More

    ಜೆಡಿಎಸ್ ಬೆಂಬಲಿಸಿ ನನಗೆ ಶಕ್ತಿ ತುಂಬಿ ; ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮನವಿ

    ಬಿಡದಿ: ಪುರಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಶಕ್ತಿ ತುಂಬುವ ಮೂಲಕ ರಾಜ್ಯಕ್ಕೆ ಉತ್ತಮ ಸಂದೇಶ ನೀಡಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತದಾರರಲ್ಲಿ ಮನವಿ ಮಾಡಿದರು.

    ಬಿಡದಿ ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ ಗುರುವಾರ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಬಹಿರಂಗ ಪ್ರಚಾರ ನಡೆಸಿ ಮಾತನಾಡಿದ ಅವರು, 2014ರಲ್ಲಿ ನಾನು ಶಾಸಕನಾಗಿ ರಾಜಕೀಯ ಮರು ಜನ್ಮ ಪಡೆಯಲು ಬಿಡದಿ ಜನರೇ ಕಾರಣ. ಇಲ್ಲಿನ ಮತದಾರರು ಮತ ಹಾಕಿ ನನ್ನನ್ನು ಆಶೀರ್ವದಿಸಿದ್ದರಿಂದ ರಾಜ್ಯದ ಮುಖ್ಯಮಂತ್ರಿಯಾಗಿ ಜನಸೇವೆ ಮಾಡಲು ಸಾಧ್ಯವಾಯಿತು. ನನಗೆ ಮತ್ತು ನಮ್ಮ ಕುಟುಂಬಕ್ಕೆ ರಾಮನಗರ ಜಿಲ್ಲೆಯ ಜನ ರಾಜಕೀಯ ಅಸ್ತಿತ್ವ ನೀಡಿರುವುದನ್ನು ನಾನು ಸದಾ ಸ್ಮರಿಸಿಕೊಳ್ಳುತ್ತೇನೆ ಎಂದರು.

    ಮಾಜಿ ಶಾಸಕರಿಗೆ ನನ್ನ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ಮಾಗಡಿ ಶಾಸಕ ಎ.ಮಂಜುನಾಥ್ ಅವರ ಕಾರ್ಯವೈಖರಿ ಬಗ್ಗೆ ಕೀಳು ಪದ ಬಳಕೆ ಮಾಡಿರುವುದು ಅವರ ಹೀನ ಸಂಸ್ಕೃತಿ ತೋರಿಸುತ್ತದೆ. ಜನಸೇವೆ ಮಾಡುವ ಮೂಲಕ ಆಶೀರ್ವಾದ ಪಡೆಯಬೇಕೆ ವಿನಾ ವೀರ ಶೌರ್ಯದಿಂದಲ್ಲ ಎಂದು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ವಿರುದ್ಧ ಕಿಡಿಕಾರಿದರು.

    ಬಿಡದಿ ಭಾಗ ತಾಲೂಕು ಕೇಂದ್ರವಾಗುವ ಎಲ್ಲ ಬೆಳವಣಿಗೆಗಳು ಕಾಣುತ್ತಿದ್ದು, ಇದು ನನ್ನ ಕರ್ಮ ಭೂಮಿಯಾಗಿದೆ. ಎಷ್ಟೇ ಎತ್ತರಕ್ಕೆ ಬೆಳೆದರೂ ನಾನು ನಿಮ್ಮ ಮನೆ ಮಗನಾಗಿ ಪ್ರತಿನಿತ್ಯ ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ಚುನಾವಣೆಯಲ್ಲಿ ಜೆಡಿಎಸ್‌ಗೆ ಬೆಂಬಲ ನೀಡಿ ನನಗೆ ಶಕ್ತಿ ತುಂಬಿ ಎಂದು ಮನವಿ ಮಾಡಿದರು.

    ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್ ಮಾತನಾಡಿ, ಬಿಡದಿ ಭಾಗದ ಅಭಿವೃದ್ಧಿ ಕಾರ್ಯಗಳು ಎಚ್.ಡಿ.ಕುಮಾರಸ್ವಾಮಿ ನೆರವಿನಿಂದ 23 ವಾರ್ಡ್‌ಗಳಲ್ಲಿ ಯುಜಿಡಿ, ಎಲ್‌ಇಡಿ, ಯುಜಿ ಕೇಬಲ್ ಅಳವಡಿಕೆ ಕೆಲಸಗಳು ನಡೆದಿವೆ. ಮತ್ತೊಮ್ಮೆ ಪುರಸಭೆಯಲ್ಲಿ ಉತ್ತಮ ಆಡಳಿತ ನೀಡಲು ಹಾಗಾಗಿ ಜೆಡಿಎಸ್‌ಗೆ ಅವಕಾಶ ಮಾಡಿಕೊಡಿ ಎಂದು ವಿನಂತಿಸಿಕೊಂಡರು. ಜೆಡಿಎಸ್ ಅಭ್ಯರ್ಥಿಗಳಾದ ಭರತ್‌ಕೆಂಪಣ್ಣ, ಮನು, ಮಂಗಳಗೋವಿಂದಯ್ಯ, ರಮೇಶ್, ಲಲಿತಾನರಸಿಂಹಯ್ಯ, ರವಿಕುಮಾರ್, ದೇವರಾಜು, ಸೋಮಶೇಖರ್, ನಾಗರತ್ನಮ್ಮ, ಲೋಹಿತ್ ಕುಮಾರ್, ಹರಿಪ್ರಸಾದ್, ಆಯಿಷಾ ಸೇರಿದಂತೆ ಪಕ್ಷದ ಮುಖಂಡರು ಇದ್ದರು.

    ಕೈ ಸರ್ಟಿಫಿಕೇಟ್ ಬೇಕಿಲ್ಲ: ನಾವು ಮಾಡಿರುವ ಅಭಿವೃದ್ಧಿ ಜನರ ಮುಂದಿದೆ. ನನ್ನ ಕೆಲಸಕ್ಕೆ ಕಾಂಗ್ರೆಸ್ಸಿಗರಿಂದ ಸರ್ಟಿಫಿಕೇಟ್ ಬೇಕಿಲ್ಲ. ಜಿಲ್ಲೆಗೆ ನಾನು ಏನು ಮಾಡಿದ್ದೇನೆ ಎಂಬುದು ಜನರಿಗೆ ಗೊತ್ತಿದೆ. ಕಾಂಗ್ರೆಸ್ ಮುಖಂಡರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ನನ್ನನ್ನು ಬೆಳೆಸಿರುವವರು ನೀವು, ಬಾಲಕೃಷ್ಣ ಶಾಸಕರಾಗಿದ್ದ ಸಂದರ್ಭದಲ್ಲಿ ಇದೇ ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಖರ್ಚಿಗೆ ಹಣ ನೀಡಿದ್ದನ್ನು ಅವರು ಮರೆತಿರಬಹುದು, ಆದರೆ ನಾನು ಮರೆತಿಲ್ಲ ಎಂದು ಕುಮಾರಸ್ವಾಮಿ ಕುಟುಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts