More

    ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಜೆಡಿಎಸ್ ಪ್ರತಿಭಟನೆ

    ಶಿವಮೊಗ್ಗ: ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಸೇರಿದಂತೆ ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಶಿವಮೊಗ್ಗ ಮಹಾನಗರ ಜಾತ್ಯತೀತ ಜನತಾದಳದ ಕಾರ್ಯಕರ್ತರು ಸೋಮವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
    ನೆಹರು ರಸ್ತೆಯ ಜೆಡಿಎಸ್ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಹೊರಟ ಕಾರ್ಯಕರ್ತರು ಅಮೀರ್ ಅಹಮ್ಮದ್ ವೃತ್ತ, ಗೋಪಿ ವೃತ್ತ, ಬಾಲರಾಜ್ ಅರಸು ರಸ್ತೆ, ಮಹಾವೀರ ವೃತ್ತದ ಮಾರ್ಗವಾಗಿ ಸಾಗಿ ಡಿಸಿ ಕಚೇರಿ ಎದುರು ರಸ್ತೆಯಲ್ಲೇ ಅಡುಗೆ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    ಅಗತ್ಯ ವಸ್ತುಗಳ ದರ ನಿರಂತರವಾಗಿ ಏರುತ್ತಿದ್ದು ಮಧ್ಯಮ ವರ್ಗ ಮತ್ತು ಜನಸಾಮಾನ್ಯರ ಬದುಕು ದುಸ್ತರವಾಗುತ್ತಿದೆ. ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿರುವುದರಿಂದ ಬಡವರು, ಕೂಲಿ ಕಾರ್ಮಿಕರು ಮತ್ತು ಅಸಹಾಯಕರ ಗೋಳು ತಪ್ಪುತ್ತಿಲ್ಲ. ರಾಜ್ಯ ಹಾಗೂ ಕೇಂದ್ರದ ಆಡಳಿತ ಹದಗೆಟ್ಟಿದ್ದು ಶ್ರೀಸಾಮಾನ್ಯನ ಬದುಕಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ದೂರಿದರು.
    ರಾಜ್ಯಪಾಲರು ಮಧ್ಯ ಪ್ರವೇಶಿಸಿ ಭ್ರಷ್ಟಾಚಾರದ ನಿಯಂತ್ರಣದ ಬಗ್ಗೆ ಮತ್ತು ಅಗತ್ಯ ವಸ್ತುಗಳ ಬೆಲೆ ಇಳಿಸುವಂತೆ ಸರ್ಕಾರಕ್ಕೆ ಆದೇಶ ನೀಡುವುದರ ಮೂಲಕ ಸಂಪೂರ್ಣ ಅಧೋಗತಿಗೆ ತಲುಪಿರುವ ಜನಸಾಮಾನ್ಯರ ಬದುಕಿಗೆ ನೆರವಾಗುವಂತೆ ಮನವಿ ಮಾಡಿದರು.
    ಮಾಜಿ ಉಪ ಮೇಯರ್ ಎಚ್.ಪಾಲಾಕ್ಷಿ, ಮಹಾನಗರ ಪಾಲಿಕೆ ಸದಸ್ಯರಾದ ನಾಗರಾಜ್ ಕಂಕಾರಿ, ಸತ್ಯನಾರಾಯಣರಾವ್, ಮಹಾನಗರ ಅಧ್ಯಕ್ಷ ಗೋವಿಂದಪ್ಪ, ಕಾರ್ಯಾಧ್ಯಕ್ಷರಾದ ಸಿದ್ದಪ್ಪ, ಸೈಯದ್ ನೂಮನ್, ಬಿ.ಎಸ್.ವಿನಯ್, ಎಚ್.ಆರ್.ತ್ಯಾಗರಾಜ್, ಎಸ್.ಕೆ.ಭಾಸ್ಕರ್, ಎಚ್.ಎಂ.ಸಂಗಯ್ಯ, ಗೀತಾ ಸತೀಶ್, ಶಾಂತಾ ಸುರೇಂದ್ರ, ಎಸ್.ಟಿ.ಪುಷ್ಪಾವತಿ, ಉಷಾ ನಾಯಕ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts