More

    ಶಿಕ್ಷಕರ ಕ್ಷೇತ್ರದ ಟಿಕೆಟ್ ರಮೇಶ್ ಶಂಕರಘಟ್ಟಗೆ ನಿರಾಸೆ

    ಶಿವಮೊಗ್ಗ: ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಕೊಡಗು ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಹೆಸರನ್ನು ಘೋಷಣೆ ಆಡುವ ಮೂಲಕ ಕೆಪಿಸಿಸಿ ನಾಯಕರು ಶಿವಮೊಗ್ಗ ಜಿಲ್ಲೆಯ ಟಿಕೆಟ್ ಆಕಾಂಕ್ಷಿಗಳನ್ನು ನಿರಾಸೆಗೊಳಿಸಿದ್ದಾರೆ. ಪ್ರಮುಖವಾಗಿ ಮತದಾರರ ನೋಂದಣಿಗೆ ಸಾಕಷ್ಟು ಪ್ರಯತ್ನ ಮಾಡುತ್ತಿದ್ದ ಕಾಂಗ್ರೆಸ್ ಜಿಲ್ಲಾ ವಕ್ತಾರ ರಮೇಶ್ ಶಂಕರಘಟ್ಟ ನಾಯಕರ ತೀರ್ಮಾನಕ್ಕೆ ಬೇಸತ್ತಿದ್ದಾರೆ.

    ಕಳೆದ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅವರು, ಈ ಬಾರಿ ಕಾಂಗ್ರೆಸ್ ಟಿಕೆಟ್ ಪಡೆದು ಕಣಕ್ಕಿಳಿಯುವ ಉಮೇದಿನಲ್ಲಿದ್ದರು. ಇದಕ್ಕೆ ಪೂರಕವಾಗಿ ಭೂಮಿಕೆಯನ್ನೂ ಸಿದ್ಧಪಡಿಸಿಕೊಂಡಿದ್ದರು. ಸಾಕಷ್ಟು ಮುಂಚಿತವಾಗಿಯೇ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು. ಜಿಲ್ಲಾ ಕಾಂಗ್ರೆಸ್‌ನಲ್ಲಿ ಪ್ರಭಾವ ಬೆಳೆಸಿಕೊಂಡಿದ್ದು ಮಾತ್ರವಲ್ಲದೇ ರಾಜ್ಯ ನಾಯಕರ ಸಂಪರ್ಕವನ್ನೂ ವೃದ್ಧಿಸಿಕೊಂಡು ಟಿಕೆಟ್‌ನ ವಿಶ್ವಾಸದಲ್ಲಿದ್ದರು. ಕೆಲವು ತಿಂಗಳಿನಿಂದ ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಪ್ರವಾಸ ನಡೆಸಿ ವಿವಿಧ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಸಂಪರ್ಕ ಬೆಳೆಸಿಕೊಂಡಿದ್ದರು. ಇದೀಗ ಕೆಪಿಸಿಸಿ ನಿರ್ಧಾರ ಸಹಜವಾಗಿಯೇ ಇವರಲ್ಲಿ ಬೇಸರ ಮೂಡಿಸಿದೆ.
    ಪದವೀಧರ ಕ್ಷೇತ್ರದ ಕುತೂಹಲ: ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡದ ಕೆಪಿಸಿಸಿ ನಾಯಕರು ಟಿಕೆಟ್ ಆಕಾಂಕ್ಷಿಗಳ ಕುತೂಹಲವನ್ನು ಜೀವಂತವಾಗಿರಿಸಿದ್ದಾರೆ. ವಿಧಾನಸಭೆಯಲ್ಲಿ ಸ್ಪರ್ಧಿಸುವ ಸಲುವಾಗಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಸೇರಿ ಚುನಾವಣೆ ಸೋಲಿನ ಬಳಿಕ ಕಾಂಗ್ರೆಸ್ ಸೇರ್ಪಡೆಯಾಗಿರುವ ಆಯನೂರು ಮಂಜುನಾಥ್ ಈ ಕ್ಷೇತ್ರದಲ್ಲಿ ಮತ್ತೊಂದು ಬಾರಿ ಅದೃಷ್ಟ ಪರೀಕ್ಷೆಗೆ ತವಕದಲ್ಲಿದ್ದಾರೆ. ನೈಋತ್ಯ ಪದವೀಧರ ಕ್ಷೇತ್ರದಿಂದ ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿರುವ ಎಸ್.ಪಿ.ದಿನೇಶ್ ಈ ಬಾರಿ ಟಿಕೆಟ್ ದೊರೆಯುವ ವಿಶ್ವಾಸದಲ್ಲಿದ್ದಾರೆ. ಮತದಾರರ ನೋಂದಣಿ ಕಾರ್ಯದಲ್ಲಿ ಸಕ್ರಿಯರಾಗಿರುವ ದಿನೇಶ್ ಆಗಲೇ ಪ್ರಚಾರವನ್ನೂ ಆರಂಭಿಸಿದ್ದಾರೆ. ಮತದಾರರ ಸಂಪರ್ಕ ತೀವ್ರಗೊಳಿಸಿದ್ದಾರೆ ಇನ್ನೊಂದೆಡೆ ಆಯನೂರು ಮಂಜುನಾಥ್ ಚುನಾವಣಾ ಕಚೇರಿಯನ್ನೂ ತೆರೆದಿದ್ದಾರೆ. ಇವರಿಬ್ಬರೊಂದಿಗೆ ಕಾಂಗ್ರೆಸ್ ಮುಖಂಡ ರಂಗಸ್ವಾಮಿ ಕೂಡಾ ಪದವೀಧರ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಕೆಪಿಸಿಸಿ ನಾಯಕರು ನೈಋತ್ಯ ಪದವೀಧರ ಕ್ಷೇತ್ರಕ್ಕೆ ಅಭ್ಯರ್ಥಿ ಅಂತಿಮಗೊಳಿಸದೇ ಇರುವುದನ್ನು ಗಮನಿಸಿದರೆ ಟಿಕೆಟ್ ಘೋಷಣೆ ಅಷ್ಟು ಸಲೀಸಲ್ಲ ಎಂಬುದು ಮನದಟ್ಟಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts