More

    ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ಭಾರೀ ಹೈಡ್ರಾಮಾ ಬಳಿಕ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ

    ವಿಶಾಖಪಟ್ಟಣಂ: ಸುಮಾರು ಐದು ಗಂಟೆಗಳ ಕಾಲ ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ನಡೆದ ಭಾರೀ ಹೈಡ್ರಾಮಾ ಬಳಿಕ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಹಾಗೂ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್​. ಚಂದ್ರಬಾಬು ನಾಯ್ಡುರನ್ನು ಗುರುವಾರ ಸಂಜೆ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡರು.

    ಎರಡು ದಿನಗಳ ಪ್ರಜಾ ಚೈತನ್ಯ ಯಾತ್ರೆ ಹಿನ್ನೆಲೆಯಲ್ಲಿ ವಿಶಾಖಪಟ್ಟಣಂನ ಪೆಂಡುರ್ತಿ ಏರಿಯಾಗೆ ತೆರಳಲು ಇಂದು ಬೆಳಗ್ಗೆ 11:45ರ ಸುಮಾರಿಗೆ ವಿಮಾನ ನಿಲ್ದಾಣಕ್ಕೆ ನಾಯ್ಡು ಆಗಮಿಸಿದರು. ಪೆಂಡುರ್ತಿಯಲ್ಲಿ ದಲಿತರ ಭೂಮಿಯನ್ನು ಆಡಳಿತಾರೂಢ ವೈಎಸ್​ಆರ್​ ಕಾಂಗ್ರೆಸ್​ ಪಕ್ಷದ ನಾಯಕರು ಅಕ್ರಮವಾಗಿ ಒತ್ತುವರಿ ಮಾಡಕೊಂಡಿರುವ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಿನ ಜನರೊಂದಿಗೆ ಮಾತನಾಡಲು ನಾಯ್ಡು ಆಗಮಿಸಿದ್ದರು. ಆದರೆ, ವಿಮಾನ ನಿಲ್ದಾಣ ಬಳಿಯೇ ಅವರ ಬೆಂಗಾವಲು ವಾಹನವನ್ನು ತಡೆದ ವೈಎಸ್​ಆರ್​ ಕಾಂಗ್ರೆಸ್​ ಕಾರ್ಯಕರ್ತರು, ನಾಯ್ಡು ವಿರುದ್ಧ ಗೋ ಬ್ಯಾಕ್​​ ಘೋಷಣೆ ಕೂಗಿದರು.

    ಕೆಲವೇ ಕ್ಷಣಗಳಲ್ಲಿ ವಿಮಾನ ನಿಲ್ದಾಣ ರಾಜಕೀಯ ರಣರಂಗವಾಯಿತು. ಟಿಡಿಪಿ ಕಾರ್ಯಕರ್ತರು ನಾಯ್ಡು ಪರ ಘೋಷಣೆ ಕೂಗಿ, ಸಿಎಂ ವೈ.ಎಸ್​. ಜಗನ್​ ಮೋಹನ್​ ರೆಡ್ಡಿ ವಿರುದ್ಧ ಆಕ್ರೋಶ ಹೊರಹಾಕಿದ್ದು, ಟಿಡಿಪಿ ಮತ್ತು ವೈಎಸ್​ಆರ್​ ಕಾಂಗ್ರೆಸ್​ ಕಾರ್ಯಕರ್ತರ ನಡುವೆ ಗಲಾಟೆ ಹೊತ್ತಿಕೊಂಡಿತು.

    ವಿಶಾಖಪಟ್ಟಣಂ ಕಾರ್ಯಾಂಗ ರಾಜಧಾನಿ ಆಗುವುದನ್ನು ವಿರೋಧಿಸಿದ ಮಾಜಿ ಸಿಎಂ ನಾಯ್ಡು ಅವರಿಗೆ ಇಲ್ಲಿಗೆ ಬರಲು ಯಾವುದೇ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ವೈಎಸ್​ಆರ್​ಸಿ ಕಾರ್ಯಕರ್ತರು ಮೊಟ್ಟೆ, ಟೊಮ್ಯಾಟೋ ಮತ್ತು ಚಪ್ಪಲಿಗಳನ್ನು ನಾಯ್ಡು ಬೆಂಗಾವಲು ವಾಹನದತ್ತ ಎಸೆದರು. ಅಲ್ಲದೆ, ವಿಶಾಖಪಟ್ಟಣಂದಿಂದ ಹಾದು ಹೋಗುವ ಕೋಲ್ಕತ-ಚೆನ್ನೈ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ನಾಯ್ಡು ಅವರು ಮುಂದಕ್ಕೆ ಹೋಗಲು ಬಿಡದೆ ಘೋಷಣೆ ಕೂಗಿದರು.

    ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸ್​ ಸಿಬ್ಬಂದಿಯಿದ್ದರೂ ಎರಡು ಪಕ್ಷದವರು ಪ್ರತಿಭಟನೆ ನಡೆಸಿದ್ದರಿಂದ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಕಷ್ಟು ಹರಸಾಹಸ ಪಡಬೇಕಾಯಿತು.

    ಇದೇ ವೇಳೆ ಪೊಲೀಸರ ವಿರುದ್ಧ ಕಿಡಿಕಾರಿದ ಚಂದ್ರಬಾಬು ನಾಯ್ಡು, ಸಾವಿರಾರು ವೈಎಸ್​ಆರ್​ಸಿ ಕಾರ್ಯಕರ್ತರು ವಿಮಾನ ನಿಲ್ದಾಣಕ್ಕೆ ಬಂದು ವಾತಾವರಣ ಹದಗೆಡಿಸಲು ಹೇಗೆ ಅನುಮತಿ ನೀಡಿದಿರಿ? ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಜಗನ್ ರೆಡ್ಡಿ ಮಾಡಿದ ಪಾದಯಾತ್ರೆಗೆ ನಮ್ಮ ಕಾರ್ಯಕರ್ತರೇನಾದರೂ ತಡೆವೊಡ್ಡಿದರೇ? ಈ ಜನರು ವೈಜಾಗ್​ನ ಶಾಂತಿಯುತ ವಾತಾವರಣವನ್ನು ಹಾಳುಗೆಡುವುತ್ತಿದ್ದಾರೆ. ಅವರು ನಮ್ಮ ಮೇಲೆ ಫೈರಿಂಗ್​ ಆದ್ರೂ ಮಾಡಬಹುದು ಅಥವಾ ಸಾಯಿಸಲೂ ಬಹುದು ಅದಕ್ಕೆ ಪೊಲೀಸರು ಅವಕಾಶ ನೀಡಿದ್ದಾರೆ ಎಂದು ಗುಡುಗಿದರು.​

    ಈ ರಾಜಕೀಯ ಹೈಡ್ರಾಮ ಸಂಜೆ 5 ಗಂಟೆಯವರೆಗೂ ಜರುಗಿತು. ಕೊನೆಗೆ ಪೊಲೀಸರು ಅಪರಾಧ ಪ್ರಕ್ರಿಯೆ ಸಂಹಿತೆಯ 151 ಸೆಕ್ಷನ್​ ಅಡಿಯಲ್ಲಿ ರಕ್ಷಣೆಯ ದೃಷ್ಟಿಯಿಂದ ನಾಯ್ಡುಗೆ ಬಂಧನದ ನೋಟಿಸ್​ ನೀಡಿದರು. ಬಳಿಕ ಅವರನ್ನು ವಿಮಾನ ನಿಲ್ದಾಣದಿಂದ ವಿಶೇಷ ಕೋಣೆಗೆ ಕರೆದೊಯ್ದು ಕೂಡಿ ಹಾಕಿದರು.

    ಬಳಿಕ ಮಾತನಾಡಿದ ನಾಯ್ಡು ಅವರು ಪರಿಸ್ಥಿತಿ ತಹಬದಿಗೆ ಬರೋವರೆಗೂ ಹೊರಬರಲು ನನಗೆ ಅವಕಾಶವನ್ನು ನೀಡಲಿಲ್ಲ. ಅಲ್ಲದೆ, ವಿಜಯವಾಡದಿಂದ ನನ್ನನ್ನು ವಾಪಸ್​ ಕಳುಹಿಸಿದರು ಎಂದು ಆರೋಪಿಸಿದರು.

    ಸಿಎಂ ಜಗನ್​ ರೆಡ್ಡಿ ಆಂಧ್ರ ಪ್ರದೇಶದಲ್ಲಿ ಮೂರು ರಾಜಧಾನಿಗಳ ಯೋಜನೆಗೆ ನಿರ್ಧರಿಸಿದ್ದಾರೆ. ಅದರಂತೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಆಧಾರದ ಮೇಲೆ ರಾಜಧಾನಿಯನ್ನು ವಿಂಗಡಿಸಿದ್ದು, ಈ ಹಿಂದೆ ಇದ್ದ ಕಾರ್ಯಾಂಗ ರಾಜಧಾನಿಯನ್ನು ಅಮರಾವತಿಯಿಂದ ವಿಶಾಖಪಟ್ಟಣಂಗೆ ರೆಡ್ಡಿ ಸ್ಥಳಾಂತರಿಸಿದ್ದು, ಇದಕ್ಕೆ ನಾಯ್ಡು ಆಕ್ರೋಶ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ಇಂದು ವಿಶಾಖಪಟ್ಟಣಂಗೆ ಭೇಟಿ ನೀಡಿದಾಗ ವೈಎಸ್​ಆರ್​ಸಿ ಕಾರ್ಯಕರ್ತರು ನಾಯ್ಡು ವಿರುದ್ಧ ತಿರುಗಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts