More

    5.15 ಕೋಟಿ ಮೌಲ್ಯದ ಡುಕಾಟಿ ಬೈಕ್‌ಗಳ ಮಾರಾಟ; ಹಣ ಲಪಟಾಯಿಸಿದ್ದ ಮಾಜಿ ಅಧಿಕಾರಿ ಸೆರೆ

    ಬೆಂಗಳೂರು: ದ್ವಿಚಕ್ರ ವಾಹನ ಮಾರಾಟ ಮಳಿಗೆಯಲ್ಲಿ ಕಂಪನಿಗೆ ತಿಳಿಯದಂತೆ 5.15 ಕೋಟಿ ರೂ. ಮೌಲ್ಯದ 21 ಬೈಕ್‌ಗಳ ಕಳವು ಮಾಡಿದ್ದ ಮಾಜಿ ಅಧಿಕಾರಿಯನ್ನು ವಿವೇಕನಗರ ಪೊಲೀಸರು ಬಂಧಿಸಿದ್ದಾರೆ.

    ಆಂಧ್ರಪ್ರದೇಶದ ಗುಂಟೂರು ಮೂಲದ ರಾಕೇಶ್ (38) ಬಂಧಿತ. ಆರೋಪಿಯಿಂದ 2.32 ಕೋಟಿ ರೂ. ಮೌಲ್ಯದ 10 ಡುಕಾಟಿ ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. 5 ಬೈಕ್‌ಗಳನ್ನು ಹೊರರಾಜ್ಯಕ್ಕೆ ಮಾರಾಟ ಮಾಡಿದ್ದು, ಜಪ್ತಿ ಮಾಡಲು ಕ್ರಮ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ವಿಕ್ಟೋರಿಯಾ ಲೇಔಟ್‌ನಲ್ಲಿ ಇರುವ ವಿಎಸ್‌ಟಿ ಡುಕಾಟಿ ಬೈಕ್ ಮಾರಾಟ ಮತ್ತು ಸರ್ವಿಸ್ ಮಳಿಗೆಯಲ್ಲಿ ಅಪರೇಷನ್ ಹೆಡ್ ಆಗಿ ರಾಕೇಶ್, ಐದು ವರ್ಷಗಳ ಕಾಲ ಕೆಲಸ ಮಾಡಿದ್ದ. ಇದರ ನಡುವೆ ಅಕ್ಟೋಬರ್ 20ರಂದು ರಾಕೇಶ್, ಅನಾರೋಗ್ಯ ನೆಪ ಹೇಳಿ ಏಕಾಏಕಿ ಕೆಲಸ ಬಿಟ್ಟಿದ್ದ. ಕಂಪನಿಯಿಂದ ಮಳಿಗೆ ವ್ಯವಹಾರದ ಬಗ್ಗೆ ಆಡಿಟ್ ಮಾಡಿದಾಗ 2019ರ ಜೂನ್ 7ರಿಂದ 2023ರ ಸೆಪ್ಟೆಂಬರ್ 15ರ ನಡುವೆ ವಿವಿಧ ಮಾದರಿ 21 ಡ್ಯುಕಾಟಿ ಬೈಕ್‌ಗಳು ಮಾರಾಟದ ಆಗಿದ್ದು, 5.15 ಕೋಟಿ ರೂ. ಕಂಪನಿ ಲೆಕ್ಕಕ್ಕೆ ಸಿಕ್ಕಿರುವುದಿಲ್ಲ.

    ಈ ಕುರಿತು ಕಂಪನಿ ಎಚ್‌ಆರ್ ಜನರಲ್ ಮ್ಯಾನೇಜರ್ ಸಿ.ಎನ್. ಮಹೇಶ್, ವಿವೇಕನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಆಪರೇಷನ್ ಹೆಡ್ ಆಗಿದ್ದ ರಾಕೇಶ್, ಕಂಪನಿ ಗಮನಕ್ಕೆ ಬಾರದಂತೆ ಆಫೀಸ್ ಸ್ಪೆಷಾಲಿಟಿ ಸಪ್ಲೈ ಹೆಸರಿನಲ್ಲಿ ಖಾಸಗಿ ಬ್ಯಾಂಕ್‌ನಲ್ಲಿ ಚಾಲ್ತಿ ಖಾತೆ ತೆರೆದಿದ್ದ. ಮಳಿಗೆಗೆ ಡ್ಯುಕಾಟಿ ಬೈಕ್ ಖರೀದಿ ಅಥವಾ ಎಕ್ಸ್‌ಚೇಂಜ್‌ಗೆ ಬರುತ್ತಿದ್ದ ಗ್ರಾಹಕರಿಗೆ ಹೆಚ್ಚಿನ ಬೆಲೆಯ ಬೈಕ್‌ಗಳನ್ನು ಡಿಸ್ಕೌಂಟ್ ನೆಪದಲ್ಲಿ ಕೊಡುವುದಾಗಿ ಆಮಿಷವೊಡ್ಡಿ ಬೇನಾಮಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದ. ಇದೇ ರೀತಿ 21 ಡುಕಾಟಿ ಬೈಕ್‌ಗಳನ್ನು ಮಾರಾಟ ಮಾಡಿ 5.15 ಕೋಟಿ ರೂ.ಅನ್ನು ದುರುಪಯೋಗ ಪಡಿಸಿಕೊಂಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಇದಲ್ಲದೆ, 2020ರ ಮಾರ್ಚ್ 30ರ ಆನಂತರ ದೇಶದಲ್ಲಿ ಬಿಎಸ್4 ವಾಹನಗಳ ನೋಂದಣಿ ನಿಷೇಧಿಸಲಾಗಿತ್ತು. ಆದರೂ ಸಹ ಆರೋಪಿ ರಾಕೇಶ್, ಹಲವು ವಾಹನಗಳನ್ನು ಅಕ್ರಮವಾಗಿ ಅರುಣಾಚಲ ಪ್ರದೇಶದ ಪ್ರಾದೇಶಿಕ ಸಾರಿಗೆ ಕಚೇರಿಗಳ ಅಧಿಕಾರಿಗಳನ್ನು ಮತ್ತು ಏಜೆಂಟ್‌ಗಳನ್ನು ಸಂಪರ್ಕ ಮಾಡಿ ನೋಂದಣಿ ಮಾಡಿಸಿದ್ದ. ಕದ್ದ 21 ಬೈಕ್‌ಗಳ ಪೈಕಿ 5 ವಾಹನಗಳು ಅಕ್ರಮ ನೋಂದಣಿ ಆಗಿರುವುದು ಗೊತ್ತಾಗಿದೆ. ಬಂಧಿತ ಆರೋಪಿಯಿಂದ 10 ಬೈಕ್‌ಗಳನ್ನು ಜಪ್ತಿ ಮಾಡಿದ್ದು, ಉಳಿದ ಬೈಕ್‌ಗಳನ್ನು ಬೇರೆ ಬೇರೆ ರಾಜ್ಯಗಳ ಗ್ರಾಹಕರಿಗೆ ಮಾರಾಟ ಮಾಡಿರುವ ಕಾರಣಕ್ಕೆ ಜಪ್ತಿ ಮಾಡಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts