More

    ನಿರೀಕ್ಷೆ-ಪರೀಕ್ಷೆ: ರಾಜ್ಯ ಬಜೆಟ್ ಅವಲೋಕನ..

    ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನವೇ ರೈತಾಪಿ ಜನರ ಮೇಲೆ ತಮಗಿರುವ ಬದ್ಧತೆಯನ್ನು ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಿದ್ದರು. ಈ ಬಾರಿ ಕೃಷಿರಂಗಕ್ಕೆ ಸಂಬಂಧಿಸಿ ಹಲವು ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಅಂತೆಯೇ, ವಿವಿಧ ಜನವರ್ಗಗಳ ಬಜೆಟ್​ನಿರೀಕ್ಷೆಯ ಅವಲೋಕನ ಇಲ್ಲಿದೆ.

    | ಶಿವಾನಂದ ತಗಡೂರು ಬೆಂಗಳೂರು

    ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿರುವ ಬಸವರಾಜ ಬೊಮ್ಮಾಯಿ ಅವರ ಮೇಲೆ ಜನ ಸಾಮಾನ್ಯರ ನಿರೀಕ್ಷೆ ಬೆಟ್ಟದಷ್ಟಿದೆ. ಚುನಾವಣಾ ವರ್ಷವಾದ ಕಾರಣ ರೈತರು, ಕಾರ್ವಿುಕರು, ಮೀನುಗಾರರು, ನೇಕಾರರು ಸೇರಿದಂತೆ ಎಲ್ಲಾ ವರ್ಗದ ಜನರನ್ನೊಳಗೊಳ್ಳುವ ಯೋಜನೆಗಳನ್ನು ಘೋಷಣೆ ಮಾಡಬಹುದೇ ಎಂದು ಆಸೆಗಣ್ಣಿನಿಂದ ನೋಡುತ್ತಿದ್ದಾರೆ. ಮೋದಿ ಸರ್ಕಾರ ಕಿಸಾನ್ ಸಮ್ಮಾನ್ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿರುವ ಮಾದರಿಯಲ್ಲಿ ರಾಜ್ಯದಲ್ಲಿಯೂ ತರಬೇಕು ಎನ್ನುವ ನಿಟ್ಟಿನಲ್ಲಿ ಕಸರತ್ತು ನಡೆದಿದೆ.

    ಸಿದ್ದರಾಮಯ್ಯ ಸರ್ಕಾರದಲ್ಲಿ ಅನ್ನಭಾಗ್ಯದಿಂದ ಹಿಡಿದು, ಹಲವು ಭಾಗ್ಯಗಳ ಯೋಜನೆಗಳ ಹೊಳೆಯನ್ನೆ ಹರಿಸಲಾಗಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೈತಾಪಿ ಜನರಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, ಸೈಕಲ್ ಭಾಗ್ಯ, ಭಾಗ್ಯಲಕ್ಷ್ಮಿ ಯೋಜನೆ ಜನಪ್ರಿಯ ಯೋಜನೆಗಳಾಗಿದ್ದವು. ಎನ್​ಡಿಆರ್​ಎಫ್ ನಿಯಮಾವಳಿಗಳನ್ನು ಮೀರಿ ರೈತರಿಗೆ ಬೆಳೆ ಪರಿಹಾರ, ಮನೆ ಹಾನಿ ಪರಿಹಾರ ದುಪ್ಪಟ್ಟು ಮಾಡಿದ್ದು ಇತಿಹಾಸ. ನೆರೆಹಾವಳಿ ಸಂದರ್ಭದಲ್ಲಿ ತೆಗೆದುಕೊಂಡ ಈ ತೀರ್ವನದಿಂದ ಲಕ್ಷಾಂತರ ಜನರ ಬದುಕು ಹಸನಾಗಿದೆ. ಇದೇ ಮಾದರಿ ಯೋಜನೆಯನ್ನು ತರಬೇಕು ಎನ್ನುವ ತುಡಿತ ಮುಖ್ಯಮಂತ್ರಿಗಳಲ್ಲಿದೆ. ರೈತಾಪಿ ಸಮುದಾಯ ದೊಡ್ಡಪ್ರಮಾಣದಲ್ಲಿರುವ ಕಾರಣ, ಅವರನ್ನು ತಲುಪುವ ಮತ್ತು ಪ್ರತಿಯೊಬ್ಬರಿಗೂ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಏನೇನು ಯೋಜನೆಗಳನ್ನು ರೂಪಿಸಬಹುದು ಎಂದು ಸಿಎಂ ಆಪ್ತವಲಯ ಚರ್ಚೆ ಮಾಡಿದೆ.

    ಚಿತ್ರೋದ್ಯಮ: ಚಿತ್ರೋದ್ಯಮದ ಬೇಡಿಕೆಗಳನ್ನು ಈಡೇರಿಸುವಂತೆ ನಿರಂತರ ಪ್ರಯತ್ನ ನಡೆಯುತ್ತಲೇ ಇದೆ. ಈ ಬಾರಿ ಕಿರುತೆರೆ ಸೇರಿದಂತೆ ಚಿತ್ರೋದ್ಯಮವನ್ನು ಆದ್ಯತೆಯಾಗಿಟ್ಟುಕೊಂಡು ಜನತಾ ಚಿತ್ರಮಂದಿರ ಕಲ್ಪನೆಯಲ್ಲಿ ಯೋಜನೆ ಪ್ರಕಟಿಸುವ ಮತ್ತು ಕನ್ನಡ ಚಿತ್ರಗಳ ಸಬ್ಸಿಡಿ ಹೆಚ್ಚಳ, ಪ್ರಶಸ್ತಿ ಹಣ ದುಪ್ಪಟ್ಟು ಮಾಡುವ ಸಾಧ್ಯತೆ ಇದೆ.

    ಸಬ್ಸಿಡಿ ಬೇಡಿಕೆ: ಬಿತ್ತನೆ ಬೀಜ, ರಸಗೊಬ್ಬರದಿಂದ ಹಿಡಿದು, ಯಂತ್ರೋಪಕರಣಗಳ ತನಕ ಎಲ್ಲಾ ರೀತಿಯ ಸಬ್ಸಿಡಿಯನ್ನು ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮುಂದುವರಿಸಬೇಕು ಎನ್ನುವುದು ರೈತರ ಬೇಡಿಕೆ.

    ರೈತರಿಗೆ ವಿಮಾ ಪಾಲಿಸಿ: ತೆಲಂಗಾಣದಲ್ಲಿ ರಾಜ್ಯ ಸರ್ಕಾರವೇ ಪ್ರತಿ ರೈತರಿಗೆ 5 ಲಕ್ಷ ರೂ ವಿಮೆ ಮಾಡಿಸಿದೆ. ಅದೇ ಮಾದರಿಯಲ್ಲಿ ಇಲ್ಲಿಯೂ ರೈತ ವಿಮಾ ಯೋಜನೆ ಜಾರಿಗೆ ಬರಬೇಕು. ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವ ಕೇಂದ್ರಗಳನ್ನು ಪ್ರತಿ ಹೋಬಳಿಯಲ್ಲಿ ಪ್ರಾರಂಭಿಸಬೇಕು. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಬೆಳೆಹಾನಿಗೆ ಪರಿಹಾರವನ್ನು ವೈಜ್ಞಾನಿಕ ನೆಲೆಯಲ್ಲಿ ಕೊಡಬೇಕು. ಪ್ರತಿ ಬೆಳೆಗೂ ವಿಮಾ ಪಾಲಿಸಿಯನ್ನು ರಾಜ್ಯ ಸರ್ಕಾರವೇ ಜಾರಿಗೊಳಿಸಬೇಕು ಎನ್ನುವ ನಿರೀಕ್ಷೆಗಳಿವೆ.

    ಕಬ್ಬು ದರ ನಿಗದಿ: ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಸರ್ಕಾರ ಸ್ಪಂದನೆ ನೀಡುತ್ತಾ ಬಂದಿದ್ದರೂ, ಅವರ ಪೂರ್ಣ ಬೇಡಿಕೆಗಳು ಈಡೇರಿಲ್ಲ. ಎಫ್​ಆರ್​ಪಿ ಬದಲು, ರೈತನ ಹೊಲದಲ್ಲಿಯೇ ದರ ನಿಗದಿ ಆಗುವ ವ್ಯವಸ್ಥೆ ಬರಬೇಕು ಎಂಬುದು ರೈತರ ಬೇಡಿಕೆ.

    ಅಮೃತ ಯೋಜನೆ ಮಾದರಿ: ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ಅಮೃತ ಯೋಜನೆಗಳನ್ನು ಪ್ರಕಟಿಸಿದ್ದರು. ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಯೋಜನೆ ಘೋಷಿಸಿದ್ದು, ಬೊಮ್ಮಾಯಿ ಅವರಿಗೆ ದೊಡ್ಡ ಮೈಲೇಜ್ ನೀಡಿತ್ತು. ಟ್ರ್ಯಾಕ್ಟರ್​ ಹೊಂದಿರುವ ರೈತರಿಗೆ ಡೀಸೆಲ್​ಗೆ ಸಬ್ಸಿಡಿ ನೀಡಿದ ರೂಪದಲ್ಲಿಯೇ ಮತ್ತೊಂದು ಯೋಜನೆ ರೂಪುಗೊಳ್ಳುವ ಸಾಧ್ಯತೆ ಇದೆ.

    ಸಾಲಮನ್ನಾ ಆಗುವುದೆ?: ದೇವೇಗೌಡರು ಸಿಎಂ ಆಗಿದ್ದಾಗ ಶುರುವಾದ ರೈತರ ಸಾಲಮನ್ನಾ ಯೋಜನೆ, ಜಗದೀಶ ಶೆಟ್ಟರ್, ಸಿದ್ದರಾಮಯ್ಯ, ಕುಮಾರಸ್ವಾಮಿ ಸಿಎಂ ಆಗಿದ್ದಾಗಲೂ ಮುಂದುವರಿಯಿತು. 50 ಸಾವಿರದಿಂದ ಹಿಡಿದು 1 ಲಕ್ಷ ತನಕ ರೈತರ ಸಾಲ ಮನ್ನಾ ಮಾಡಲಾಗಿತ್ತು. ಈ ಬಾರಿಯೂ ಸಾಲಮನ್ನಾ ಮಾಡುವ ಮೂಲಕ ಬಿಜೆಪಿ ಸರ್ಕಾರ ತಮ್ಮ ಪರವಾಗಿ ನಿಲ್ಲಲಿದೆ ಎನ್ನುವುದು ರೈತಾಪಿ ಜನರ ನಿರೀಕ್ಷೆಯಾಗಿದೆ.

    ರೈತರಿಗೆ ದಾಖಲೆ ಲಭ್ಯತೆ: ರೈತರು ಜಮೀನಿನ ದಾಖಲಾತಿಗಳನ್ನು ಸರಿಪಡಿಸಿಕೊಳ್ಳಲು ನಾಡ ಕಚೇರಿ, ತಹಸೀಲ್ದಾರ್ ಕಚೇರಿಗಳಿಗೆ ಎಡ ತಾಕುವುದು, ಪಹಣಿ, ಪೋಡಿ, ದುರಸ್ತಿ ಮಾಡಿಸಿಕೊಳ್ಳಲು ಹರಸಾಹಸ ಮಾಡುವುದು ಇನ್ನೂ ತಪ್ಪಿಲ್ಲ. ಆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆಯೊಂದನ್ನು ಬಜೆಟ್​ನಲ್ಲಿ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ನಗರವಾಸಿಗಳಿಗೆ ಸಿಹಿ ಸುದ್ದಿ: ನಗರ ಪ್ರದೇಶಗಳಲ್ಲಿ ಬಿಜೆಪಿ ಗಟ್ಟಿ ನೆಲೆ ಹೊಂದಿರುವುದನ್ನು ಉಳಿಸಿಕೊಳ್ಳಲು ಮತ್ತು ನಗರ ಮತದಾರರ ಮೇಲೆ ಇನ್ನಷ್ಟು ಪ್ರಭಾವ ಸಾಧಿಸಲು ಅನುಕೂಲವಾಗುವಂತೆ ಯೋಜನೆಗಳನ್ನು ತರಲು ಚಿಂತನೆ ನಡೆದಿದೆ. ಮಧ್ಯಮ ವರ್ಗದ ಜನರು ಮತ್ತು ಶ್ರಮಿಕ ಜನರು, ಕೂಲಿ ಕಾರ್ವಿುಕರು ನಗರದಲ್ಲಿ ಸೂರು ಕಾಣುವುದು ಕನಸಾಗಿಯೇ ಉಳಿದಿದೆ. ಅದಕ್ಕಾಗಿ ವಿಶೇಷ ವಸತಿ ಯೋಜನೆ ರೂಪಿಸಲು ಒತ್ತು ನೀಡಲಾಗುತ್ತಿದೆ. ನಗರದ ಅಭಿವೃದ್ಧಿಗೂ ಹೆಚ್ಚಿನ ಅನುದಾನ ನೀಡಲು ನಿರ್ಧರಿಸಲಾಗಿದೆ.

    ಹೈನುಗಾರರಿಗೆ ಉತ್ತೇಜನ: ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಸರ್ಕಾರದಲ್ಲಿ ಹೈನುಗಾರರಿಗೆ ಉತ್ತೇಜನ ನೀಡಿದ ಮಾದರಿಯಲ್ಲಿ ಹಾಲಿನ ಪ್ರೋತ್ಸಾಹಧನ ಹೆಚ್ಚಳ ಮಾಡುವ ನಿರೀಕ್ಷೆ ಇದೆ. ಹೈನುಗಾರಿಕೆ ಅವಲಂಬಿಸುವ ರೈತಾಪಿ ಜನರಿಗೆ ಅನುಕೂಲ ಕಲ್ಪಿಸಲು ಸಬ್ಸಿಡಿ ಯೋಜನೆ ಜಾರಿಗೆ ತರುವ ಸಂಬಂಧ ಚರ್ಚೆಗಳು ನಡೆದಿವೆ.

    ಆವರ್ತ ನಿಧಿ ಸರಳ?: ಕೃಷಿ ಬೆಳೆಯ ಬೆಲೆ ಕುಸಿದ ಸಂದರ್ಭದಲ್ಲಿ ಮಾರುಕಟ್ಟೆ ಪ್ರವೇಶ ಮಾಡಿ ಸರ್ಕಾರವೇ ಖರೀದಿಸುವ ಪ್ರಕ್ರಿಯೆಗೆ ಇರುವ ನಿಯಮಾವಳಿಗಳ ಕಟ್ಟುಪಾಡುಗಳನ್ನು ಸಡಿಲಿಸಿ, ಸರಳ ನಿಯಮಾವಳಿ ರೂಪಿಸಲು ಚಿಂತನೆ ನಡೆದಿದೆ. ಆವರ್ತ ನಿಧಿಯನ್ನು ಕನಿಷ್ಠ 1 ಸಾವಿರ ಕೋಟಿ ರೂ.ಗೆ ಏರಿಕೆ ಮಾಡಬೇಕು ಎನ್ನುವುದು ರೈತರ ನಿರೀಕ್ಷೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts