More

    ಉಕ್ಕುತ್ತಿದೆ ಅಂತರ್ಜಲ; ಆದರೂ ಖುಷಿಪಡುವುದೋ ಸಂಕಟಪಡುವುದೋ ರೈತ ಕನ್‌ಫ್ಯೂಸ್…!

    ಅಶೋಕ ಶೆಟ್ಟರ
    ಬಾಗಲಕೋಟೆ: ಜಿಲ್ಲೆಯ ಕೆಂದೂರಲ್ಲಿ ಜೀವಜಲ ಉಕ್ಕತೊಡಗಿದೆ. ಈ ಪವಾಡದಿಂದ ರೈತರು ಖುಷಿ ಪಡುವುದೋ, ಸಂಕಟ ಪಡುವುದೋ ಎಂದು ತಿಳಿಯದೆ ಕಂಗಾಲಾಗಿದ್ದಾರೆ.

    ವಿದ್ಯುತ್ ಮೋಟಾರ್ ಆನ್ ಮಾಡದೆಯೇ ದಿನ ಪೂರ್ತಿ ಕೊಳವೆ ಬಾವಿಯಿಂದ ನೀರು ಚಿಮ್ಮುತ್ತಿದೆ. ಒಂದೆರಡು ಕೊಳವೆ ಬಾವಿಗಳಲ್ಲಿ ಮಾತ್ರವಲ್ಲ, ಹತ್ತಾರು ಕೊಳೆವೆ ಬಾವಿಗಳಿಂದ ಅಪಾರ ನೀರು ಹೊರಬರುತ್ತಿದೆ. ನಿರಂತರ ನೀರು ಬಂದು ಜಮೀನುಗಳು ಕೆರೆಗಳಂತಾಗಿವೆ. ಇದರಿಂದ ನೂರಾರು ಎಕರೆ ಬೆಳೆ ಹಾನಿಯಾಗಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆಂದೂರ ಗ್ರಾಮದ ರೈತರಿಗೆ ಈ ವಿಚಿತ್ರ ಸಮಸ್ಯೆ ಕಾಡತೊಡಗಿದೆ.

    ಕಳೆದ ಎರಡು ದಶಕಗಳಿಂದ ಈ ಭಾಗದಲ್ಲಿ ಕೆರೆ ತುಂಬಿರಲಿಲ್ಲ. ಆಗ ಶಾಸಕ ಸಿದ್ದರಾಮಯ್ಯ ಐದು ಕೋಟಿ ಖರ್ಚು ಮಾಡಿ ಕೆರೆ ತುಂಬಿಸುವ ಯೋಜನೆಯನ್ನು ಅನುಷ್ಠಾನ ಮಾಡಿದ್ದರು. ಕೆರೆಗಳು ಭರ್ತಿ ಆದಾಗ ರೈತ ಸಮುದಾಯದಲ್ಲಿ ಸಂತಸ ತುಂಬಿತು.

    ಆದರೆ ಈ ಯೋಜನೆಯ ವ್ಯತಿರಿಕ್ತ ಪರಿಣಾಮವೋ ಎಂಬಂತೆ, ನೂರಾರು ಕೊಳವೆ ಬಾವಿಗಳು ರೀಚಾರ್ಜ್​​​​ ಆಗಿವೆ. ಕೆರೆ ಕೆಳಭಾಗದ ಜಮೀನುಗಳ ಕೊಳವೆ ಬಾವಿಗಳು ಉಕ್ಕತೊಡಗಿವೆ. ಕಳೆದ 20 ದಿನಗಳಿಂದ ಇಪ್ಪತ್ತನಾಲ್ಕು ಗಂಟೆಯೂ ಐದಾರು ಅಡಿ ನೀರು ಚಿಮ್ಮುತ್ತಿದೆ.

    ಕಳೆದ ವರ್ಷದವರೆಗೂ ಅಂತರ್ಜಲ ಕುಸಿತದಿಂದ ನೂರಾರು ಕೊಳವೆ ಬಾವಿ ಬತ್ತಿ ಹೋಗಿದ್ದವು. ಇದೀಗ ತುಂಬಿದ ಕೆರೆ ಮತ್ತು ಅಪಾರ ಮಳೆಯ ಪರಿಣಾಮ ಅಂತರ್ಜಲ ಹೆಚ್ಚಳ ಕಂಡಿದೆ. ಕೆರೆ ಸುತ್ತಮುತ್ತ ಪ್ರದೇಶದ ಕೊಳೆವೆ ಬಾವಿಗಳಲ್ಲಿ ನಾಲ್ಕೈದು ಇಂಚು ನೀರು ಹೊರಬರತೊಡಗಿದೆ. ಇದೆಲ್ಲದರ ಪರಿಣಾಮ, ನೂರಾರು ಎಕರೆ ಮೆಕ್ಕೆ ಜೋಳ, ಜೋಳ, ಅರಿಷಿಣ, ಶುಂಠಿ, ಕಬ್ಬು, ತರಕಾರಿ ಬೆಳೆಗಳು ಹಾಳಾಗಿವೆ.

    ಇಷ್ಟು ದಿನ‌ ಕೊಳವೆ ಬಾವಿ ಬತ್ತಿಹೋಗಿದೆ, ನೀರು ಇಲ್ಲ ಎಂದು ರೈತರು ಪರಿತಪಿಸುತ್ತಿದ್ದರು. ಈಗ ಅಂತರ್ಜಲ ಹೆಚ್ಚಾಗಿ ನೀರು ಹರಿಯುವುದು ನಿಲ್ಲುತ್ತಿಲ್ಲ ಎಂದು ಗೋಳಾಡುತ್ತಿದ್ದಾರೆ. ಇಷ್ಟಾದರೂ ಸ್ಥಳಕ್ಕೆ ಯಾವೊಬ್ಬ ಅಧಿಕಾರಿಯೂ ಭೇಟಿ ನೀಡಿಲ್ಲ, ರೈತರ ಕಷ್ಟ ಕೇಳಿಲ್ಲ. ಸ್ಥಳಕ್ಕೆ ತಜ್ಞರು ಭೇಟಿ ನೀಡಿ, ಸಮಸ್ಯೆ ಪರಿಹರಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಜತೆಗೆ, ಬೆಳೆ ಹಾನಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts