹಾಗೂ ಗಾಂಧೀಜಿ ಅವರಿಗೆ ತುಂಬಾ ಗೌರವ ಕೊಡುತ್ತಿದ್ದರು. ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸುತ್ತಿದ್ದರು. ಇದೇ ಧೈರ್ಯವು ಯುರೋಪ್ ಹಾಗೂ ಜಪಾನ್​ನಲ್ಲಿ ಅಲ್ಲಿಯ ನಾಯಕರ ಜೊತೆ ವ್ಯವಹರಿಸಲು ಸಹಾಯಕವಾಯಿತು.

    1928ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸೇನೆಯನ್ನು ಆರಂಭಿಸಿದರು. ಬ್ರಿಟಿಷ್ ಸರ್ಕಾರಕ್ಕೆ ಭಯವಾಯಿತು. ಭಗತ್​ಸಿಂಗ್, ಬಟುಕೇಶ್ವರದತ್ತ ಹಾಗೂ ರಾಜಗುರು ಅವರಿಗೆ ಗಲ್ಲು ಶಿಕ್ಷೆ ನಿಶ್ಚಯವಾದಾಗ ನೇತಾಜಿ ಗಾಂಧೀಜಿಗೆ ಪತ್ರ ಬರೆದು, ‘ಶಿಕ್ಷೆ ಇರಲಿ; ಆದರೆ, ಗಲ್ಲುಶಿಕ್ಷೆ ಬೇಡ’ ಎಂದು ಒಂದು ಹೇಳಿಕೆ ನೀಡಲು ವಿನಂತಿಸಿದರು. ಗಾಂಧೀಜಿ ಹೇಳಿಕೆ ನೀಡಿದ್ದರೆ ಆ ನಾಯಕರ ಪ್ರಾಣ ಉಳಿಯುತ್ತಿದ್ದವು ಎನ್ನಲಾಗಿದೆ.

    1928ರಲ್ಲಿ ನೇತಾಜಿಯವರು ಬಂಗಾಳ ಪ್ರದೇಶ ಕಾಂಗ್ರೆಸ್​ನ ಮಹಾ ಕಾರ್ಯ ದರ್ಶಿಯಾದರು. ನೇತಾಜಿಯವರ ಜನಪ್ರಿಯತೆ ಬ್ರಿಟಿಷ್ ಸರ್ಕಾರಕ್ಕೆ ಭಯ ಹುಟ್ಟಿಸಿತು. ಮೇಲಿಂದ ಮೇಲೆ ಜನಾಂದೋಲನಗಳನ್ನು ಆರಂಭಿಸಿದಾಗ ಬ್ರಿಟಿಷ್ ಸರ್ಕಾರ ಅವರನ್ನು ಬಂಧಿಸಿ ಮಂಡಾಲೆ ಜೈಲಿಗೆ ಕಳುಹಿಸಿತು. ನಂತರ ವೈದ್ಯಕೀಯ ಮಂಡಳಿ ಅವರಿಗೆ ಚಿಕಿತ್ಸೆಗೆ ಯೂರೋಪ್​ಗೆ ಹೋಗಲು ಅನುಮತಿ ನೀಡಿತು. ಸರ್ಕಾರ ಅವರನ್ನು 1927ರ ಜುಲೈ 15ರಂದು ಜೈಲಿನಿಂದ ಬಿಡುಗಡೆ ಮಾಡಿತು. ಆಗ ಬರ್ವ ದಿಂದ ಭಾರತಕ್ಕೆ ಬಂದು ಸಾರ್ವಜನಿಕ ಸೇವೆ ಆರಂಭಿಸಿದರು. ಬಂಗಾಲದ ಕಾಂಗ್ರೆಸ್ ಅಧ್ಯಕ್ಷರಾಗಿ ಚುನಾಯಿತರಾದರು. ಮದ್ರಾಸ್ ಕಾಂಗ್ರೆಸ್ ಅಧಿವೇಶನದಲ್ಲಿ ಸುಭಾಷ್ ಹಾಗೂ ನೆಹರೂ ಇಬ್ಬರನ್ನು ಜಂಟಿ ಮಹಾ ಕಾರ್ಯದರ್ಶಿಗಳಾಗಿ ನೇಮಿಸಲಾಯಿತು.

    1933ರ ಫೆಬ್ರವರಿ 13ರಂದು ಎಸ್​ಎಸ್ ಗಂಗೆ ಎಂಬ ಹಡಗಿನಲ್ಲಿ ಮುಂಬಯಿಯಿಂದ ಸ್ವಿಜರ್​ಲ್ಯಾಂಡ್ ತಲುಪಿದರು. ನೇತಾಜಿ ಭಾರತ ಬಿಟ್ಟು ಹೋಗಲಿ ಎನ್ನುವ ಉದ್ದೇಶದಿಂದ ಬ್ರಿಟಿಷ್ ಸರ್ಕಾರ ಅನುಮತಿ ನೀಡಿತ್ತು. ನೇತಾಜಿ ಯೂರೋಪಿನ ಎಲ್ಲ ದೇಶಗಳಲ್ಲಿ ಸಂಪರ್ಕ, ಸಹಾನುಭೂತಿ ಗಳಿಸಿದರು. 1933ರ ಮಾರ್ಚ್ 6ರಂದು ವೆನಿಸ್, ನಂತರ ವಿಯೆನ್ನಾಗೆ ತಲುಪಿದರು. ಆಸ್ಟ್ರಿಯ ದೇಶದ ಧುರೀಣರನ್ನು ಸಂರ್ಪಸಿ, ಭಾರತ ಸ್ವಾತಂತ್ರ್ಯ ಕುರಿತು ಅವರಲ್ಲಿ ಆಸಕ್ತಿ ಬೆಳೆಸಿದರು. ಬ್ರಿಟಿಷರು ಭಾರತದ ವಿರುದ್ಧ ಮಾಡಿದ್ದ ಅಪಪ್ರಚಾರವನ್ನು ಹೋಗಲಾಡಿಸಿ, ಭಾರತ ಸ್ವಾತಂತ್ರ್ಯದ ಬಗ್ಗೆ ಜೆಕೋಸ್ಲೋವಾಕಿಯ, ಪೋಲೆಂಡ್ ಸಹಾನುಭೂತಿ ವ್ಯಕ್ತಪಡಿಸಿದವು. 1934ರ ಮಾರ್ಚ್​ನಲ್ಲಿ ಜರ್ಮನಿ, ಇಟಲಿ, ಹಂಗೇರಿ-ರುಮೇನಿಯ, ಯುಗೋಸ್ಲಾವಿಯಾ-ಬಾಲ್ಕನ್ ದೇಶಗಳಿಗೆ ಭೇಟಿ ನೀಡಿದರು. ನಂತರ ಎರಡನೇ ಮಹಾಯುದ್ದ ಕಾಲದಲ್ಲಿ ಅವುಗಳ ಲಾಭ ಪಡೆದರು.

    ಯೂರೋಪ್ ಪ್ರವಾಸ ಮುಗಿಸಿ 1936ರ ಏಪ್ರಿಲ್ 18ರಂದು ಸಮುದ್ರ ಮಾರ್ಗವಾಗಿ ಮುಂಬೈಗೆ ಬಂದಿಳಿದರು. ತಕ್ಷಣ ಅವರನ್ನು ದಸ್ತಗಿರಿ ಮಾಡಿ ಮುಂಬೈನ ಆರ್ಥರ್ ರೋಡ್ ಜೈಲಿಗೆ ಕಳಿಸಲಾಯಿತು. ಒಂದು ತಿಂಗಳ ನಂತರ ಯರವಾಡ ಜೈಲಿಗೆ ಸ್ಥಳಾಂತರಿಸಲಾಯಿತು. ಬ್ರಿಟಿಷ್ ಸರ್ಕಾರ ಇವರನ್ನು ಆತಂಕವಾದಿಯೆಂದು ಆರೋಪಿಸಿತು. ನೇತಾಜಿ 11 ವರ್ಷ ಕಠೋರ ಜೈಲು ಶಿಕ್ಷೆ ಅನುಭವಿಸಿದರು. 1936ರ ಮೇ 20ರಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸುಭಾಷ್ ದಿನವನ್ನು ಆಚರಿಸಿತು. ಜನರ ದಂಗೆಗಳನ್ನು ಎದುರಿಸಲಾರದೆ ಬ್ರಿಟಿಷ್ ಸರ್ಕಾರ ಸುಭಾಷರನ್ನು ಡಾರ್ಜಿಲಿಂಗ್​ಗೆ ಕಳುಹಿಸಿತು. ಅಲ್ಲಿ ಅವರ ಆರೋಗ್ಯ ಹದಗೆಟ್ಟಿತು. 1936ರ ಡಿಸೆಂಬರ್ 17ರಂದು ಕಲ್ಕತ್ತಾ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಯಿತು. ಆರು ವರ್ಷಗಳ ನಂತರ ಮತ್ತೆ ಸಾರ್ವಜನಿಕ ಸಂಪರ್ಕ ದೊರೆಯಿತು.

    1938ರಲ್ಲಿ ಕಾಂಗ್ರೆಸ್ ಪಕ್ಷದ ಮಹಾಕಾರ್ಯದರ್ಶಿ ಆಚಾರ್ಯ ಜೆ.ಬಿ ಕೃಪಲಾನಿಯವರು 51ನೇ ಕಾಂಗ್ರೆಸ್ ಅಧಿವೇಶನದ ರಾಷ್ಟ್ರೀಯ ಅಧ್ಯಕ್ಷರೆಂದು ನೇತಾಜಿ ಹೆಸರನ್ನು ಘೊಷಿಸಿದರು. ನೇತಾಜಿಯವರು 1939ರಲ್ಲಿ ತ್ರಿಪುರಿಯಲ್ಲಿ ಪಟ್ಟಾಭಿ ಸೀತಾರಾಮಯ್ಯನವರನ್ನು ಸೋಲಿಸಿ ಪುನಃ ಅಧ್ಯಕ್ಷರಾಗಿ ಚುನಾಯಿತರಾದರು. ಗಾಂಧೀಜಿ, ಪಟೇಲ್, ನೆಹರು, ರಾಜಾಜಿ, ರಾಜೇಂದ್ರಪ್ರಸಾದ, ಮೌಲಾನ ಆಜಾದರ ಗುಂಪನ್ನು ಸೋಲಿಸಿ ಚುನಾಯಿತರಾಗಿದ್ದು ಮಹಾಘಟನೆ. ಗಾಂಧೀಜಿ ಇದನ್ನು ತಮಗಾದ ಅವಮಾನವೆಂದು ಬಗೆದು, ‘ಅದು ನನ್ನ ಸೋಲು’ ಎಂದರು. ಗಾಂಧೀಜಿ ಗುಂಪು ನೇತಾಜಿಗೆ ಅಧ್ಯಕ್ಷರ ಕಾರ್ಯಭಾರ ನಿರ್ವಹಿಸುವಲ್ಲಿ ಅಸಹಕಾರ ತೋರಿತು. ನಂತರ ಅವರು ಅಧ್ಯಕ್ಷ ಪದವಿ ತೊರೆದು, ಕಾಂಗ್ರೆಸ್​ನಲ್ಲಿಯೇ ಫಾರ್ವರ್ಡ್ ಬ್ಲಾಕ್ ಸ್ಥಾಪಿಸಿದರು.

    ಅಖಂಡ ಭಾರತದ ಪ್ರಥಮ ಪ್ರಧಾನಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೇತಾಜಿ ಕುಟುಂಬದ ಸದಸ್ಯರನ್ನು ಆಹ್ವಾನಿಸಿ ರ್ಚಚಿಸಿ ಮಾಹಿತಿ ಸಂಗ್ರಹಿಸಿದರು. ಮೋದಿ ಅವರು 2022ರ ಅಗಸ್ಟ್ 15ರಂದು ದೆಹಲಿಯ ಇಂಡಿಯಾ ಗೇಟ್​ನಲ್ಲಿ ನೇತಾಜಿ ಪ್ರತಿಮೆ ಅನಾವರಣಗೊಳಿಸುವಾಗ ಈ ರೀತಿ ಹೇಳಿದರು- ‘ನೇತಾಜಿಯವರು ನಿಸ್ಸಂಶಯವಾಗಿ, ನಿಶ್ಚಯವಾಗಿಯೂ ಅಖಂಡ ಭಾರತದ ಪ್ರಥಮ ಪ್ರಧಾನಿ. ಅಂದಿನ ಕಾಲಕ್ಕೆ 11 ರಾಷ್ಟ್ರಗಳು ಅವರ ಆಜಾದ್ ಹಿಂದ್ ಸರ್ಕಾರಕ್ಕೆ ಮನ್ನಣೆ ಕೊಟ್ಟಿದ್ದವು. 2ನೇ ಮಹಾಯುದ್ದದ ಕಾಲಕ್ಕೆ ಕೆಲವು ಅಚಾತುರ್ಯಗಳು ನಡೆದು ಜಪಾನ್ ಸೋತಿತು. ನೇತಾಜಿಯವರು ದೇಶದ ಪ್ರಥಮ ಪ್ರಧಾನಿಯಾಗಿ ಮಣಿಪುರದಲ್ಲಿ ತಿರಂಗಾ ಹಾರಿಸಿದರು. ಜಗತ್ತಿನ ಮಹಾನಾಯಕರು ನೇತಾಜಿ ಬಗ್ಗೆ ಭಾರಿ ಗೌರವ ಹೊಂದಿದ್ದರು. ನಾನು ಸಹ ಅವರ ಬಗ್ಗೆ ಅಪಾರವಾದ ಅಭಿಮಾನ ಗೌರವ ಹೊಂದಿದ್ದೇನೆ’.

    ಸಾವಿನ ಸುತ್ತ ಅನುಮಾನ: ನೇತಾಜಿ ಸಾವಿನ ಕುರಿತಂತೆ ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಮುಖರ್ಜಿ ಅಧ್ಯಕ್ಷತೆಯಲ್ಲಿ ವಾಜಪೇಯಿ ಸರ್ಕಾರ ವಿಚಾರಣಾ ಆಯೋಗ ನೇಮಿಸಿತು. ಮನಮೋಹನ್ ಸಿಂಗ್ ಸರ್ಕಾರ ಆಯೋಗದ ವರದಿಯನ್ನು ಸಂಸತ್ತಿನಲ್ಲಿ ಮಂಡಿಸದೇ ತಿರಸ್ಕರಿಸಿತು. ನ್ಯಾಯಮೂರ್ತಿ ಮುಖರ್ಜಿ ಅವರು, ನೇತಾಜಿ ವಿಮಾನ ಅಪಘಾತ ಆಗಿಲ್ಲವೆಂದು ಹೇಳಿಕೆ ಕೊಟ್ಟರು. ಅವರಿಗೆ ಭಾರತ ಮತ್ತು ರಷ್ಯಾ ಸರ್ಕಾರ ಸರಿಯಾದ ಮಾಹಿತಿ, ಸಹಕಾರ ನೀಡಲಿಲ್ಲವೆಂದು ವರದಿ ಆಗಿದ್ದವು. ನಂತರ ಬಂದ ಮೋದಿ ಸರ್ಕಾರಕ್ಕೂ ವಿನಂತಿಸಲಾಯಿತು. ವರದಿ ಸಂಸತ್ತಿನಲ್ಲಿ ಚರ್ಚೆಗೆ ಬರಲೇ ಇಲ್ಲ.

    ಅಸಡ್ಡೆ ಏಕೆ?: ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಥೆ ವಹಿಸಿ ನೇತಾಜಿ ಕುಟುಂಬದ ಸದಸ್ಯರಿಂದ ಮಾಹಿತಿ ಸಂಗ್ರಹಿಸಿದರು. ಅಲ್ಲದೆ, ನೇತಾಜಿಯವರ ಸ್ಥಾನಮಾನ ಕುರಿತು ಕೆಲ ನಿರ್ಧಾರ ಪ್ರಕಟಿಸಿದರು. ಅಮೆರಿಕದ ದಿವಂಗತ ಅಧ್ಯಕ್ಷ ಜಾನ್ ಎಫ್. ಕೆನಡಿಯವರ ಕೊಲೆ 1964ರಲ್ಲಿ ಡಲ್ಲಾಸನಲ್ಲಿ ನಡೆಯಿತು. ಇಂದಿಗೂ ಅಲ್ಲಿನ ಆಡಳಿತವು ಅವರ ಸಾವಿನ ಕುರಿತು ಏನಾದರೂ ಮಾಹಿತಿ ಸಿಕ್ಕುತ್ತದೆಯೇ ಎಂದು ಬೆನ್ನುಹತ್ತಿ ಪ್ರಯತ್ನಿಸುತ್ತಿದೆ. ಆದರೆ, ನಮ್ಮ ದೇಶದಲ್ಲಿ ನೇತಾಜಿ ಸಾವಿನ ಕುರಿತಂತೆ ಅಸಡ್ಡೆ ಇದೆ. ನೇತಾಜಿ ವಿಮಾನ ಅಪಘಾತದಲ್ಲಿ ಮರಣ ಹೊಂದಿಲ್ಲವೆಂದು ನ್ಯಾ. ಮುಖರ್ಜಿ ಆಯೋಗ ವರದಿ ಇದ್ದರೂ ಜಗತ್ತಿನಾದ್ಯಂತ ನೂರಾರು ಲೇಖಕರು ಅಭಿಪ್ರಾಯಪಟ್ಟಿದ್ದರೂ ಈ ವಿಷಯ ಹೊರ ಹಾಕಲು ಭಾರತ ಸರ್ಕಾರ ಏಕೆ ಹಿಂದು ಮುಂದು ನೋಡುತ್ತಿದೆ?

    ಹೆದರಿದ ಬ್ರಿಟಿಷರು: ನೇತಾಜಿಯವರ ಅಭಿಮಾನದಿಂದ ಬ್ರಿಟಿಷರು ಭಾರತ ಬಿಟ್ಟು ಹೋಗಬೇಕಾದ ಪರಿಸ್ಥಿತಿ ನಿರ್ವಣವಾಗಿತ್ತೆಂದು ಬ್ರಿಟಿಷ್ ಪ್ರಧಾನಿ ಆಟ್ಲಿ ಹೇಳಿದ್ದರು. ಭಾರತ ನೌಕಾಸೇನೆಯ 74 ಹಡಗುಗಳು ನೇತಾಜಿ ಭಾವಚಿತ್ರಗಳನ್ನು ಹಾಕಿಕೊಂಡು ಮುಂಬಯಿ ಬಂದರಿನಲ್ಲಿ ಸತ್ಯಾಗ್ರಹ ನಡೆಸಿದ್ದು ಇದಕ್ಕೊಂದು ದೊಡ್ಡ ಉದಾಹರಣೆ. ಆಗ ಸಾವಿರಾರು ಸಾವುನೋವುಗಳಾದವು. ಕೆಲವು ಬ್ರಿಟಿಷ್ ಅಧಿಕಾರಿಗಳನ್ನು ಕೊಲ್ಲಲಾಯಿತು. ಈ ಘಟನೆಗಳಿಂದ ಬೇಸತ್ತ ಹಾಗೂ ಹೆದರಿದ ಬ್ರಿಟಿಷ್ ಸರ್ಕಾರ ಭಾರತದಿಂದ ತೊಲಗಲು ನಿರ್ಧರಿಸಿತು ಎಂದೂ ಕೆಲ ನಾಯಕರ ಅಭಿಪ್ರಾಯವಾಗಿದೆ.

    ನೇತಾಜಿ ಬಗ್ಗೆ ಗಾಂಧಿ ಸದಭಿಪ್ರಾಯ: ಗಾಂಧೀಜಿಯವರು ಜರ್ಮನಿ ರೇಡಿಯೋದಿಂದ ಬರುವ ನೇತಾಜಿ ಭಾಷಣಗಳನ್ನು ಆಲಿಸುತ್ತಿದ್ದರು. ನೇತಾಜಿ ಇದ್ದಿದ್ದರೆ ದೇಶ ವಿಭಜನೆ ಆಗುತ್ತಿರಲಿಲ್ಲವೆಂದೂ ಕೆಲ ಕಾಂಗ್ರೆಸ್ ನಾಯಕರ ಎದುರು ಗಾಂಧೀಜಿ ಹೇಳಿದ್ದರು. ನೇತಾಜಿ ದೇಶತ್ಯಾಗ ಮಾಡಿ ಹೋದ ರೀತಿ, ಪರಿಸ್ಥಿತಿ ಗಾಂಧೀಜಿಯವರ ಮನಃ ಪರಿವರ್ತನೆ ಮಾಡಿತು. ಅವರ ಅಭಿಪ್ರಾಯ ಬದಲಾಗಿ ನೇತಾಜಿಯವರನ್ನು ಹೊಗಳತೊಡಗಿದರು.

    (ಲೇಖಕರು ನಿವೃತ್ತ ಕೆಎಎಸ್ ಅಧಿಕಾರಿ)

    ಗಂಡ-ಹೆಂಡಿರ ಜಗಳ ಚೂರಿ ಇರಿಯುವ ತನಕ; ಟೀ ಕೇಳಿದ್ದಕ್ಕೆ ಪತಿಗೆ ಚಾಕು ಚುಚ್ಚಿದ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts