More

    ಎತ್ತಿನಹೊಳೆ ಯೋಜನೆ ಅವ್ಯವಹಾರ: ಸಿಬಿಐ ತನಿಖೆಗೆ ಮಾಜಿ ಸಚಿವ ರೇವಣ್ಣ ಆಗ್ರಹ

    ಹಾಸನ: ಎತ್ತಿನಹೊಳೆ ಯೋಜನೆ ಕಾಮಗಾರಿಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಕೂಡಲೆ ಹೈಕೋರ್ಟ್ ನ್ಯಾಯಾಧೀಶರು ಅಥವಾ ಸಿಬಿಐನಿಂದ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆಗ್ರಹಿಸಿದರು.

    ಮೊದಲು ಎತ್ತಿನಹೊಳೆ ಯೋಜನೆಗೆ 12.90 ಕೋಟಿ ರೂ. ವೆಚ್ಚಕ್ಕೆ ಅನುಮೋದನೆ ನೀಡಲಾಗಿತ್ತು. ನಂತರ 16 ಸಾವಿರ ಕೋಟಿ ರೂ.ಗೆ ಗುತ್ತಿಗೆ ಮಂಜೂರು ಮಾಡಲಾಗಿತ್ತು. ಈಗ ವೆಚ್ಚವನ್ನು 23 ಸಾವಿರ ಕೋಟಿ ರೂ.ಗೆ ಏರಿಕೆ ಮಾಡಿ ಸರ್ಕಾರದ ಮುಂದೆ ಪ್ರಸ್ತಾವನೆ ಇರಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

    ಯೋಜನೆಯ ಅರಸೀಕೆರೆ ವಿಭಾಗದ ಕಾಮಕಾರಿಗಳನ್ನು ನಿರ್ವಹಿಸಲು ಗುರುದತ್ ಹಾಗೂ ಸಕಲೇಶಪುರ ವಿಭಾಗಕ್ಕೆ ಜಯಣ್ಣ ಎಂಬ ಕಾರ್ಯನಿರ್ವಾಹಕ ಇಂಜಿನಿಯರ್‌ಗಳನ್ನು ನೇಮಕ ಮಾಡಲಾಗಿದೆ. ಇವರಿಬ್ಬರೂ ಗುತ್ತಿಗೆದಾರರು ತರುವ ನಕಲಿ ಕಾಮಗಾರಿ ಬಿಲ್‌ಗಳಿಗೆ ಪಂಚತಾರಾ ಹೋಟೆಲ್‌ಗಳಲ್ಲಿ ಕುಳಿತು ಸಹಿ ಹಾಕುತ್ತಿದ್ದಾರೆ. ವಿಶ್ವೇಶ್ವರಯ್ಯ ಜಲ ನಿಗಮ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ ರಾವ್ ಪೇಶ್ವೆ ಎಂಬವರನ್ನೇ ಜಲಸಂಪನ್ಮೂಲ ಇಲಾಖೆ ಮುಖ್ಯಕಾರ್ಯದರ್ಶಿಯಾಗಿ ಮಾಡಲಾಗಿದೆ. 12 ವರ್ಷಗಳಿಂದ ತಮ್ಮ ಸಂಬಳವನ್ನೇ ಖಾತೆಯಿಂದ ಡ್ರಾ ಮಾಡದ ಅವರ ವಿರುದ್ಧ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅಂತಹ ಅಧಿಕಾರಿಗೆ ಮಣೆ ಹಾಕಿದ್ದಾರೆ ಎಂದು ಕಿಡಿಕಾರಿದರು.

    ಸಾರ್ವಜನಿಕರ ತೆರಿಗೆಯಿಂದ ಸಂಗ್ರಹಿಸಿರುವ ಸಾವಿರಾರು ಕೋಟಿ ರೂ.ಗಳನ್ನು ಎತ್ತಿನಹೊಳೆ ಯೋಜನೆ ಹೆಸರಿನಲ್ಲಿ ಲೂಟಿ ಮಾಡಲಾಗುತ್ತಿದೆ. ಭ್ರಷ್ಟ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಳಗಳಿಗೆ ನೇಮಕ ಮಾಡಲಾಗಿದೆ. ಈ ಬೃಹತ್ ಅವ್ಯವಹಾರವನ್ನು ಹಾಲಿ ನ್ಯಾಯಾಧೀಶರು ಇಲ್ಲವೇ ಸಿಬಿಐನಿಂದ ತನಿಖೆಗೊಳಪಡಿಸಿ ಭ್ರಷ್ಟರನ್ನು ಶಿಕ್ಷಿಸಬೇಕು ಎಂದು ಒತ್ತಾಯಿಸಿದರು.

    ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ನಾಲ್ಕು ಜಲ ನಿಗಮಗಳಿಗೆ ಬಜೆಟ್‌ನಲ್ಲಿ 19,500 ಕೋಟಿ ರೂ. ಮೀಸಲಿರಿಸಲಾಗಿದೆ. ಅದರಲ್ಲಿ ವೇತನಕ್ಕೆ 8,000 ಕೋಟಿ ರೂ. ಮೀಸಲಿಡಬೇಕು. ಕಾಮಗಾರಿಗಳಿಗೆ 11,800 ಕೋಟಿ ರೂ. ಲಭ್ಯವಿದೆ.
    ಎತ್ತಿನಹೊಳೆ ಯೋಜನೆ ಭೂ ಸ್ವಾಧೀನಕ್ಕೆ ಹಾಸನ ಜಿಲ್ಲೆಗೆ 400 ಕೋಟಿ ರೂ., ತುಮಕೂರಿಗೆ 200 ಕೋಟಿ ರೂ. ನೀಡಲಾಗಿದೆ. ಆದರೆ ಹಾಸನದಲ್ಲಿ ಮಾರ್ಚ್‌ನಿಂದ ಈವರೆಗೆ 200 ಕೋಟಿ ರೂ. ಮಾತ್ರವೇ ವೆಚ್ಚ ಮಾಡಿದ್ದಾರೆ. ಪರಿಹಾರ ನೀಡದೆ ಭೂ ಮಾಲೀಕರನ್ನು ಪ್ರತಿನಿತ್ಯ ಕಚೇರಿಗೆ ಅಲೆದಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.

    ನಕಲಿ ಬಿಲ್ ಹಾವಳಿ: ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಸಕಲೇಶಪುರ ವಿಭಾಗಕ್ಕೆ 4,500, ಅರಸೀಕೆರೆಗೆ 2,500 ಹಾಗೂ ಮಧುಗಿರಿ ವಿಭಾಗಕ್ಕೆ 4,500 ಕೋಟಿ ರೂ. ಸೇರಿ ಒಟ್ಟು 16,000 ಕೋಟಿ ರೂ. ನೀಡಿದ್ದಾರೆ. ಆದರೆ ಇಲ್ಲಿಯವರೆಗೆ ಸುಮಾರು 9,000 ಕೋಟಿ ರೂ. ಮಾತ್ರ ಖರ್ಚಾಗಿದೆ. ಯೋಜನೆಯಡಿ ಹತ್ತು ಕಂಪನಿಗಳಿಗೆ ಟೆಂಡರ್ ನೀಡಿದ್ದಾರೆ. ಸಕಲೇಶಪುರ ಹಾಗೂ ಅರಸೀಕೆರೆ ವ್ಯಾಪ್ತಿಯಲ್ಲಿ ನಕಲಿ ಕಾಮಗಾರಿಗಳ ಬಿಲ್‌ಗಳನ್ನು ಸಲ್ಲಿಸಿ ಕೋಟ್ಯಂತರ ರೂ. ಲೂಟಿ ಮಾಡಲಾಗುತ್ತಿದೆ ಎಂದು ದೂರಿದರು.

    ಗುತ್ತಿಗೆ ಪಡೆದಿರುವ ಯಾವ ಸಂಸ್ಥೆಗಳಿಗೂ 4,500 ಕೋಟಿ ರೂ.ನಷ್ಟು ಬೃಹತ್ ವೆಚ್ಚದ ಕಾಮಗಾರಿಗಳನ್ನು ನಿರ್ವಹಿಸುವ ಸಾಮರ್ಥ್ಯವೇ ಇಲ್ಲ. ಬೇಕಾಬಿಟ್ಟಿಯಾಗಿ ಗುತ್ತಿಗೆ ನೀಡಲಾಗಿದೆ. ಸಕಲೇಶಪುರ ವಿಭಾಗದಲ್ಲಿ ನಾಲೆಗೆ ಅಡ್ಡಲಾಗಿ ಬಂಡೆಗಳೇ ಸಿಗದಿದ್ದರೂ ಬಂಡೆ ಸಿಡಿಸಿರುವುದಾಗಿ 20 ಕೋಟಿ ರೂ. ಬೋಗಸ್ ಬಿಲ್ ಸೃಷ್ಟಿಸಿ ಅನುಮೋದನೆಗೆ ಸಲ್ಲಿಸಲಾಗಿದೆ ಎಂದು ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts