More

    ಮುನಿಸು ತಣಿಸಲು ಕಸರತ್ತು; ಬಾಕಿ ನಾಲ್ಕು ಕ್ಷೇತ್ರ ಇಂದೇ ಅಂತಿಮ

    ಬೆಂಗಳೂರು: ಕಾಂಗ್ರೆಸ್ ವರಿಷ್ಠರಿಗೆ ತಲೆ ಬೇನೆ ತರಿಸಿದ್ದ 2 ಕ್ಷೇತ್ರಗಳ ಟಿಕೆಟ್ ಸಮರಕ್ಕೆ ಮದ್ದರೆಯುವಲ್ಲಿ ರಾಜ್ಯ ನಾಯಕರು ಯಶ ಕಂಡಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದ್ದು, ಬಾಗಲಕೋಟೆಯಲ್ಲಿ ಅಭ್ಯರ್ಥಿ ಘೋಷಣೆ ಬಳಿಕ ಭುಗಿಲೆದ್ದಿದ್ದ ಭಿನ್ನಮತ ತಣಿಸುವಲ್ಲೂ ಕೈಪಡೆ ಸಫಲವಾಗಿದೆ. ಇನ್ನು ಕೋಲಾರ, ಚಿಕ್ಕಬಳ್ಳಾಪುರದ ಜತೆಗೆ ಬಾಕಿ ಉಳಿದಿರುವ ಬಳ್ಳಾರಿ, ಚಾಮರಾಜನಗರ ಕ್ಷೇತ್ರಕ್ಕೂ ಶುಕ್ರವಾರ ಅಭ್ಯರ್ಥಿಗಳ ಹೆಸರು ಘೋಷಣೆ ಆಗಲಿದೆ. ಸಚಿವ ಮುನಿಯಪ್ಪ ಅವರ ಅಳಿಯನಿಗೆ ಟಿಕೆಟ್ ನೀಡುವುದಕ್ಕೆ ವಿರೋಧ ಸೂಚಿಸಿದ್ದ ಕೋಲಾರದ ಸಚಿವರು, ಶಾಸಕರು, ಪರಿಷತ್ ಸದಸ್ಯರು ಬುಧವಾರವಷ್ಟೇ ರಾಜೀನಾಮೆಯ ಹೈಡ್ರಾಮಾ ನಡೆಸಿದ್ದರು. ತಕ್ಷಣವೇ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಗುರುವಾರ ಕೋಲಾರ ನಾಯಕರ ಸಭೆ ನಡೆಸಿದರು. ಮುನಿಯಪ್ಪ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣಗಳ ಬಡಿದಾಟದಲ್ಲಿ ಗೌತಮ್ೆ ಟಿಕೆಟ್ ಅಂತಿಮಗೊಂಡಿರುವುದಾಗಿ ತಿಳಿದು ಬಂದಿದೆ.

    ಸಿಎಂ, ಡಿಸಿಎಂ ಸಭೆಯಲ್ಲಿ ಮಾಜಿ ಮೇಯರ್ ಪುತ್ರ ಗೌತಮ್ ಹೆಸರು ಚರ್ಚೆಗೆ ಬಂದಿದೆ. ತಮ್ಮ ಕುಟುಂಬಕ್ಕೆ ಟಿಕೆಟ್ ಕೊಡುವಂತೆ ಪಟ್ಟು ಹಿಡಿದಿರುವ ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣ ಕೂಡ ಗೌತಮ್ ಆಯ್ಕೆಯನ್ನು ಪರಿಗಣಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕೋಲಾರ ನಾಯಕರ ಸಭೆ ನಡೆಸಿದ ಸಿಎಂ, ಡಿಸಿಎಂ ಅಂತಿಮವಾಗಿ ಹೈಕಮಾಂಡ್ ಕೈಗೊಳ್ಳುವ ತೀರ್ವನಕ್ಕೆ ಎಲ್ಲರೂ ಬದ್ಧರಾಗಿರಬೇಕೆಂಬ ಷರತ್ತು ವಿಧಿಸಿದ್ದಾರೆ.

    ಮಾಧ್ಯಮಗಳ ಎದುರು ಪ್ರತಿಕ್ರಿಯಿಸದಂತೆಯೂ ನಿರ್ದೇಶನ ನೀಡಿದರು. ಇದಾದ ಬಳಿಕ ಎರಡನೇ ಹಂತದಲ್ಲಿ ಸಚಿವ ಮುನಿಯಪ್ಪ, ಪುತ್ರಿ ರೂಪಕಲಾ, ಅಳಿಯ ಚಿಕ್ಕಪೆದ್ದನ್ನ ಅವರೊಂದಿಗೆ ಸಭೆ ನಡೆಸಿದ ಸಿಎಂ, ಡಿಸಿಎಂ ಮಾಹಿತಿ ಪಡೆದುಕೊಂಡರು. ಈ ವೇಳೆ ಮುನಿಯಪ್ಪ ಅಳಿಯನಿಗೆ ಟಿಕೆಟ್ ಕೊಟ್ಟರೆ ಗೆಲ್ಲಿಸಿಕೊಂಡು ಬರುವ ಭರವಸೆ ನೀಡಿದರು. ಆದರೆ ನಿಮ್ಮ ಅಳಿಯನಿಗೆ ಶಾಸಕರ ವಿರೋಧವಿದೆ. ಬೇಕಿದ್ದರೆ ನಿಮಗೆ ಟಿಕೆಟ್ ಕೊಡುತ್ತೇವೆಂದು ಸಿಎಂ, ಡಿಸಿಎಂ ಮುನಿಯಪ್ಪಗೆ ಹೇಳಿದ್ದಾಗಿ ತಿಳಿದು ಬಂದಿದೆ.

    ವೀಣಾ ಕೋಪ ಶಮನ: ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾಗೆ ಟಿಕೆಟ್ ನೀಡಿರುವುದು ಟಿಕೆಟ್ ಆಕಾಂಕ್ಷಿಯಾಗಿದ್ದ ಶಾಸಕ ವಿಜಯಾನಂದ ಕಾಶಪ್ಪನವರ್ ಪತ್ನಿ ವೀಣಾ ಕೋಪಕ್ಕೆ ಕಾರಣವಾಗಿದೆ. ಕಳೆದೊಂದು ವಾರದಿಂದಲೂ ಅಸಮಾಧಾನ ಹೊರಹಾಕುತ್ತಲೇ ಇದ್ದ ಅವರನ್ನು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿಗೆ ಕರೆಸಿಕೊಂಡು ಚರ್ಚೆ ನಡೆಸಿದರು. ಈ ವೇಳೆ ಅಸಮಾಧಾನ ತೋಡಿಕೊಂಡ ವೀಣಾ ಲೋಕಸಭೆ ಚುನಾವಣೆಗೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ಜನ ಬೆಂಬಲ, ನಮ್ಮ ಸಮುದಾಯದ ಬೆಂಬಲ ಕೂಡ ಇದೆ. ಕಡೆಗಣಿಸಿದ್ದು ಸರಿಯಲ್ಲ. ಈಗಲೂ ಕಾಲ ಮಿಂಚಿಲ್ಲ. ಸಂಯುಕ್ತರನ್ನು ಸ್ಪರ್ಧೆಯಿಂದ ಹಿಂದೆ ಸರಿಸಿ ತಮಗೆ ಅವಕಾಶ ಮಾಡಿಕೊಡಬೇಕೆಂದು ಪಟ್ಟು ಹಿಡಿದರು. ಅಂತಿಮವಾಗಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಸ್ಥಾನವನ್ನು ತಮಗೆ ನೀಡುವುದಾಗಿ ಡಿಸಿಎಂ ಭರವಸೆ ನೀಡಿದ ಬಳಿಕ ವೀಣಾ ಕಾಶಪ್ಪನರ್ ಕೊಂಚ ಸಮಾಧಾನಗೊಂಡರೆಂದು ತಿಳಿದುಬಂದಿದೆ.

    ಹೈಕಮಾಂಡ್ ಅಸಮಾಧಾನ: ಕೋಲಾರ ಕ್ಷೇತ್ರದ ಬೆಳವಣಿಗೆ ಬಗ್ಗೆ ಹೈಕಮಾಂಡ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಒಮ್ಮತದಿಂದ ಅಭ್ಯರ್ಥಿ ಆಯ್ಕೆ ಮಾಡಬೇಕು, ರಾಜೀನಾಮೆಯಂತಹ ಬೆಳವಣಿಗೆ ಸರಿಯಲ್ಲ. ಇದರಿಂದ ಪಕ್ಷದ ಇಮೇಜ್​ಗೆ ಧಕ್ಕೆಯಾಗಲಿದೆಯಲ್ಲದೇ ಎದುರಾಳಿಗಳಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಇನ್ನು ಮುಂದೆ ಇಂತಹ ಬೆಳವಣಿಗೆ ನಡೆಯಕೂಡದೆಂದು ಎಚ್ಚರಿಕೆ ಸಂದೇಶ ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.

    ರಕ್ಷಾಗೆ ಸಿಎಂ ಅಭಯ: ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಮಾಜಿ ಸಚಿವ ಎಂ.ಆರ್. ಸೀತಾರಾಮ್ ಪುತ್ರ ರಕ್ಷಾ ರಾಮಯ್ಯಗೆ ಟಿಕೆಟ್ ನೀಡುವುದು ಖಾತ್ರಿಯಾಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳಾಗಿರುವ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹಾಗೂ ಮಾಜಿ ಸಚಿವ ಶಿವಶಂಕರ್ ರೆಡ್ಡಿ ಪಟ್ಟು ಹಿಡಿದಿದ್ದಾರೆ. ಮೊಯ್ಲಿ ದೆಹಲಿ ಮಟ್ಟದಲ್ಲಿ ತಮ್ಮ ಪ್ರಭಾವ ಬಳಸಲಾರಂಭಿಸಿದ್ದಾರೆ. ಇನ್ನೊಂದೆಡೆ ಶಿವಶಂಕರ ರೆಡ್ಡಿ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿ ದಾಳ ಉರುಳಿಸಿದ್ದಾರೆ. ರಕ್ಷಾ ರಾಮಯ್ಯಗೆ ಟಿಕೆಟ್ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಲವು ತೋರಿದ್ದಾರೆಂದು ತಿಳಿದು ಬಂದಿದೆ. ಜಿಲ್ಲೆಯ ಶಾಸಕರ ಅಭಿಪ್ರಾಯ ಕೂಡ ರಕ್ಷಾ ಪರವಾಗಿದೆ ಎಂದು ಹೇಳಲಾಗಿದೆ.

    ಶಿವಶಂಕರ ರೆಡ್ಡಿ ಎಚ್ಚರಿಕೆ: ಕೋಲಾರದಂತೆ ಚಿಕ್ಕಬಳ್ಳಾಪುರದಲ್ಲೂ ಶಾಸಕರ ಅಭಿಪ್ರಾಯಕ್ಕೆ ಮಾನ್ಯತೆ ಕೊಡಬೇಕೆಂಬ ಒತ್ತಾಯವಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಶಿವಶಂಕರ ರೆಡ್ಡಿ ವರಿಷ್ಠರನ್ನು ಎಚ್ಚರಿಸಿದ್ದಾರೆ. ಈಗಾಗಲೇ ನಮ್ಮ ಭಾಗದ ಎಲ್ಲ ಶಾಸಕರು, ಮಾಜಿ ಶಾಸಕರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಇಬ್ಬರ ಹೆಸರನ್ನು ಪಕ್ಷದ ಮುಂದೆ ಪ್ರಸ್ತಾಪಿಸಿದ್ದರು. ಹಿಂದುಳಿದ ವರ್ಗಕ್ಕೆ ಟಿಕೆಟ್ ಕೊಡುವುದಾದರೆ ವೀರಪ್ಪ ಮೊಯ್ಲಿ ಹಾಗೂ ಒಕ್ಕಲಿಗರಿಗೆ ಅವಕಾಶ ಕೊಡುವುದಾದರೆ ತಮ್ಮ ಹೆಸರು ಪ್ರಸ್ತಾವನೆ ಮಾಡಿದ್ದರು. ಇದೆಲ್ಲ ಪಕ್ಷದ ವೇದಿಕೆಯಲ್ಲಿ ಬಹಳಷ್ಟು ಚರ್ಚೆಯಾಗಿದೆ. ರಕ್ಷಾ ರಾಮಯ್ಯಗೆ ಇಲ್ಲಿನ ಪರಿಚಯ ಇಲ್ಲ. ಬಿಜೆಪಿ, ಜೆಡಿಎಸ್ ಸೇರಿ ಚುನಾವಣೆ ಮಾಡುತ್ತಿದ್ದಾರೆ. ಹೀಗಾಗಿ ಸ್ಟ್ರಾಂಗ್ ಅಭ್ಯರ್ಥಿ ಬೇಕಾಗುತ್ತದೆ, ಶಾಸಕರ ಅಭಿಪ್ರಾಯಕ್ಕೆ ಗಮನ ಕೊಡಲೇ ಬೇಕಾಗುತ್ತದೆ, ತಿರಸ್ಕರಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ

    ದಾವಣಗೆರೆಯಲ್ಲೂ ಕಾಂಗ್ರೆಸ್​ಗೆ ಇಕ್ಕಟ್ಟು: ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಂಚಿತ ಇನ್​ಸೈಟ್ಸ್ ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯಕುಮಾರ್ ಪಕ್ಷೇತರನಾಗಿ ಕಣಕ್ಕಿಳಿಯುವ ಸುಳಿವು ನೀಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಸಮೀಕ್ಷೆ ನಡೆಸುತ್ತಿದ್ದೇನೆ. ಇನ್ನಷ್ಟು ಅಭಿಪ್ರಾಯ ಪಡೆದ ಬಳಿಕ ಈ ಬಗ್ಗೆ ಸ್ಪಷ್ಟ ತೀರ್ಮಾನ ಪ್ರಕಟಿಸಲಿದ್ದೇನೆಂದು ಘೋಷಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts