More

    50ನೇ ವರ್ಷದ ಭೂಮಿ ದಿನಕ್ಕೆ ಗೂಗಲ್‌ನಿಂದ ‘ದುಂಬಿ’ ನಮನ: ಕ್ಲಿಕ್‌ ಮಾಡಿ, ಆಟವಾಡಿ ನೀವೂ ಎಂಜಾಯ್‌ ಮಾಡಿ

    ಕ್ಯಾಲಿಫೋರ್ನಿಯಾ: ಇಂದು ವಿಶ್ವ ಭೂಮಿ ದಿನ. 50ನೇ ವರ್ಷದ ಸಂಭ್ರಮಾಚರಣೆ ಇದು. ವಿಶೇಷ ಸಂದರ್ಭಗಳಲ್ಲಿ ಗೂಗಲ್‌ ಸಂಸ್ಥೆಯು ಹಲವಾರು ಮಹನೀಯರಿಗೆ ಹಾಗೂ ಜೀವಿಗಳಿಗೆ ‘ಡೂಡಲ್‌’ ಮೂಲಕ ಗೌರವ ಸಮರ್ಪಣೆ ಮಾಡುತ್ತ ಬಂದಿದೆ.

    ಈ ವರ್ಷದ ಭೂಮಿ ದಿನಾಚರಣೆಗೆ ಗೂಗಲ್‌ ಆಯ್ದುಕೊಂಡಿರುವುದು ಅತ್ಯಂತ ಪುಟ್ಟ, ಆದರೆ ಭೂಮಿ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಸ್ಥಾನವನ್ನು ಪಡೆದಿರುವ ದುಂಬಿ ಅಥವಾ ಜೇನ್ನೊಣವನ್ನು.

    ಪರಿಸರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಪ್ರಕೃತಿಯನ್ನು ರಕ್ಷಿಸಲು ಜನರನ್ನು ಪ್ರೇರೇಪಿಸುವ ಸಲುವಾಗಿ ಆಚರಿಸಲಾಗುವ ಭೂಮಿ ದಿನದಂದು ಮನುಷ್ಯ ಈ ಪುಟ್ಟ ಕೀಟದಿಂದ ಕಲಿಯಬೇಕಿರುವ ಸಾಕಷ್ಟಿದೆ ಎನ್ನುವುದು ಗೂಗಲ್‌ ಅನಿಸಿಕೆ. ಅದಕ್ಕಾಗಿಯೇ ಈ ವರ್ಷದ ಆಚರಣೆ ಅದಕ್ಕೆ ಸಮರ್ಪಣೆ.

    ಪ್ರತಿದಿನ ಹೂವುಗಳನ್ನು ಅರಸಿ ಬಹು ದೂರದವರೆಗೆ ಹೋಗಿ ಅಸಂಖ್ಯ ಹೂವುಗಳ ಮೇಲೆ ಕುಳಿತು ಮಕರಂದ ಸಂಗ್ರಹಿಸುವ ಈ ಜೀವಿಯಿಂದ ಪರಿಸರಕ್ಕಾಗುತ್ತಿರುವ ಪ್ರಯೋಜನ ಹಲವರಿಗೆ ತಿಳಿದೇ ಇಲ್ಲ. ಪ್ರತಿ ಹೂವಿನಿಂದಲೂ ಮಕರಂದ ಹೀರುವ ಮೂಲಕ ಪರಾಗಸ್ಪರ್ಶ ಕ್ರಿಯೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಉಂಟಾಗುವ ಪ್ರಕ್ರಿಯೆಯಲ್ಲಿ ಪರಾಗರೇಣು ( ಗಂಡು ಲಿಂಗಾಣು ) ಅಂಡಾಶಯವನ್ನು (ಹೆಣ್ಣು ಲಿಂಗಾಣು) ತಲುಪುತ್ತದೆ. ಈ ರೀತಿಯ ಸಂಯೋಗದಿಂದಲೇ ಹೂವುಗಳು ಈಚಾಗಲು, ಕಾಯಾಗಲು ಹಣ್ಣಾಗಲು, ಬೀಜಗಳು ಉಂಟಾಗಿ ಅವು ಸಸ್ಯಗಳಾಗಿ ಆ ಮೂಲಕ ಆ ಸಸ್ಯದ ವಂಶಾಭಿವೃದ್ಧಿಯಾಗಲು ಸಹಾಯವಾಗುತ್ತದೆ. ಇದು ಸೃಷ್ಟಿಯ ಅದ್ಭುತ ಪ್ರಕ್ರಿಯೆ. ಇದು ಸಾಧ್ಯವಾಗುವುದು ದುಂಬಿಯಂಥ ಪುಟ್ಟ ಕೀಟಗಳಿಂದ. ಆದ್ದರಿಂದಲೇ ಇದಕ್ಕೆ ನಮ್ಮ ನಮನಗಳು ಎಂದಿದೆ ಗೂಗಲ್‌.

    ಇಂದಿನ ಡೂಡಲ್‌ ಆರ್ಟ್‌ ರಚಿಸಿರುವ ಡೂಡ್ಲರ್ಸ್ ಜಾಕೋಬ್ ಹೌಕ್ರಾಫ್ಟ್ ಮತ್ತು ಸ್ಟೆಫನಿ ಗು. ಗೂಗಲ್‌ ಡಾಟ್‌ ಕಾಮ್‌ ಕ್ಲಿಕ್‌ ಮಾಡಿದರೆ, ಅಲ್ಲಿ ವಿವಿಧ ಹೂವುಗಳು ಮತ್ತು ದುಂಬಿಗಳನ್ನು ಕಾಣಬಹುದು. ಹನಿಬೀ ಕನ್ಸರ್ವೆನ್ಸಿಯೊಂದಿಗೆ ಇದನ್ನು ರಚಿಸಲಾಗಿದೆ. ನೀವು ಯಾವುದಾದರೂ ಹೂವನ್ನು ಆಯ್ದುಕೊಂಡರೆ ದುಂಬಿ ಹಾರುವುದರ ಜತೆಗೆ, ಅದರ ವಿಶೇಷತೆಗಳನ್ನೂ ಸಾರುತ್ತದೆ. ಇಂಥದ್ದೊಂದು ಆಟವನ್ನು ಡೂಡಲ್‌ನಲ್ಲಿ ಕಾಣಬಹುದಾಗಿದೆ ಎಂದು ಇವರು ಹೇಳಿದ್ದಾರೆ.

    ಅದರ ಜತೆಗೆ, ಇಂಥ ಮಹಾತ್ಕಾರ್ಯ ಮಾಡುತ್ತಿರುವ ಜೇನ್ನೊಣವನ್ನು ಯಾವುದೇ ಕಾರಣಕ್ಕೂ ನಾಶ ಮಾಡಬೇಡಿ ಎಂಬ ಸಂದೇಶವೂ ಇದರಲ್ಲಿದೆ. ಸಾಧ್ಯವಾದಷ್ಟು ಜೇನುಸಾಕಣೆ ಮಾಡಿ, ಜೇನು ಸಾಕುತ್ತಿರುವ ಗುಂಪುಗಳಿಗೆ ಧನ ಸಹಾಯ ಮಾಡಿ, ಸಾಧ್ಯವಾದಷ್ಟು ಮಟ್ಟಿಗೆ ಅವುಗಳಿಗೆ ಸುರಕ್ಷಿತ ತಾಣಗಳನ್ನು ಮಾಡಿಕೊಡಿ. ಅವುಗಳ ಪರಾಗಸ್ಪರ್ಶಕ್ಕೆ ಅನುಕೂಲ ಮಾಡಿಕೊಡಲು ಹೂವಿನ ಗಿಡಗಳನ್ನು ನೆಡಿ ಎಂಬಿತ್ಯಾದಿ ಸಂದೇಶವೂ ಅದರಲ್ಲಿದೆ. (ಏಜೆನ್ಸೀಸ್‌)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts