More

    ಇಂದಿನಿಂದ ಇಂಗ್ಲೆಂಡ್​-ಪಾಕಿಸ್ತಾನ​ ಮೊದಲ ಟೆಸ್ಟ್

    ಮ್ಯಾಂಚೆಸ್ಟರ್​: ಕರೊನಾ ವೈರಸ್​ ಭೀತಿ ನಡುವೆಯೂ 117 ದಿನಗಳ ಬಳಿಕ ಕ್ರಿಕೆಟ್​ ಪುನರಾರಂಭಕ್ಕೆ ಸಾಕ್ಷಿಯಾದ ಕ್ರಿಕೆಟ್​ ಜನಕರ ನಾಡು ಇಂಗ್ಲೆಂಡ್​ ನೆಲದಲ್ಲೇ ಮತ್ತೊಂದು ಟೆಸ್ಟ್​ ಸರಣಿಗೆ ವೇದಿಕೆ ಸಿದ್ಧವಾಗಿದೆ. ಕಳೆದ ವಾರವಷ್ಟೇ ಜೈವಿಕ ಸುರಾಕ್ಷ ವಾತಾವರಣದಲ್ಲಿ ಮುಕ್ತಾಯಗೊಂಡ ಟೆಸ್ಟ್​ ಸರಣಿಯಲ್ಲಿ ಇಂಗ್ಲೆಂಡ್​ ತಂಡ 2&1 ರಿಂದ ವೆಸ್ಟ್​ ಇಂಡೀಸ್​ ತಂಡವನ್ನು ಮಣಿಸಿತ್ತು. ಸರಣಿ ಗೆದ್ದ ಹುಮ್ಮಸ್ಸಿನಲ್ಲಿರುವ ಇಂಗ್ಲೆಂಡ್​, ಬುಧವಾರದಿಂದ ಓಲ್ಡ್​ ಟ್ರಾಫೋರ್ಡ್ ಮೈದಾನದಲ್ಲಿ ನಡೆಯಲಿರುವ ಪ್ರವಾಸಿ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್​ ಪಂದ್ಯಕ್ಕೆ ಸನ್ನದ್ಧವಾಗಿದೆ.


    ಆತ್ಮವಿಶ್ವಾಸದಲ್ಲಿ ಉಭಯ ತಂಡಗಳು
    2016, 2018ರಲ್ಲಿ ಇಂಗ್ಲೆಂಡ್​ ಪ್ರವಾಸ ಕೈಗೊಂಡಿದ್ದ ವೇಳೆ ಸರಣಿಯಲ್ಲಿ ಸಮಬಲ ಸಾಧಿಸಿದ್ದ ಪಾಕಿಸ್ತಾನ ತಂಡ, ಇಂಗ್ಲೆಂಡ್​ ಎದುರು ಕಳೆದ 10 ವರ್ಷಗಳಿಂದ ಸರಣಿ ಸೋತಿಲ್ಲ. ಇದು ಪಾಕಿಸ್ತಾನ ಆತ್ಮವಿಶ್ವಾಸ ಹೆಚ್ಚಲು ಕಾರಣವಾದರೆ, ಕಳೆದ ವಾರವಷ್ಟೇ ವೆಸ್ಟ್​ ಇಂಡೀಸ್​ ಎದುರು ಸರಣಿ ಗೆದ್ದ ವಿಶ್ವಾಸದಲ್ಲಿ ಆತಿಥೇಯ ತಂಡವಿದೆ. ಅದರಲ್ಲೂ ಮೊದಲ ಟೆಸ್ಟ್​ ಪಂದ್ಯದಲ್ಲಿ ಸೋತರೂ ಇಂಗ್ಲೆಂಡ್​, ವೇಗಿಗಳಾದ ಜೇಮ್ಸ್​ ಆಂಡರ್​ಸನ್​, ಸ್ಟುವರ್ಟ್​ ಬ್ರಾಡ್​, ಕ್ರಿಸ್​ ವೋಕ್ಸ್​ ದಾಳಿಯಿಂದಾಗಿ ಕಡೇ ಎರಡು ಪಂದ್ಯ ಗೆದ್ದುಕೊಂಡಿತ್ತು. ಕಡೇ ಟೆಸ್ಟ್​ನಲ್ಲಿ 500 ವಿಕೆಟ್​ ಪೂರೈಸಿದ್ದ ಸ್ಟುವರ್ಟ್​ ಬ್ರಾಡ್​ ಮತ್ತೊಮ್ಮೆ ಕೇಂದ್ರಬಿಂದುವಾಗಲಿದ್ದಾರೆ.
    ಮೂವರು ವೇಗಿಗಳು, 2 ಸ್ಪಿನ್ನರ್​ಗಳನ್ನು ಕಣಕ್ಕಿಳಿಸುವ ಯೋಜನೆಯಲ್ಲಿರುವ ಪಾಕಿಸ್ತಾನ ತಂಡ ಇತಿಹಾಸ ಮರುಕಳಿಸುವ ಇರಾದೆಯಲ್ಲಿದೆ. 2016ರ ಪ್ರವಾಸದಲ್ಲಿ ತಂಡದ ಭಾಗವಾಗಿದ್ದ ಮುಖ್ಯಕೋಚ್​ ಮಿಸ್ಬಾ ಉಲ್​ ಹಕ್​ಗೆ ಬೌಲರ್​ಗಳ ಮೇಲೆಯೇ ಹೆಚ್ಚು ನಂಬಿಕೆ. 2018ರ ಪ್ರವಾಸದಲ್ಲಿ ತಂಡದಲ್ಲಿದ್ದ ಮೊಹಮದ್​ ಅಬ್ಬಾಸ್​, ಎಡಗೈ ವೇಗಿ ಶಾಹೀನ್​ ಶಾ ಅಫ್ರಿದಿ ಹಾಗೂ ನಸೀಮ್​ ಶಾ ತ್ರಿಮೂತಿರ್ಗಳ ಮೇಲೆ ಮಿಸ್ಬಾ ಅತಿಯಾದ ಭರವಸೆಯನ್ನುಟ್ಟುಕೊಂಡಿದ್ದಾರೆ.

    ಟೀಮ್​ ನ್ಯೂಸ್​
    ಇಂಗ್ಲೆಂಡ್​:
    ವೆಸ್ಟ್​ ಇಂಡೀಸ್​ ವಿರುದ್ಧ ಕಡೇ ಟೆಸ್ಟ್​ನಲ್ಲಿ ಆಡಿದ ತಂಡವನ್ನೇ ಇಂಗ್ಲೆಂಡ್​ ಉಳಿಸಿಕೊಳ್ಳಲಿದೆ. ಆಲ್ರೌಂಡರ್​ ಬೆನ್​ ಸ್ಟೋಕ್ಸ್​ ಸಹಿತ ನಾಲ್ಕೂ ವೇಗಿಗಳು ಕಣಕ್ಕಿಳಿಯಲಿದ್ದಾರೆ. ಆಂಡರ್​ಸನ್​, ಬ್ರಾಡ್​, ಜೋಫ್ರಾ ಆರ್ಚರ್​ ಕಣಕ್ಕಿಳಿದರೆ, ಕ್ರಿಸ್​ ವೋಕ್ಸ್​ ಆಯ್ಕೆಯನ್ನು ತಳ್ಳಿಹಾಕುವಂತಿಲ್ಲ. ವೇಗಿಗಳ ಆಯ್ಕೆ ನಾಯಕ ಜೋ ರೂಟ್​ಗೆ ತಲೆನೋವಾಗಿರುವುದಂತು ನಿಜ. ನಾಲ್ಕೂ ವೇಗಿಗಳಿಗೆ ಅವಕಾಶ ಕಲ್ಪಿಸಿದರೆ ಸ್ಪಿನ್ನರ್​ ಡೊಮಿನಿಕ್​ ಬೆಸ್​ ಸ್ಥಾನ ಉಳಿಸಿಕೊಳ್ಳಲಿದ್ದಾರೆ. ಉಳಿದಂತೆ ತಂಡದಲ್ಲಿ ಹೆಚ್ಚಿನ ಬದಲಾವಣೆ ಕಷ್ಟ.
    ಸಂಭಾವ್ಯ ತಂಡ: ರೋರಿ ಬರ್ನ್ಸ್​, ಡೊಮಿನಿಕ್​ ಸಿಬ್ಲೆ, ಜಾಕ್​ ಕ್ರೌಲಿ, ಜೋ ರೂಟ್​, ಬೆನ್​ ಸ್ಟೋಕ್ಸ್​, ಒಲಿ ಪೋಪ್​ ಜೋಸ್​ ಬಟ್ಲರ್​, ಡೊಮಿನಿಕ್​ ಬೆಸ್​, ಜೋ್ರಾ ಆರ್ಚರ್​/ಕ್ರಿಸ್​ ವೋಕ್ಸ್​, ಸ್ಟುವರ್ಟ್​ ಬ್ರಾಡ್​, ಜೇಮ್ಸ್​ ಆಂಡರ್​ಸನ್​.

    ಪಾಕಿಸ್ತಾನ:
    ಕೋಚ್​ ಸಲಹೆ ಮೇರೆಗೆ ತಂಡದಲ್ಲಿ ಇಬ್ಬರು ಸ್ಪಿನ್ನರ್​ಗಳಿಗೆ ಅವಕಾಶ ಕಲ್ಪಿಸುವ ಸಾಧ್ಯತೆಗಳಿವೆ. ಇದರಿಂದಗಿ ಹ್ಯಾರಿಸ್​ ಸೊಹೈಲ್​ಗೆ ಅವಕಾಶ ಸಿಗುವುದು ಅನುಮಾನ. ಲೆಗ್​ ಸ್ಪಿನ್ನರ್​ ಶಾಬಾದ್​ ಖಾನ್​, 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗಿಳಿದರೆ, ವಿಕೆಟ್​-ಕೀಪರ್​ ಮೊಹಮದ್​ ರಿಜ್ವಾನ್​ 6ನೇ ಕ್ರಮಾಂಕದಲ್ಲಿ ಇಳಿಯಲಿದ್ದಾರೆ.
    ಸಂಭಾವ್ಯ ತಂಡ: ಶಾನ್​ ಮೊಹಸೂದ್​, ಅಬಿದ್​ ಅಲಿ, ಅಜರ್​ ಅಲಿ, ಬಾಬರ್​ ಅಜಂ, ಅಸಾದ್​ ಶಫೀಕ್​, ಮೊಹಮದ್​ ರಿಜ್ವಾನ್​, ಶಾದಾಬದ್​ ಖಾನ್​, ಯಾಸೀರ್​ ಷಾ, ಮೊಹಮದ್​ ಅಬ್ಬಾಸ್​, ಶಾಹೀನ್​ ಆಫ್ರಿದಿ, ನಸೀಮ್​ ಷಾ.

    10 : ಪಾಕಿಸ್ತಾನ ತಂಡ ಕಳೆದ 10 ವರ್ಷಗಳಿಂದ ಇಂಗ್ಲೆಂಡ್​ ಎದುರು ಟೆಸ್ಟ್​ ಸರಣಿ ಸೋತಿಲ್ಲ, 2010ರಲ್ಲಿ 1-3 ರಿಂದ ಕಡೇ ಬಾರಿಗೆ ಸರಣಿ ಸೋತಿತ್ತು. ಪಾಕ್​ ಆತಿಥ್ಯದಲ್ಲಿ ಯುಎಇಯಲ್ಲಿ 2011-12, 2015-16ರಲ್ಲಿ ನಡೆದ ಎರಡೂ ಸರಣಿಗಳಲ್ಲಿ ಪಾಕಿಸ್ತಾನವೇ ಜಯ ದಾಖಲಿಸಿತ್ತು, 2016 ಹಾಗೂ 2018ರಲ್ಲಿ ಇಂಗ್ಲೆಂಡ್​ ಪ್ರವಾಸ ಕೈಗೊಂಡಿದ್ದ ಪಾಕಿಸ್ತಾನ ಕ್ರಮವಾಗಿ 2-2, 1-1 ರಿಂದ ಸರಣಿಯಲ್ಲಿ ಸಮಬಲ ಸಾಧಿಸಿತ್ತು.
    83: ಉಭಯ ತಂಡಗಳು ಇದುವರೆಗೂ 83 ಟೆಸ್ಟ್​ ಪಂದ್ಯಗಳನ್ನಾಡಿದ್ದು, 21ರಲ್ಲಿ ಪಾಕಿಸ್ತಾನ, 25 ಪಂದ್ಯಗಳಲ್ಲಿ ಇಂಗ್ಲೆಂಡ್​ ಜಯ ದಾಖಲಿಸಿದ್ದು, ಉಳಿದ 37 ಪಂದ್ಯಗಳು ಡ್ರಾಗೊಂಡಿವೆ.
    25: ಎರಡು ತಂಡಗಳ ನಡುವೆ ಇದುವರೆಗೂ 25 ಸರಣಿಗಳು ನಡೆದಿದ್ದು, 8ರಲ್ಲಿ ಪಾಕ್​, 9ರಲ್ಲಿ ಇಂಗ್ಲೆಂಡ್​ ಹಾಗೂ 8 ಸರಣಿಗಳು ಡ್ರಾಗೊಂಡಿವೆ.

    ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
    ನೇರ ಪ್ರಸಾರ: ಸೋನಿ ಸಿಕ್ಸ್​, ಜಿಯೋ ಟಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts