More

    ಅಡೆತಡೆ ಇದ್ದರೂ ಗುರಿಯತ್ತ ಮುನ್ನುಗ್ಗಿ

    ಚಿಕ್ಕಮಗಳೂರು: ಭಾರತವು ಸಾಂಸ್ಕೃತಿಕ ಪರಂಪರೆ ಹೊಂದಿರುವ ರಾಷ್ಟ್ರ. ನೃತ್ಯ ಕಲೆ ದೇಶದ ನರನಾಡಿಗಳಲ್ಲಿ ನೆಲೆಸಿದೆ. ತಮಿಳುನಾಡಿನ ಭರತನಾಟ್ಯ, ಗುಜರಾತ್‌ನ ಗಾರ್ಭ, ಅಸ್ಸಾಂನ ಸತ್ರಿಯಾ, ಕೇರಳದ ಮೋಹಿನಿಯಾಟ್ಟಂ, ಕೂಚುಪುಡಿ ಸೇರಿ ಅನೇಕ ನೃತ್ಯ ಪ್ರಕಾರಗಳ ಸಾಂಸ್ಕೃತಿಕ ಮೆರುಗಿನಿಂದ ಭಾರತದ ಶ್ರೇಷ್ಠತೆ ಹೆಚ್ಚಿದೆ ಎಂದು ಸಾಮಾಜಿಕ ಕಾರ್ಯಕರ್ತ ಸೀತಾರಾಮ ಭರಣ್ಯ ಅಭಿಪ್ರಾಯಪಟ್ಟರು.

    ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರತಿಭಾ ಸಂಭ್ರಮ ಯುವಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಧನೆ ಮಾಡಲು ಹೊರಟವನಿಗೆ ಯಾವ ಅಡ್ಡಿ ಎದುರಾದರೂ ಮುನ್ನುಗ್ಗಬೇಕು. ಸಾಧನೆಯ ಹೊಸ್ತಿಲಲ್ಲಿ ಹೊಟ್ಟೆಯ ಹಸಿವು ಕಾಣುವುದಿಲ್ಲ ಎಂದು ಹೇಳಿದರು.
    ಶಂಕರಾಚಾರ್ಯರು ಅದ್ವೈತ ಸಿದ್ಧಾಂತ ಪ್ರಚುರಪಡಿಸಿ ದೇಶವನ್ನೇ ಜೋಡಿಸಿದರು. ಡಾ. ಬಿ.ಆರ್.ಅಂಬೇಡ್ಕರ್ ದೇಶಕ್ಕೆ ಸಂವಿಧಾನ ನೀಡಿದರು. ಮಹಾರಾಷ್ಟ್ರದ ಸಾಧು ಮಹಾರಾಜ್ ಸೇರಿ ಸಾವಿರಾರು ಮಹಾಪುರುಷರು ಸಾಧನೆ ಮಾಡಿದ ನೆಲವಿದು ಎಂದು ತಿಳಿಸಿದರು.
    ಚಿಕ್ಕಮಗಳೂರು ರೋಟರಿ ಕ್ಲಬ್ ಅಧ್ಯಕ್ಷ ಶ್ರೀವತ್ಸ ನಟರಾಜ್ ಮಾತನಾಡಿ, ಕಳೆದ ಮೂರು ದಶಕಗಳಿಂದ ನಗರದ ಯುವಕರ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸುವಲ್ಲಿ ಯುವಚೇತನ ಹೆಸರಾಗಿದೆ ಎಂದರು.
    ಯುವಚೇತನ ಸಂಚಾಲಕ ಚಿದಾನಂದ ಮಾತನಾಡಿ, ವಿದ್ಯಾರ್ಥಿ, ಯುವಜನರ ಸಾಮರ್ಥ್ಯವನ್ನು ಬೆಳಗಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮೂಹ ನೃತ್ಯ, ಸಾಮಾನ್ಯ ರಸಪ್ರಶ್ನೆ, ನಿಧಾನಗತಿಯ ಸೈಕಲ್ ರೇಸ್, ನಿಸರ್ಗದ ರಸಪ್ರಶ್ನೆ, ಈಜು, ಗಾಯನ, ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ಜ.21ರ ಸಂಜೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.
    ಕ್ಲಬ್ ಕಾರ್ಯದರ್ಶಿ ಸುಜಿತ್, ಸಹಸಂಯೋಜಕ ಎಂ.ಪಿ.ಲಿಖಿತ್, ಜಯಂತಿ ಅನಿಲ್, ಸೌರಭಾ ಪ್ರವೀಣ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts