More

    ಧಾರ್ಮಿಕ ಕಾರ್ಯದಲ್ಲಿ ಕಾಂಗ್ರೆಸ್ ತಾರತಮ್ಯ

    ಗಂಗಾವತಿ: ಹಿಂದು ಧಾರ್ಮಿಕ ಆಚರಣೆಯಲ್ಲಿ ಕಾಂಗ್ರೆಸ್ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದ್ದು, ಹನುಮಮಾಲೆ ವಿಸರ್ಜನೆ ಕಾರ್ಯಕ್ರಮದ ಬಗ್ಗೆ ನಿರ್ಲಕ್ಷ್ಯ ಮನೋಭಾವ ಹೊಂದಿದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

    ತಾಲೂಕಿನ ಹನುಮನಹಳ್ಳಿ ಬಳಿಯ ಅಂಜನಾದ್ರಿ ಬೆಟ್ಟದಲ್ಲಿ ಡಿ.24ರಂದು ನಡೆವ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮದ ವ್ಯವಸ್ಥೆ ಪರಿಶೀಲಿಸಿ ಸೋಮವಾರ ಮಾತನಾಡಿದರು. ರಾಜ್ಯ ಮತ್ತು ಅಂತಾರಾಜ್ಯದ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮವನ್ನು ತಾಲೂಕಾಡಳಿತ ಗಂಭೀರವಾಗಿ ಪರಿಗಣಿಸಿಲ್ಲ. ನಾಲ್ಕೇ ದಿನ ಉಳಿದಿದ್ದರೂ ಮೂಲಸೌಕರ್ಯದ ವ್ಯವಸ್ಥೆ ಕಾಣಿಸುತ್ತಿಲ್ಲ. ಈ ಹಿಂದೆ ಬಿಜೆಪಿ ಆಡಳಿತಾವಧಿಯಲ್ಲಿ ತಿಂಗಳ ಮುನ್ನವೇ ವ್ಯವಸ್ಥೆ ಕೈಗೊಳ್ಳಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ತಾಲೂಕಾಡಳಿತ ವಿಳಂಭ ಧೋರಣೆ ಅನುಸರಿಸುತ್ತಿದೆ. ಪಾದಾಯಾತ್ರಿಗಳು ಮತ್ತು ಮಾಲಾಧಾರಿಗಳ ಅನುಕೂಲಕ್ಕೆ ಸ್ನಾನಘಟ್ಟ, ಶೌಚಗೃಹ, ಆರೋಗ್ಯ ಸೇವೆ, ಕುಡಿವ ನೀರು, ಬೆಳಕಿನ ವ್ಯವಸ್ಥೆಯಾಗಬೇಕಿದ್ದು, ಹುಂಡಿ ಹಣವಿದ್ದರೂ ಪ್ರಸ್ತಾವನೆ, ಅನುಮತಿ ನೆಪದಲ್ಲಿ ನಿರ್ಲಕ್ಷಿಸಲಾಗುತ್ತಿದೆ ಎಂದು ದೂರಿದರು.

    ಪ್ರತ್ಯೇಕ ಅನುದಾನವಿಲ್ಲ: ಹಲವು ವರ್ಷಗಳಿಂದ ಮಾಲೆ ವಿಸರ್ಜನೆ ಕಾರ್ಯಕ್ರಮ ದೇವಾಲಯ ಹುಂಡಿ ಹಣದಲ್ಲಿ ನಿರ್ವಹಿಸಲಾಗುತ್ತಿದ್ದು, ಸರ್ಕಾರ ಪ್ರತ್ಯೇಕ ಅನುದಾನ ನೀಡಲ್ಲ. ಹುಂಡಿ ಹಣ 40ಲಕ್ಷ ರೂ.ಬಳಕೆಗೆ ಮುಜರಾಯಿ ಇಲಾಖೆ ಅನುಮತಿ ನೀಡಿದೆ. ಮಾಹಿತಿಯಿಲ್ಲದ ಸ್ಥಳೀಯ ಶಾಸಕ ಗಾಲಿ ಜನಾರ್ದನರೆಡ್ಡಿ, ರಾಜ್ಯ ಸರ್ಕಾರ 51ಲಕ್ಷ ರೂ. ನೀಡಿದೆ ಎಂದು ತಿಳಿಸಿದ್ದು ಸರಿಯಲ್ಲ. ಕಾರ್ಯಕ್ರಮ ವ್ಯವಸ್ಥೆ ಬಗ್ಗೆ ಶಾಸಕ ಜನಾರ್ದನರೆಡ್ಡಿ ತಾಲೂಕಿನಲ್ಲಿ ಒಂದೂ ಸಭೆ ನಡೆಸಿಲ್ಲ. ವಿವಿಧ ಇಲಾಖೆ ಅಧಿಕಾರಿಗಳ ನಡುವಿನ ಸಮನ್ವಯತೆ ಕೊರತೆಯಿಂದ ವ್ಯವಸ್ಥೆಯಲ್ಲಿ ವಿಳಂಬವಾಗುತ್ತಿದ್ದು, ಲೋಪ ಕಂಡುಬಂದಲ್ಲಿ ಅಧಿಕಾರಿಗಳನ್ನೇ ಹೊಣೆಯನ್ನಾಗಿಸಲಾಗುವುದು.

    ಮೂಲ ಸೌಕರ್ಯ ಒದಗಿಸಲು ತಾಲೂಕಾಡಳಿತ ತ್ವರಿತಗತಿಯಲ್ಲಿ ನಿರ್ಧಾರ ಕೈಗೊಳ್ಳುವಂತೆ ಒತ್ತಾಯಿಸಿದರು. ಪಾರ್ಕಿಂಗ್, ಪಾಕಶಾಲೆ, ತಾತ್ಕಾಲಿಕ ಸ್ನಾನಘಟ್ಟ, ಶೌಚಗೃಹ ವ್ಯವಸ್ಥೆ ಸ್ಥಳ ಪರಿಶೀಲಿಸಿದ ನಂತರ, ದೇವಾಲಯದ ಸಿಇಒ ಅರವಿಂದ ಸುತಗುಂಡಿಯೊಂದಿಗೆ ಕೈಗೊಳ್ಳಬೇಕಿರುವ ವ್ಯವಸ್ಥೆ ಬಗ್ಗೆ ಚರ್ಚಿಸಿದರು. ನಗರಸಭೆ ಸದಸ್ಯರಾದ ಪರಶುರಾಂ ಮಡ್ಡೇರ್, ನೀಲಕಂಠಪ್ಪ ಕಟ್ಟಿಮನಿ, ನವೀನ್ ಮಾಲಿಪಾಟೀಲ್, ಜಿಪಂ ಮಾಜಿ ಸದಸ್ಯ ಎಚ್.ಎಂ.ಸಿದ್ರಾಮಯ್ಯಸ್ವಾಮಿ, ನಯೋಪ್ರಾ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ, ಬಿಜೆಪಿ ಮುಖಂಡರಾದ ಜಿ.ಶ್ರೀಧರ, ಎಚ್.ಸಂಗಮೇಶ, ಎಚ್.ಸಿ.ಯಾದವ್, ವೀರಭದ್ರಪ್ಪ ನಾಯಕ, ಜೋಗದ ಹನುಮಂತಪ್ಪನಾಯಕ, ಕಾಶೀನಾಥ ಚಿತ್ರಗಾರ, ಚನ್ನಪ್ಪ ಮಳಗಿ, ಶಿವಪ್ಪ ಮಾದಿಗ, ಗೌರೀಶ ಬಾಗೋಡಿ ಇತರರಿದ್ದರು.

    ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ಕೊರತೆ

    ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಹಿಂದಿನ ಬಿಜೆಪಿ ಆಡಳಿತಾವಧಿಯಲ್ಲಿ 120 ಕೋಟಿ ರೂ. ಬಿಡುಗಡೆಯಾಗಿರುವ ಬಗ್ಗೆ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಲಿಖಿತ ರೂಪದಲ್ಲಿ ಅಧಿವೇಶನಕ್ಕೆ ನೀಡಿದ್ದರೂ, ಅನುದಾನ ಎಲ್ಲಿದೆ ಎಂದು ಹುಡುಕಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿರುವುದು ಹಾಸ್ಯಾಸ್ಪದ. ಅವರಿಗೆ ಆಡಳಿತ ಮಾಹಿತಿ ಕೊರತೆಯಿದೆ ಎಂದು ಮಾಜಿ ಶಾಸಕ ಪರಣ್ಣಮುನವಳ್ಳಿ ಹೇಳಿದರು. ಅಧಿವೇಶನದಲ್ಲಿ ಅಂಜನಾದ್ರಿ ಅನುದಾನದ ಬಗ್ಗೆ ಚರ್ಚೆಯಾಗಿದ್ದು, ಕೈಗೆತ್ತಿಕೊಂಡ ಯಾತ್ರಿನಿವಾಸ, ಶಾಂಪ್ಲಿಂಗ್ ಕಾಂಪ್ಲೆಕ್ಸ್, ಪ್ರದಕ್ಷಣಿ ಪಥದ ಕಾಮಗಾರಿ ಕುರಿತು ಪ್ರವಾಸೋದ್ಯಮ ಸಚಿವರೇ ಸ್ಪಷ್ಟಪಡಿಸಿದ್ದಾರೆ. ತಪ್ಪು ಮಾಹಿತಿ ನೀಡುವುದನ್ನು ಸಚಿವ ತಂಗಡಗಿ ಕೈಬಿಡಬೇಕಿದ್ದು, ನಿಮ್ಮ ಅವಧಿಯಲ್ಲಿ ಅಂಜನಾದ್ರಿ ಅಭಿವೃದ್ಧಿ ಕುರಿತು ನಿಲುವು ಪ್ರಕಟಿಸುವಂತೆ ಒತ್ತಾಯಿಸಿದರು. ಮೀಸಲು ವರ್ಗದ ಅಭಿವೃದ್ಧಿ ಕಾಮಗಾರಿಗಳ ಅನುದಾನ ಬೇರೆ ಕ್ಷೇತ್ರಕ್ಕೆ ವರ್ಗಾವಣೆಯಾಗುತ್ತಿದ್ದು, ಮೊದಲು ಅದನ್ನು ಸ್ಥಳೀಯ ಶಾಸಕ ಗಾಲಿ ಜನಾರ್ದನರೆಡ್ಡಿ ತಡೆಯಲಿ ಎಂದರು.

    ಪ್ರಸಕ್ತ ಸಾಲಿನ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ರಾಜ್ಯ, ಹೊರ ರಾಜ್ಯದಿಂದ ಲಕ್ಷಕ್ಕೂ ಅಧಿಕ ಭಕ್ತರು ಬರುವ ನಿರೀಕ್ಷೆಯಿದ್ದು, ಇದುವರೆಗೂ ಯಾವುದೇ ವ್ಯವಸ್ಥೆ ಶುರುವಾಗಿಲ್ಲ. ಇದನ್ನು ತಾಲೂಕಾಡಳಿತ ಗಂಭೀರವಾಗಿ ಪರಿಗಣಿಸಬೇಕಿದೆ.
    ಪರಣ್ಣಮುನವಳ್ಳಿ ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts