More

    ಕಾರ್ಯಕಾರಿಣಿಗೆ ಮುತ್ತಿಗೆ ಯತ್ನ

    ಬೆಳಗಾವಿ: ರಾಜ್ಯ ಸರ್ಕಾರ ೋಷಿಸಿರುವ ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಮುತ್ತಿಗೆ ಹಾಕಲು ಯತ್ನಿಸಿದ ಕನ್ನಡಪರ ಸಂಘಟನೆಗಳ ಮುಖಂಡರನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದರು.

    ಮರಾಠ ಅಭಿವೃದ್ದಿ ಪ್ರಾಧಿಕಾರ ಸ್ಥಾಪನೆಗೆ ವಿರೋಧಿಸಿ ಶನಿವಾರ ನೀಡಲಾಗಿದ್ದ ಬಂದ್ ಕರೆ ಬೆಂಬಲಿಸಿ, ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಮುಂದಾದ ಕನ್ನಡಪರ ಸಂಘಟನೆಗಳ ಮುಖಂಡರನ್ನು ಪೊಲೀಸರು ತಡೆದರು. ಆದರೂ, ಬೆಳಗಾವಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಕೈಬಿಡುವಂತೆ ಪೊಲೀಸರು ಮನವಿ ಮಾಡಿದರೂ ಸ್ಪಂದಿಸದೆ, ಕನ್ನಡ ಸಾಹಿತ್ಯ ಭವನದಿಂದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ನಡೆಯುತ್ತಿರುವ ಸ್ಥಳಕ್ಕೆ ಮುತ್ತಿಗೆ ಹಾಕಲು ಹೊರಟರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಬಳಿಕ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ನೂರಕ್ಕೂ ಅಧಿಕ ಕನ್ನಡಪರ ಕಾರ್ಯಕರ್ತರನ್ನು ವಶಕ್ಕೆ ಪಡೆದರು.

    ಕನ್ನಡಪರ ಸಂಘಟನೆ ಮುಖಂಡ ಶ್ರೀನಿವಾಸ ತಾಳೂಕರ ಮಾತನಾಡಿ, ಬಿಜೆಪಿ ಸರ್ಕಾರ ತನ್ನ ರಾಜಕೀಯ ಸ್ವಾರ್ಥಕ್ಕೋಸ್ಕರ ಮರಾಠ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಮಾಡಿದೆ. ಆ ಮೂಲಕ ಕನ್ನಡಿಗರ ನಡುವೆ ವಿಷಬೀಜ ಬಿತ್ತುವ ಕಾರ್ಯ ಮಾಡುತ್ತಿದೆ. ಕೂಡಲೇ ರಾಜ್ಯ ಸರ್ಕಾರ ಮರಾಠ ಪ್ರಾಧಿಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಸರ್ಕಾರ ಪೊಲೀಸರನ್ನು ಮುಂದಿಟ್ಟುಕೊಂಡು ಕನ್ನಡಪರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕರವೇ ಪ್ರವೀಣ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಮಹಾಂತೇಶ ರಣಗಟ್ಟಿಮಠ, ರಾಜು ಕೋಲಾ, ಈರಣ್ಣ ಚೊಣ್ಣದ, ರಾಜೀವ ಹಿರೇಕುಡಿ, ಕಸ್ತೂರಿ ಬಾವಿ, ರಾಜು ಕೋಲಾರ, ಪ್ರಭಾ ಕಾಕತಿಕರ್ ಮತ್ತಿತರರು ಇದ್ದರು.

    ಬಂದ್‌ಗೆ ಜಿಲ್ಲಾದ್ಯಂತ ನೀರಸ ಪ್ರತಿಕ್ರಿಯೆ

    ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಬೆಳಗಾವಿ ಜಿಲ್ಲಾದ್ಯಂತ ಶನಿವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಮರಾಠಿಗರು ಹಾಗೂ ಕನ್ನಡಿಗರನ್ನೂ ಹೊಂದಿರುವ ಗಡಿ ಜಿಲ್ಲೆಯಲ್ಲಿ ಕನ್ನಡಪರ ಸಂಘಟನೆಗಳು ನೀಡಿದ್ದ ಕರೆಗೆ ಯಾರೊಬ್ಬರೂ ಓಗೊಡಲಿಲ್ಲ. ಬೆಳಗ್ಗೆಯಿಂದಲೇ ಮಾರುಕಟ್ಟೆಯಲ್ಲಿ ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಬಸ್ ಹಾಗೂ ಆಟೋರೀಕ್ಷಾ ಸಂಚಾರ ಸೇರಿದಂತೆ ಜನಜೀವನ ಎಂದಿನಂತೆಯೇ ಇತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts