More

    ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಅಸ್ಥಿರ: ಪ್ರೊ.ರವಿವರ್ಮಾ ಕುಮಾರ್ ಕಳವಳ

    ಮೈಸೂರು: ಕೇಂದ್ರ ಸರ್ಕಾರದಿಂದ ಈಗಿನ ಶಾಸಕಾಂಗಕ್ಕೆ ಉಸಿರಿಲ್ಲ. ಕಾರ್ಯಾಂಗವೂ ನಾಶವಾಗುತ್ತಿದೆ. ನ್ಯಾಯಾಂಗ ಕರ್ತವ್ಯದಿಂದ ದೂರ ಸರಿಯುತ್ತಿದೆ ಎಂದು ನಿವೃತ್ತ ಅಡ್ವಕೋಟ್ ಜನರಲ್ ನ್ಯಾಯಮೂರ್ತಿ ಪ್ರೊ.ರವಿವರ್ಮಾ ಕುಮಾರ್ ಕಳವಳ ವ್ಯಕ್ತಪಡಿಸಿದರು.


    ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ‘ಪ.ಮಲ್ಲೇಶ್; 90 ಭಾರತ ಜನತಂತ್ರದ ಸಮಕಾಲೀನ ತಲ್ಲಣಗಳು’ ಕುರಿತು 2 ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.


    ಇಡೀ ದೇಶವೇ ವಿವಿಧ ತಲ್ಲಣಕ್ಕೆ ಸಿಲುಕಿದ್ದು, ಭಾರತದ ಪ್ರಜಾತಂತ್ರದ ಆಧಾರವಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವನ್ನು ಅಸ್ಥಿರಗೊಳಿಸಲಾಗಿದೆ ಎಂದರು.


    ಮಣಿಪುರ ಘಟನೆ ಕುರಿತು ಬಾಯಿ ಬಿಡದ ಕೇಂದ್ರ ಸರ್ಕಾರಕ್ಕೆ ಲಕ್ವಾ ಹೊಡೆದಿದೆ. ಇದು ಸಂಸತ್‌ನಲ್ಲೂ ಚರ್ಚೆಯಾಗುತ್ತಿಲ್ಲ. ಪ್ರಧಾನಿಯೂ ಉತ್ತರ ನೀಡುತ್ತಿಲ್ಲ. ಸಂಸತ್‌ನಲ್ಲಿ ಪ್ರಶ್ನಿಸುವ ಸಂಸದರನ್ನು ಹೊರಹಾಕಿ ಅಮಾನತು ಮಾಡಲಾಗುತ್ತಿದೆ. ಮಾನವ ಹಕ್ಕುಗಳ ಸಂಘಟನೆಗಳ ಕತ್ತು ಹಿಸುಕುವ ಕೆಲಸ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.


    ಕಾರ್ಯಾಂಗದ ಮುಖ್ಯಸ್ಥರಾದ ರಾಷ್ಟ್ರಪತಿ ಅವರನ್ನು ಅವಮಾನಿಸಲಾಗುತ್ತಿದೆ. ಹೊಸ ಸಂಸತ್ ಭವನ ಉದ್ಘಾಟನೆ ಸೇರಿದಂತೆ ಪ್ರಮುಖ ಕಾರ್ಯಕ್ರಮಕ್ಕೆ ಆಹ್ವಾನಿಸದೆ ಅವರಿಗೆ ಅಗೌರವ ತೋರಲಾಗುತ್ತಿದೆ. ಇದು ಇವತ್ತಿನ ಭಾರತದ ಪರಿಸ್ಥಿತಿ ಎಂದು ಬೇಸರ ವ್ಯಕ್ತಪಡಿಸಿದರು.


    ಕೇಂದ್ರ ಸರ್ಕಾರವು ಜಂಟಿ ಕಾರ್ಯದರ್ಶಿ ಹುದ್ದೆಗೆ ಹೊರಗಿನ ವ್ಯಕ್ತಿಗಳನ್ನು ನೇರ ನೇಮಕಾತಿ ಮಾಡಿಕೊಳ್ಳುತ್ತಿದೆ. ಇವರು ಖಾಸಗಿ ಕಂಪನಿಯ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದಾರೆ. ಹೋರಾಟ ಮಾಡುವ ರೈತರ ಮೇಲೆ ಅಶ್ರುವಾಯು ಇನ್ನಿತರ ದೌರ್ಜನ್ಯ ಎಸಗುತ್ತಿರುವುದು ಈ ರೀತಿಯ ಅಧಿಕಾರಿಗಳು. ಇವರು ಕಾನೂನುಬಾಹಿರ ಆದೇಶ ಹೊರಡಿಸುತ್ತಿದ್ದಾರೆ ಎಂದು ಆರೋಪಿಸಿದರು.


    ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಸೇರಿದಂತೆ ಇತ್ತೀಚಿನ ಪ್ರಕರಣಗಳ ಕುರಿತ ಸುಪ್ರೀಂಕೋರ್ಟ್ ತೀರ್ಪು ಕಳವಳ ಮೂಡಿಸಿವೆ. ಇದಕ್ಕೂ ಜಾಣ ಮರೆವು ಬಂದಿದೆ. ಜನರಿಗೆ ಕೊನೆ ಆಶಾಕಿರಣವಾಗಿದ್ದ ಇದರಿಂದ ಏನು ನ್ಯಾಯ ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.


    ಮಸೀದಿ ಕೆಡವಿದವರಿಗೆ, ಮಸೀದಿ ಹೊಡೆದು, ಮಂದಿರ ಕಟ್ಟಲು ಆದೇಶಿಸಿದವರಿಗೆ ಭಾರತ ರತ್ನ, ವಿಶೇಷ ಸ್ಥಾನಮಾನ, ಸರ್ಕಾರದ ಪರವಾಗಿ ಕೇಸ್ ಹಾಕಿದವರಿಗೆ ಜ್ಞಾನಪೀಠ ಪ್ರಶಸ್ತಿ ಕೊಡಲಾಗಿದೆ ಎಂದು ಟೀಕಿಸಿದರು.


    ನ್ಯಾಯಾಂಗ ವ್ಯವಸ್ಥೆಗೆ ಸ್ವಾಯತ್ತೆ ದೊರೆಯಬೇಕು. ಅದಕ್ಕಾಗಿ ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲಿ ನ್ಯಾಯಾಲಯಗಳ ನ್ಯಾಯಾಧೀಶರ ನೇಮಕಕ್ಕೆ ರಾಷ್ಟ್ರೀಯ ಮಟ್ಟದ ನೇಮಕ ಸಂಸ್ಥೆ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದರು.


    ಸವಿತಾ ಪ.ಮಲ್ಲೇಶ್, ಸಿ.ಬಸವಲಿಂಗಯ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts