More

    ಕಂಟೇನ್​ಮೆಂಟ್​ ಜೋನ್​ಗಳಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷಾ ಕೇಂದ್ರಗಳಿದ್ದರೆ ಸ್ಥಳಾಂತರ; ಸಿದ್ಧತೆಗೆ ಸಚಿವ ಸುರೇಶ್​ಕುಮಾರ್​ ಸೂಚನೆ

    ಬೆಂಗಳೂರು: ಕೊರೋನಾ ಲಾಕ್​ಡೌನ್​ನಿಂದ ಸ್ಥಗಿತಗೊಂಡಿದ್ದ ಎಸ್ಎಸ್ ಎಲ್​ಸಿ ಪರೀಕ್ಷೆಗಳನ್ನು ನಡೆಸಲು ಅನುವಾಗುವಂತೆ ಎಲ್ಲ ಸಿದ್ದತೆಗಳನ್ನು ಈಗಿನಿಂದಲೇ ಪ್ರಾರಂಭಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್​ಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ರಾಜ್ಯದ ಎಲ್ಲ ಜಿಲ್ಲೆಗಳ ಶೈಕ್ಷಣಿಕ ಉಪನಿರ್ದೇಶಕರೊಂದಿಗೆ ಸೋಮವಾರ ಸುರೇಶ್​ಕುಮಾರ್​ ವಿಡಿಯೋ ಸಂವಾದ ನಡೆಸಿದರು. ಎಲ್ಲ ಜಿಲ್ಲೆಗಳಿಂದ ಬಂದ ಒಟ್ಟಾಭಿಪ್ರಾಯದಂತೆ ಪರೀಕ್ಷಾ ದಿನಾಂಕ ತಿಳಿಯಲು ಮಕ್ಕಳು ಉತ್ಸುಕರಾಗಿದ್ದಾರೆ. ತಮ್ಮ ಪರಿಶ್ರಮದ ಆಧಾರದಲ್ಲಿ ಪರೀಕ್ಷಾ ಫಲಿತಾಂಶವನ್ನು ಪಡೆಯಬೇಕೆಂದು ಬಯಸುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಕರೊನಾ ನಂತರದ ಸಾಮಾಜಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ಅವಶ್ಯಕವಿರುವ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪರೀಕ್ಷೆಗಳನ್ನು ನಿರ್ವಹಿಸುವ ಬಗ್ಗೆ ಕೂಡಲೇ ಗಮನ ಹರಿಸಬೇಕೆಂದು ಸೂಚಿಸಿದರು.

    ಇದನ್ನೂ ಓದಿ;  ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆಗಳು ಅನಿರ್ದಿಷ್ಟಾವಧಿಗೆ ಮುಂದೂಡಿಕೆ

    ಕರೊನಾ ಹಿನ್ನೆಲೆಯಲ್ಲಿ ರಾಜ್ಯದ ಜಿಲ್ಲೆಗಳನ್ನು ಕೆಂಪು, ಕಿತ್ತಳೆ, ಹಸಿರು ಮತ್ತು ಕಂಟೇನ್​ಮೆಂಟ್ ಪ್ರದೇಶ ಎಂದು ಗುರುತಿಸಿರುವ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳಲ್ಲಿ ಸ್ಥಳೀಯ ಅವಶ್ಯಕತೆಗೆ ಅನುಗುಣವಾಗಿ ಕೈಗೊಳ್ಳಬೇಕಿರುವ ಪರೀಕ್ಷಾ ಸಿದ್ಧತೆ ಕುರಿತು ವಿವರ ಪಡೆದರು. ಪರಸ್ಪರ ಅಂತರ ಕಾಪಾಡಿಕೊಳ್ಳಬೇಕಿರುವ ಈ ಸಂದರ್ಭದಲ್ಲಿ ಮಕ್ಕಳ ಮಾನಸಿಕ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪರೀಕ್ಷಾ ಸಿದ್ಧತೆಯನ್ನು ಜಾರಿಯಲ್ಲಿಡಬೇಕೆಂದು ಸೂಚಿಸಿದರು.

    ಮಾಸ್ಕ್, ಸ್ಯಾನಿಟೈಜರ್ ಹಾಗೂ ಜ್ವರ ತಪಾಸಣೆ ಕಡ್ಡಾಯ: ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಮಾಸ್ಕ್, ಸ್ಯಾನಿಟೈಜರ್ ಬಳಕೆ ಕಡ್ಡಾಯ. ಜತೆಗೆ, ಥರ್ಮಲ್ ತಪಾಸಣೆಗೆ ಒಳಪಡಿಸಿ ಪರೀಕ್ಷೆಗೆ ಹಾಜರುಪಡಿಸಲು ಕ್ರಮ ಕೈಗೊಳ್ಳಬೇಕು. ಜ್ವರದ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯನ್ನು ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು. ಯಾವುದೇ ವಿದ್ಯಾರ್ಥಿಯೂ ನೆಲದ ಮೇಲಾಗಲೀ, ಬಯಲಿನಲ್ಲಾಗಲೀ ಪರೀಕ್ಷೆ ಬರೆಯದಂತೆ ಎಚ್ಚರ ವಹಿಸಬೇಕು. ಅಗತ್ಯ ಡೆಸ್ಕ್, ಬೆಂಚ್​ಗಳನ್ನು ಅಸುಪಾಸಿನ ಶಾಲೆಗಳಿಂದ ಸಂಗ್ರಹಿಸಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಪರೀಕ್ಷಾ ವಾತಾವರಣವನ್ನು ಕಲ್ಪಿಸಬೇಕೆಂದು ಸಲಹೆ ನೀಡಿದರು.

    ಇದನ್ನೂ ಓದಿ; ಮುಕ್ತ ವಿವಿ ವಿದ್ಯಾರ್ಥಿಗಳೇ ಗಮನಿಸಿ, ಮನೆಯಿಂದಲೇ ಕಾಂಟಾಕ್ಟ್​ ಕ್ಲಾಸ್​ಗಳಿಗೆ ಹಾಜರಾಗಿ

    ಪರೀಕ್ಷಾ ಕೇಂದ್ರಗಳ ಸ್ಥಳಾಂತರ: ಕಂಟೈನ್​ಮೆಂಟ್ ವಲಯಗಳಲ್ಲಿರುವ ಪರೀಕ್ಷಾ ಕೇಂದ್ರಗಳ್ನು ಸುರಕ್ಷಿತ ವಲಯಗಳಿಗೆ ಸ್ಥಳಾಂತರಿಸುವುದು, ಉಪಕೇಂದ್ರಗಳನ್ನು ಸ್ಥಾಪಿಸುವುದು, ಪ್ರತಿ ಪರೀಕ್ಷಾ ಕೊಠಡಿಯಲ್ಲಿ ತಲಾ 24 ಮಕ್ಕಳ ಬದಲಿಗೆ ಕಡಿಮೆ ಸಂಖ್ಯೆಯ ಮಕ್ಕಳನ್ನು ಕೂಡಿಸುವುದು, ಪ್ರತಿ ಕೇಂದ್ರದಲ್ಲಿ ಕಡ್ಡಾಯವಾಗಿ ಸಿಸಿಕಕ್ಐಆಮರಾ, ವೈದ್ಯಕೀಯ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವುದು ಸೇರಿ ಸಮಗ್ರವಾದ ಕ್ರಿಯಾಯೋಜನೆ ತಯಾರಿಸಬೇಕೆಂದು ಸಚಿವರು ಸೂಚನೆ ನೀಡಿದರು.
    ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ವ್ಯವಸ್ಥೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಪರೀಕ್ಷಾ ಕೇಂದ್ರಗಳನ್ನು ಹಾಗೂ ಕೊಠಡಿಗಳನ್ನು ಹೆಚ್ಚಿಸಲು ಸ್ಥಳ ಪರಿಶೀಲನೆ ನಡೆಸಿ ಇಲಾಖಾ ಮುಖ್ಯಸ್ಥರಿಗೆ ಕೂಡಲೇ ವರದಿ ಸಲ್ಲಿಸಬೇಕೆಂದು ತಿಳಿಸಿದರು.

    ಆಂಗ್ಲ ಮಾಧ್ಯಮ ಪುನರ್ಮನನ ತರಗತಿಗಳ ಪ್ರಾರಂಭ: ಶಿಕ್ಷಣ ಇಲಾಖೆ ಚಂದನವಾಹಿನಿಯಲ್ಲಿ ಈಗಾಗಲೇ ಪರೀಕ್ಷಾರ್ಥಿಗಳಿಗೆ ಪುನರ್ಮನನ ತರಗತಿಗಳನ್ನು ನಡೆಸುತ್ತಿದ್ದು, ಈ ವಾರದಿಂದಲೇ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೂ ಪುನರ್ಮನನ ತರಗತಿಗಳನ್ನು ಪ್ರಾರಂಭಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇಲಾಖೆಯ ಮಕ್ಕಳವಾಣಿ ಯೂ-ಟ್ಯೂಬ್ ಚಾನೆನ್​ನಲ್ಲಿಯೂ ಸಹ ಪುನರ್ಮನನ ತರಗತಿಗಳು ವಿದ್ಯಾರ್ಥಿಗಳಿಗೆ ಲಭ್ಯವಿದ್ದು, ಎಸ್ಎಸ್ಎಲ್​ಸಿ ಪರೀಕ್ಷೆಗಳು ಇಷ್ಟರಲ್ಲಿಯೇ ನಡೆಯಲಿವೆ ಎಂದು ಮಕ್ಕಳು ಮತ್ತು ಪಾಲಕರಿಗೆ ಮನವರಿಕೆ ಮಾಡಬೇಕೆಂದು ಸಚಿವರು ಡಿಡಿಪಿ ಐಗಳಿಗೆ ಹೇಳಿದರು.

    ಪರೀಕ್ಷೆ ಸಿದ್ಧತೆಗೆ ಸಮಯ: ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುವ ಮೊದಲು ವಿಷಯವಾರು ಅವಶ್ಯಕ ದಿನಗಳ ಅಂತರವನ್ನು ಕಾಪಾಡಿಕೊಳ್ಳಲು ಯೋಜನೆ ರೂಪಿಸಬೇಕೆಂದು ಇಲಾಖಾ ಆಯುಕ್ತರಿಗೆ ಸೂಚಿಸಿದ ಸುರೇಶ್ ಕುಮಾರ್, ಈಗಾಗಲೇ ಬೇರೆ ಊರುಗಳಿಗೆ ತೆರಳಿರುವ ವಿದ್ಯಾರ್ಥಿಗಳಿಗೆ ಅವರು ಪ್ರಸ್ತುತ ಇರುವ ಸ್ಥಳಗಳಲ್ಲಿಯೇ ಹತ್ತಿರದ ಪರೀಕ್ಷಾ ಕೇಂದ್ರಗಳನ್ನು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವ ಕುರಿತಂತೆ ಕ್ರಿಯಾಯೋಜನೆ ರೂಪಿಸಬೇಕೆಂದು ಸೂಚಿಸಿದರು.

    ಎಸ್ಎಸ್ಎಲ್​ಸಿ ಪರೀಕ್ಷಾ ಸಿದ್ಧತೆ ಕುರಿತು, ಆನ್​ಲೈನ್​ನಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರಶ್ನೆ ಪತ್ರಿಕೆ-ಉತ್ತರ ಪತ್ರಿಕೆ ವಿನಿಮಯ, ಸಹಾಯವಾಣಿ ಮೂಲಕ ಸಂದೇಹಗಳ ನಿವಾರಣೆ, ಸ್ಥಳೀಯ ರೇಡಿಯೋ, ಕೇಬಲ್, ಟಿವಿ ಚಾನೆಲ್​ಗಳ ಮೂಲಕ ಬೋಧನಾ ಪ್ರಕ್ರಿಯೆ ನಿರ್ವಹಣೆ ಸೇರಿ ಇಲಾಖೆಯ ಜಿಲ್ಲಾಡಳಿತಗಳ ಹಲವು ಉಪಕ್ರಮಗಳನ್ನು ಶ್ಲಾಘಿಸಿದ ಸಚಿವರು, ಪರೀಕ್ಷೆಗಳನ್ನುತುಂಬಾ ಆತ್ಮವಿಶ್ವಾಸದಿಂದ ಎದುರು ನೋಡುತ್ತಿರುವ ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಇದೇ ರೀತಿಯ ಭರವಸೆ ಮೂಡಿಸುವ ಪ್ರಯತ್ನಗಳು ಪರೀಕ್ಷಾ ಪಕ್ರಿಯೆ ಪೂರ್ಣಗೊಳ್ಳುವವರೆಗೆ ನಿರಂತರವಾಗಿ ಜಾರಿಯಲ್ಲಿರಲಿ ಎಂದು ತಿಳಿಸಿದರು. ಇಲಾಖೆ ಆಯುಕ್ತ ಡಾ. ಕೆ.ಜಿ. ಜಗದೀಶ್ ಸೇರಿ ಹಿರಿಯ ಅಧಿಕಾರಿಗಳು ಹಾಜರಿದ್ದರು.

    ಇದೆಂಥ ದೌರ್ಭಾಗ್ಯ.. ಕೇರಳದ ಅತಿದೊಡ್ಡ ಅರಮನೆಯಲ್ಲಿ ಅದರ ಮಾಲೀಕ ವಾಸವಿದ್ದದ್ದು ಕೇವಲ ಒಂದು ತಿಂಗಳಷ್ಟೇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts