More

    ಭಕ್ತಿಗೆ ತಟ್ಟಿಲ್ಲ ಕೋವಿಡ್-ಲಾಕ್​ಡೌನ್​ ಬಿಸಿ; ಬನಶಂಕರಿ ದೇವಾಲಯದಲ್ಲಿ 4 ತಿಂಗಳಲ್ಲಿ 53.64 ಲಕ್ಷ ರೂ. ಕಾಣಿಕೆ ಸಂಗ್ರಹ

    ಬೆಂಗಳೂರು: ಕೋವಿಡ್ ಎರಡನೇ ಅಲೆ ತೀವ್ರತೆ ಹಾಗೂ ಲಾಕ್​​ಡೌನ್ ನಡುವೆಯೂ ಬನಶಂಕರಿ ದೇವಸ್ಥಾನದಲ್ಲಿ ಕಳೆದ ಐದು ತಿಂಗಳಲ್ಲಿ 53.64 ಲಕ್ಷಕ್ಕೂ ಹೆಚ್ಚು ಕಾಣಿಕೆ ಸಂಗ್ರಹವಾಗಿದ್ದು, ಗುರುವಾರ ಹುಂಡಿಯನ್ನು ತೆರೆದು ಕಾಣಿಕೆ ಮೊತ್ತವನ್ನು ಎಣಿಸಲಾಗಿದೆ.

    ನಗದು ಕಾಣಿಕೆಯ ಜತೆಗೆ 63 ಗ್ರಾಮ್​ಗೂ ಹೆಚ್ಚು ಚಿನ್ನ (2,27,950 ರೂ.) ಹಾಗೂ 300 ಗ್ರಾಮ್​ಗೂ ಹೆಚ್ಚು ಬೆಳ್ಳಿ (12,240 ರೂ.) ಸಂಗ್ರಹವಾಗಿದೆ. ಈ ಪೈಕಿ ಚಿನ್ನದ 24 ಮಾಂಗಲ್ಯಗಳು, 2 ಬಳೆಗಳು, 3 ಮೂಗುತಿಗಳು, ಎರಡು ಓಲೆ ಹಾಗೂ ಇತರ ಚಿನ್ನದ ಆಭರಣಗಳನ್ನು ಹಾಗೂ ಬೆಳ್ಳಿಯ 4 ತೊಟ್ಟಿಲುಗಳು, 2 ಕಾಲು ಚೈನ್ ಇತ್ಯಾದಿಗಳನ್ನು ಭಕ್ತರು ಕಾಣಿಕೆ ರೂಪದಲ್ಲಿ ಅರ್ಪಿಸಿದ್ದು, ಹುಂಡಿಯಲ್ಲಿ ದೊರೆತಿವೆ ಎಂದು ದೇವಾಲಯದ ಆಡಳಿತಾಧಿಕಾರಿ ಲಕ್ಷ್ಮೀ ಮಾಹಿತಿ ನೀಡಿದ್ದಾರೆ.

    ಕಳೆದ ಬಾರಿ 22.21 ಲಕ್ಷ ರೂ. ಸಂಗ್ರಹ

    ಕಳೆದ ಮಾ.29ರಂದು ಹುಂಡಿಗಳನ್ನು ತೆಗೆದ ಸಂದರ್ಭದಲ್ಲಿ 22.21 ಲಕ್ಷ ನಗದು ಸಂಗ್ರಹವಾಗಿತ್ತು. ಬಳಿಕ ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎರಡು ತಿಂಗಳ ಕಾಲ ದೇವಾಲಯಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು. ಕಳೆದ ತಿಂಗಳ ಆಷಾಢ ಮಾಸದಲ್ಲಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಈ ಪ್ರಮಾಣದ ಕಾಣಿಕೆ ದೊರೆತಿದೆ.

    ಕೋವಿಡ್ ನಡುವೆಯೂ ಭಕ್ತರು ಭೇಟಿ

    ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಕಾಣಿಕೆ ಸಂಗ್ರಹವಾಗುವ ಎ ದರ್ಜೆಯ ದೇವಾಲಯಗಳಲ್ಲಿ ಬನಶಂಕರಿ ದೇವಾಲಯವೂ ಸೇರಿದೆ. ಲಕ್ಷಾಂತರ ಭಕ್ತರನ್ನು ಹೊಂದಿರುವ ದೇವಾಲಯದಲ್ಲಿ 13 ಬೃಹತ್ ಹುಂಡಿಗಳಿದ್ದು, ಕೋವಿಡ್ ಪೂರ್ವದಲ್ಲಿ ಪ್ರತಿ ಎರಡು ಮೂರು ತಿಂಗಳಿಗೊಮ್ಮೆ ಭರ್ತಿಯಾಗುತ್ತಿತ್ತು. ಕೋವಿಡ್ ಸಂದರ್ಭದಲ್ಲೂ ದೇವಾಲಯದಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿಲ್ಲ. ದೇವಾಲಯ ಪ್ರವೇಶ ನಿಷೇಧಿಸಿದರೂ ಬಾಗಿಲಿನಲ್ಲೇ ಅಮ್ಮನಿಗೆ ದೀಪ ಬೆಳಗಿ ಬೇಡಿಕೊಳ್ಳುವ ಭಕ್ತರಿದ್ದಾರೆ.

    ಶ್ರಾವಣದಲ್ಲಿ ಹೆಚ್ಚಿದ ಭಕ್ತರು

    ಶ್ರಾವಣ ಮಾಸದಲ್ಲಿ ದೇವಾಲಯಗಳಿಗೆ ಭೇಟಿ ನೀಡುವವರ ಸಂಖ್ಯೆ ಸಾಮಾನ್ಯವಾಗಿ ಹೆಚ್ಚಿರುತ್ತದೆ. ಅದೇ ರೀತಿ ಬನಶಂಕರಿ ದೇವಾಲಯಕ್ಕೆ ಬರುವವರ ಸಂಖ್ಯೆಯೂ ಹೆಚ್ಚೇ ಇದೆ. ಮಂಗಳವಾರ, ಶುಕ್ರವಾರ, ಭಾನುವಾರ, ಅಮಾವಾಸ್ಯೆ, ಪೌರ್ಣಮಿಯಂದು ಅಮ್ಮನಲ್ಲಿ ಬೇಡಿಕೆ ಈಡೇರಿಕೆಗಾಗಿ ನಿಂಬೆ ಹಣ್ಣಿನ, ಬೆಲ್ಲದ ಆರತಿ ಬೆಳಗುವವರು ಹೆಚ್ಚು.

    ಶೇ. 75 ರಿಯಾಯಿತಿ ದರದಲ್ಲಿ ಸೀರೆ

    ಬನಶಂಕರಿ ಅಮ್ಮನವರಿಗೆ ನಗದು, ಚಿನ್ನ, ಬೆಳ್ಳಿ ಅರ್ಪಿಸಿದಂತೆಯೇ ಬೇಡಿಕೆ ಈಡೇರಿಕೆಗಾಗಿ ಸಂಕಲ್ಪ ಪೂಜೆ ಮಾಡುವವರು ಕೊನೆಯಲ್ಲಿ ಅಮ್ಮನಿಗೆ ಮಡಿಲ ಅಕ್ಕಿ, ಬೆಲ್ಲ, ಹೂ ಹಣ್ಣು ಕಾಯಿ ಜತೆಗೆ ಸೀರೆಯನ್ನೂ ನೀಡುತ್ತಾರೆ. ಪ್ರತಿ ತಿಂಗಳು ಸಹಸ್ರಾರು ಸೀರೆಗಳು ಅಮ್ಮನಿಗೆ ಕಾಣಿಕೆ ರೂಪದಲ್ಲಿ ಬರುತ್ತದೆ. ಅದರಲ್ಲಿ ಕೆಲವನ್ನು ಅಮ್ಮನಿಗೆ ಉಡಿಸಿದರೆ, ಇನ್ನು ಕೆಲವನ್ನು ಅಮ್ಮನ ಬಳಿ ಇಟ್ಟು ಪೂಜಿಸಿ ನಂತರ ಹರಾಜು ಮೂಲಕ ಭಕ್ತರಿಗೆ ಮಾರಾಟ ಮಾಡಲಾಗುತ್ತದೆ. ಈ ಬಾರಿ ಶೇ. 75 ರಿಯಾಯಿತಿ ದರದಲ್ಲಿ ದೇವಾಲಯದ ಆಡಳಿತ ಮಂಡಳಿ ಅಮ್ಮನ ಸೀರೆ ಮಾರಾಟ ಮಾಡುತ್ತಿದೆ.

    ಸೊಂಟಕ್ಕೆ ರಿವಾಲ್ವರ್ ಸಿಕ್ಕಿಸಿಕೊಂಡು ಸುತ್ತಾಡುತ್ತಿದ್ದ ವ್ಯಕ್ತಿ; ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದ್ದ ಭೂಪ

    ರಾಜಧಾನಿಯಲ್ಲಿ ಮತ್ತೆ ಏರುತ್ತಿವೆ ಕೋವಿಡ್​ ಸೋಂಕಿನ ಪ್ರಕರಣಗಳು!; ಅಲೆ ತಗ್ಗಿದರೂ ಇಳಿದಿಲ್ಲ ಸೋಂಕಿತರ ಸಂಖ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts