More

    ಇಂಗ್ಲೆಂಡ್-ಆಸೀಸ್ ಕ್ರಿಕೆಟಿಗರು ಐಪಿಎಲ್ ಮೊದಲ ವಾರ ಗೈರು

    ಲಂಡನ್/ನವದೆಹಲಿ: ಸೆಪ್ಟೆಂಬರ್ 4ರಿಂದ 16ರವರೆಗೆ ಆಸ್ಟ್ರೇಲಿಯಾ ತಂಡದ ಇಂಗ್ಲೆಂಡ್ ಪ್ರವಾಸ ಖಚಿತಗೊಂಡಿದೆ. ಇದರಿಂದಾಗಿ ಐಪಿಎಲ್ 13ನೇ ಆವೃತ್ತಿಯ ಮೊದಲ ವಾರದ ಪಂದ್ಯಗಳಿಗೆ ಇಂಗ್ಲೆಂಡ್-ಆಸ್ಟ್ರೇಲಿಯಾದ ಪ್ರಮುಖ ಆಟಗಾರರ ಅಲಭ್ಯತೆಯೂ ಖಚಿತಗೊಂಡಿದೆ. ಐಪಿಎಲ್‌ನ 8 ತಂಡಗಳಿಗೆ ಒಟ್ಟಾರೆ 22 ಆಟಗಾರರು ಅಲಭ್ಯರಾಗುತ್ತಿದ್ದು, ರಾಜಸ್ಥಾನ ರಾಯಲ್ಸ್ ತಂಡಕ್ಕೆ ಹೆಚ್ಚಿನ ಹಿನ್ನಡೆ ಎದುರಾಗಲಿದೆ.

    ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವೆ ಸೆಪ್ಟೆಂಬರ್ 4, 6 ಮತ್ತು 8ರಂದು ಸೌಥಾಂಪ್ಟನ್‌ನಲ್ಲಿ 3 ಏಕದಿನ ಮತ್ತು ಸೆಪ್ಟೆಂಬರ್ 11, 13, 16ರಂದು ಮ್ಯಾಂಚೆಸ್ಟರ್‌ನಲ್ಲಿ 3 ಟಿ20 ಪಂದ್ಯಗಳು ನಿಗದಿಯಾಗಿವೆ. ಇದರಿಂದಾಗಿ ಉಭಯ ತಂಡಗಳ ಆಟಗಾರರು ಸೆಪ್ಟೆಂಬರ್ 17 ಅಥವಾ 18ರಂದು ಯುಎಇಗೆ ತಲುಪಲಿದ್ದಾರೆ. ಬಳಿಕ 6 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಪಡಲಿದ್ದು, 1, 3 ಮತ್ತು 6ನೇ ದಿನದ ಕರೊನಾ ಪರೀಕ್ಷೆಗಳಲ್ಲಿ ನೆಗೆಟಿವ್ ವರದಿ ಪಡೆದುಕೊಳ್ಳಬೇಕಿದೆ. ಬಳಿಕ ಅವರಿಗೆ 7ನೇ ದಿನ ಐಪಿಎಲ್ ಟೂರ್ನಿಯ ಜೈವಿಕ-ಸುರಕ್ಷಾ ವಾತಾವರಣದೊಳಗೆ ಪ್ರವೇಶ ದೊರೆಯಲಿದೆ.

    ಒಟ್ಟಾರೆ ಸೆಪ್ಟೆಂಬರ್ 26ರವರೆಗೂ ಐಪಿಎಲ್ ಟೂರ್ನಿಗೆ ಈ ಆಟಗಾರರು ಅಲಭ್ಯರಾಗುತ್ತಿದ್ದು, ಪ್ರತಿ ್ರಾಂಚೈಸಿಯ ಮೊದಲ 2-3 ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡಕ್ಕೆ ಇಂಗ್ಲೆಂಡ್-ಆಸೀಸ್ ಆಟಗಾರರ ಅಲಭ್ಯತೆ ಹೆಚ್ಚಿನ ಹೊಡೆತ ನೀಡಲಿದ್ದು, ನಾಯಕ ಸ್ಟೀವನ್ ಸ್ಮಿತ್ ಬದಲಿಗೆ ಹಂಗಾಮಿ ನಾಯಕರನ್ನೂ ನೇಮಿಸಿಕೊಳ್ಳಬೇಕಾಗಿದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಸ್ಟ್ರೇಲಿಯಾದ ನಾಥನ್ ಕೌಲ್ಟರ್-ನಿಲ್ ಮತ್ತು ಕ್ರಿಸ್ ಲ್ಯಾನ್ ಇದ್ದರೂ, ಇವರು ಪ್ರವಾಸಕ್ಕೆ ಆಯ್ಕೆಯಾಗಿಲ್ಲ. ಇಂಗ್ಲೆಂಡ್ ತಂಡದ ಯಾವುದೇ ಆಟಗಾರರು ಇನ್ನದ ಕಾರಣ ಮುಂಬೈಗೆ ಯಾವುದೇ ಹಿನ್ನಡೆಯಾಗುತ್ತಿಲ್ಲ. ಚೆನ್ನೈ ತಂಡದಲ್ಲಿ ಆಸೀಸ್ ಆಲ್ರೌಂಡರ್ ಶೇನ್ ವ್ಯಾಟ್ಸನ್ ಇದ್ದರೂ, ಅವರು ಈಗಾಗಲೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ.

    ಇದನ್ನೂ ಓದಿ: 2ನೇ ಬಾರಿಗೆ ಕೋವಿಡ್​-19 ಟೆಸ್ಟ್​ಗೆ ಒಳಗಾದ ಷಟ್ಲರ್​ ಸಿಕ್ಕಿ ರೆಡ್ಡಿ, ಫಿಸಿಯೋ ಕಿರಣ್​

    ಆಸ್ಟ್ರೇಲಿಯಾ ತಂಡ ಆಗಸ್ಟ್ 24ರಂದು ಇಂಗ್ಲೆಂಡ್ ತಲುಪಲಿದೆ. ಬಳಿಕ ಅಲ್ಲಿ ಜೈವಿಕ ಸುರಕ್ಷಾ ವಾತಾವರಣದಲ್ಲೇ ಆಡಿದರೂ, ಐಪಿಎಲ್ ಟೂರ್ನಿಯ ಜೈವಿಕ-ಸುರಕ್ಷಾ ವಾತಾವರಣಕ್ಕೆ ಕರೊನಾ ಪರೀಕ್ಷೆ ಇಲ್ಲದೆ ಪ್ರವೇಶಿಸಲು ಅವರಿಗೆ ವಿನಾಯಿತಿ ನೀಡಲಾಗುತ್ತಿಲ್ಲ. ಇಂಗ್ಲೆಂಡ್-ಆಸೀಸ್ ನಡುವಿನ ಏಕದಿನ ಸರಣಿ ಐಸಿಸಿ ವಿಶ್ವಕಪ್ ಸೂಪರ್ ಲೀಗ್‌ನ ಭಾಗವಾಗಿರಲಿದೆ.

    ಇಂಗ್ಲೆಂಡ್ ಪ್ರವಾಸಕ್ಕೆ ಆಸೀಸ್ ತಂಡ: ಆರನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ನಸ್ ಲಬುಶೇನ್, ಜೋಶ್ ಫಿಲಿಪ್, ಸ್ಟೀವನ್ ಸ್ಮಿತ್, ಅಲೆಕ್ಸ್ ಕ್ಯಾರಿ, ಮಿಚೆಲ್ ಮಾರ್ಷ್, ಮಾರ್ನಸ್ ಸ್ಟೋಯಿನಿಸ್, ಡೇನಿಯಲ್ ಸ್ಯಾಮ್ಸ್, ಆಶ್ಟನ್ ಅಗರ್, ನಾಥನ್ ಲ್ಯಾನ್, ಆಡಂ ಜಂಪಾ, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್, ಸೀನ್ ಅಬೋಟ್, ಜೋಶ್ ಹ್ಯಾಸಲ್‌ವುಡ್, ಕೇನ್ ರಿಚರ್ಡ್‌ಸನ್, ರಿಲೀ ಮೆರೆಡಿತ್, ಆಂಡ್ರೋ ಟೈ.

    ಐಪಿಎಲ್ ಮೊದಲ ವಾರಕ್ಕೆ ಅಲಭ್ಯರಾಗುವ ಆಸೀಸ್-ಇಂಗ್ಲೆಂಡ್ ಆಟಗಾರರು:
    ರಾಜಸ್ಥಾನ ರಾಯಲ್ಸ್: ಸ್ಟೀವನ್ ಸ್ಮಿತ್, ಜೋಸ್ ಬಟ್ಲರ್, ಜ್ರೋಾ ಆರ್ಚರ್, ಬೆನ್ ಸ್ಟೋಕ್ಸ್, ಆಂಡ್ರೋ ಟೈ, ಟಾಮ್ ಕರ‌್ರನ್.
    ಆರ್‌ಸಿಬಿ: ಮೊಯಿನ್ ಅಲಿ, ಆರನ್ ಫಿಂಚ್, ಜೋಶ್ ಫಿಲಿಪ್, ಕೇನ್ ರಿಚರ್ಡ್‌ಸನ್.
    ಚೆನ್ನೈ ಸೂಪರ್‌ಕಿಂಗ್ಸ್: ಜೋಶ್ ಹ್ಯಾಸಲ್‌ವುಡ್, ಸ್ಯಾಮ್ ಕರ‌್ರನ್.
    ಕೆಕೆಆರ್: ಪ್ಯಾಟ್ ಕಮ್ಮಿನ್ಸ್, ಇವೊಯಿನ್ ಮಾರ್ಗನ್, ಟಾಮ್ ಬ್ಯಾಂಟನ್.
    ಸನ್‌ರೈಸರ್ಸ್‌: ಡೇವಿಡ್ ವಾರ್ನರ್, ಜಾನಿ ಬೇರ್‌ಸ್ಟೋ, ಮಿಚೆಲ್ ಮಾರ್ಷ್.
    ಡೆಲ್ಲಿ ಕ್ಯಾಪಿಟಲ್ಸ್: ಜೇಸನ್ ರಾಯ್, ಅಲೆಕ್ಸ್ ಕ್ಯಾರಿ, ಮಾರ್ನಸ್ ಸ್ಟೋಯಿನಸ್.
    ಕಿಂಗ್ಸ್ ಇಲೆವೆನ್ ಪಂಜಾಬ್: ಗ್ಲೆನ್ ಮ್ಯಾಕ್ಸ್‌ವೆಲ್.

    ಐಪಿಎಲ್‌ಗಾಗಿ ಇಂಗ್ಲೆಂಡ್ ಪ್ರವಾಸ ತಪ್ಪಿಸಿಕೊಂಡ ಮೆಕ್‌ಡೊನಾಲ್ಡ್
    ಆಸ್ಟ್ರೇಲಿಯಾ ತಂಡದ ಸಹಾಯಕ ಕೋಚ್ ಆಂಡ್ರೋ ಮೆಕ್‌ಡೊನಾಲ್ಡ್, ಐಪಿಎಲ್ ಟೂರ್ನಿಯ ವೇಳೆ ರಾಜಸ್ಥಾನ ರಾಯಲ್ಸ್ ತಂಡದ ಜತೆಗಿರುವ ಸಲುವಾಗಿ ಇಂಗ್ಲೆಂಡ್ ಪ್ರವಾಸದಿಂದ ಹೊರಗುಳಿದಿದ್ದಾರೆ. ಅವರು ಐಪಿಎಲ್‌ನಲ್ಲಿ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಪೂರ್ವ-ಅಸ್ತಿತ್ವದಲ್ಲಿದ್ದ ಒಪ್ಪಂದದಿಂದಾಗಿ ಮೆಕ್‌ಡೊನಾಲ್ಡ್ ಇಂಗ್ಲೆಂಡ್ ಪ್ರವಾಸ ತಪ್ಪಿಸಿಕೊಳ್ಳಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಐಪಿಎಲ್ ಟೂರ್ನಿಯ ಬಳಿಕ ಮೆಕ್‌ಡೊನಾಲ್ಡ್ ಮತ್ತೆ ಆಸೀಸ್ ತಂಡವನ್ನು ಕೂಡಿಕೊಳ್ಳಲಿದ್ದಾರೆ.

    ಮಹಿಳಾ ಕ್ರಿಕೆಟ್‌ನಲ್ಲಿ ಜರ್ಮನಿ ಪರ ವಿಶ್ವದಾಖಲೆ ಬರೆದ ಕನ್ನಡತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts