More

    ಸೋಲಾರ್ ಪಾರ್ಕ್ ಭೂಮಿ ಬಾಡಿಗೆ ಹೆಚ್ಚಿಸಿ : ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಸೂಚನೆ

    ಪಾವಗಡ: ಸೌರಶಕ್ತಿ ಬಳಸಿಕೊಂಡು ವಿದ್ಯುತ್ ಉತ್ಪಾದಿಸುತ್ತಿರುವ ತಿರುಮಣಿ ಸೋಲಾರ್ ಉತ್ಪಾದನಾ ಘಟಕ ದೇಶಲ್ಲಿಯೇ ಮಹತ್ವದ ಸ್ಥಾನ ಪಡೆದುಕೊಂಡಿದೆ ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಅಭಿಪ್ರಾಯಪಟ್ಟರು.

    ತಿರುಮಣಿ ಸೋಲಾರ್ ಪಾರ್ಕ್‌ನ ಸೌರ ವಿದ್ಯುತ್ ಶಕ್ತಿ ಉತ್ಪಾದನಾ ಘಟಕದ ಕಚೇರಿ ಬಳಿ ಬುಧವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ರೈತರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ವರ್ಷಕ್ಕೆ 1 ಎಕರೆಗೆ 21 ಸಾವಿರ ರೂಪಾಯಿ ಬಾಡಿಗೆ ನೀಡುತ್ತಿದ್ದು, ಕಂಪನಿಗಳ ಜತೆಯಲ್ಲಿ ಮಾತನಾಡಿ ಬಾಡಿಗೆ ಹೆಚ್ಚು ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

    ಪ್ರಧಾನಿ ಮೋದಿ ಅವರ ಆತ್ಮನಿರ್ಭರ ಭಾರತದ ಕಲ್ಪನೆಯಡಿಯಲ್ಲಿ ಎಲ್ಲ ಇಲಾಖೆಗಳು ಮತ್ತು ಗ್ರಾಮಗಳು ಸ್ವಾಲಂಬಿಯಾಗಲು ಎಲ್ಲರೂ ಒಟ್ಟಾಗಿ ದುಡಿಯಬೇಕು, ಯಾವುದೇ ಸಮಸ್ಯೆ ಇದ್ದರೂ ನನಗೆ ಪತ್ರದ ಮೂಲಕ ತಿಳಿಸಬಹುದು ಎಂದು ತಿಳಿಸಿದರು.

    ಸೋಲಾರ್‌ನ ಸಿ.ಎಸ್.ಆರ್.ನಿಂದ 57 ಕೋಟಿ ರೂಪಾಯಿಯಲ್ಲಿ ತಿರುಮಣಿ ಮತ್ತು ವಳ್ಳೂರು ಗ್ರಾಮ ಪಂಚಾಯಿತಿಗಳಲ್ಲಿ ರಸ್ತೆ, ಚರಂಡಿ, ವಿದ್ಯುತ್ ಮತ್ತಿತರ ಸೌಲಭ್ಯಗಳಿಗಾಗಿ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಿದ್ದು, ಸ್ಥಳೀಯ ನಿರುದ್ಯೋಗಿ ಯುವಕರಿಗೆ ಪಾರ್ಕ್‌ನಲ್ಲಿ ಉದ್ಯೋಗವಕಾಶ ಕಲ್ಪಿಸಲಾಗುವುದು. ತಿರುಮಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಮತ್ತು ಈ ಭಾಗದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾದರಿಯಂತೆ ಸಿ.ಎಸ್.ಆರ್. ಹಣದಲ್ಲಿ ಸಂಬಳ ಕೊಡಲು ಅಧಿಕಾರಿಗಳು ಕ್ರೀಯಾಯೋಜನೆ ತಯಾರಿಸಬೇಕು ಎಂದು ಸೂಚಿಸಿದರು.

    ಆರೋಗ್ಯ ಕೇಂದ್ರಕ್ಕೆ ಭೇಟಿ: ಶ್ರೀ ರಾಮಕೃಷ್ಣ ಸಂಘಟಿತ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದಾಗ ಜಪಾನಂದ ಸ್ವಾಮೀಜಿ ಆರೋಗ್ಯ ಕೇಂದ್ರದ ಸೇವಾ ಕಾರ್ಯಗಳನ್ನು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು. ದಾಬಸ್ ಪೇಟೆ ಮಾರ್ಗವಾಗಿ ಪಾವಗಡಕ್ಕೆ 11.30ಕ್ಕೆ ಬಂದ ಸಚಿವರು ವಿವಿಧ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಸಂಜೆ 4 ಗಂಟೆಗೆ ಆಂಧ್ರದ ಪೆನಕೊಂಡ ಮತ್ತು ಬಾಗೇಪಲ್ಲಿ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

    ಸಚಿವರನ್ನು ಭೇಟಿ ಮಾಡಿದ ಮಾಜಿ ಶಾಸಕ : ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರನ್ನು ಜೆಡಿಎಸ್ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಭೇಟಿ ಮಾಡಿ, ತಾಲೂಕಿನ ರೈತರ ಟಿ.ಸಿ.ಗಳು ಸುಟ್ಟುಹೋದರೆ ತೊಂದರೆಯಾಗುತ್ತಿದ್ದು, ತಕ್ಷಣ ಟಿಸಿಗಳ ರಿಪೇರಿ ಮಾಡಿಸಿಕೊಡಲು ಮತ್ತು ನಿರಂತರ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವಂತೆ ಒತ್ತಾಯಿಸಿದರು. ಬೆಸ್ಕಾಂ ಅಧಿಕಾರಿಗಳಾದ ಗೋವಿಂದಪ್ಪ, ಆದಿನಾರಾಯಣ, ಶ್ರೀನಿವಾಸ್ ಮತ್ತು ಮಧುಗಿರಿ ಡಿ.ವೈ.ಎಸ್.ಪಿ. ರಾಮಕೃಷ್ಣಪ್ಪ, ಪಾವಗಡ ಠಾಣಾ ಸಿಪಿಐ ಲಕ್ಷ್ಮಿಕಾಂತ್ ಮತ್ತ್ತು ಸಿಬ್ಬಂದಿ ಇದ್ದರು.

    ಬಿಜೆಪಿ ಕಚೇರಿಗೆ ಭೇಟಿ: ಸಭೆ ನಂತರ ಸಚಿವರು ಸೋಲಾರ್ ಪಾರ್ಕ್ ವೀಕ್ಷಿಸಿ ವಳ್ಳೂರು ಗ್ರಾಮದ ಬಳಿ ಇರುವ ಪವರ್ ಗ್ರಿಡ್ ಕಚೇರಿಯಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿ ನಂತರ ಪಾವಗಡ ಬಿಜೆಪಿ ಕಚೇರಿಗೆ ಭೇಟಿ ನೀಡಿ, ಕಾರ್ಯಕರ್ತರ ಬಳಿ ಪಕ್ಷ ಸಂಘಟನೆಯ ಬಗ್ಗೆ ಚರ್ಚಿಸಿದರು.

    ವಸತಿಶಾಲೆ ಪ್ರಾರಂಭಿಸಲು ಶಿಕ್ಷಣ ಸಚಿವರ ಜತೆ ಚರ್ಚೆ: ಸೋಲಾರ್ ಪಾರ್ಕ್ ಇರುವ ಗ್ರಾಮಗಳ ರಸ್ತೆಯ ಬಳಿ ವಿದ್ಯುತ್ ಕಂಬ ಹಾಕಿ ಸೋಲಾರ್ ಲೈಟ್ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಪದೇಪದೆ ಪಾರ್ಕ್‌ನಲ್ಲಿ ಅಗ್ನಿ ಅವಘಡಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಅಗ್ನಿಶಾಮಕಠಾಣೆ ಪ್ರಾರಂಭಿಸಿಲು ಗೃಹಮಂತ್ರಿಗಳ ಬಳಿ ಚರ್ಚಿಸಲಾಗುವುದು. ಸೋಲಾರ್ ಪಾರ್ಕ್ ಬಳಿ ಸುಮಾರು 25 ಎಕರೆ ಜಮೀನಲ್ಲಿ ವಸತಿಶಾಲೆಗಳನ್ನು ಪ್ರಾರಂಭಿಸಲು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಬಳಿ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದರು.

    50 ಎಕರೆ ಇದ್ದವರೂ ಕೂಲಿ ಅರಸಿ ಗುಳೆ: ತಾಲೂಕಿನಲ್ಲಿ 50 ಎಕರೆ ಇದ್ದವರೂ ಕೂಲಿ ಅರಸಿ ಗುಳೆ ಹೋಗುತ್ತಾರೆ. ಅಂತಹವರಿಗೆ ಉದ್ಯೋಗವಕಾಶ ಕಲ್ಪಿಸಬೇಕು. ಐಟಿಐ ಮತ್ತು ಡಿಪ್ಲೊಮಾ ಆದವರಿಗೆ ಪಾರ್ಕ್‌ನಲ್ಲಿ ಉದ್ಯೋಗ ನೀಡಬೇಕು, ವೆಂಕಟಮ್ಮನಹಳ್ಳಿ, ಕ್ಯಾತಗಾನ ಚರ್ಲು, ಮತ್ತು ಇಂಟೂರಾಯನಹಳ್ಳಿಗಳ ರೈತರು ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಸುಮಾರು 2000 ಎಕರೆ ಜಮೀನು ನೀಡಲು ಸಿದ್ಧರಿದ್ದು, ಸರ್ಕಾರದ ಜತೆ ಮಾತನಾಡಿ ಜಮೀನು ಪಡೆದುಕೊಂಡು ಇನ್ನೂ ಹೆಚ್ಚು ಎಕರೆಯಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಬೇಕು ಎಂದು ಸಚಿವರಲ್ಲಿ ಶಾಸಕ ವೆಂಕಟರವಣಪ್ಪ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts