More

    ರೋಗಿಗಳ ಗೋಳು ಕೇಳುವರು ಯಾರು..!

    ಧನಂಜಯ ಎಸ್. ಹಕಾರಿ ದಾವಣಗೆರೆ: ಹೊರಗುತ್ತಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರದಿಂದ ದಾವಣಗೆರೆಯ ಹೃದಯಭಾಗದಲ್ಲಿರುವ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳು ಪರಿತಪಿಸುವ ಸ್ಥಿತಿ ಬಂದೊದಗಿದೆ. ಅದೇನೋ ಹೇಳ್ತಾರಲ್ಲ. ಯಾರದ್ದೋ ತಪ್ಪಿಗೆ ಮತ್ತಿನ್ಯಾರಿಗೋ ಶಿಕ್ಷೆ ಎನ್ನುವಂತೆ, ಜನಪ್ರತಿನಿಧಿಗಳು, ಅಧಿಕಾರಿಗಳ ಎಡವಟ್ಟಿನಿಂದ ರೋಗಿಗಳ ಸ್ಥಿತಿ ಶೋಚನೀಯವಾಗಿದೆ.

    ತುರ್ತು ಸೇವೆ, ಹೆರಿಗೆ ವಿಭಾಗ, ಶಸ್ತ್ರ ಚಿಕಿತ್ಸಾ ವಿಭಾಗ, ನವಜಾತ ಶಿಶುಗಳ ತೀವ್ರ ನಿಗಾ ಘಟಕ, ಜನರಲ್ ವಾರ್ಡ್‌ಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ದೊರೆಯುತ್ತಿಲ್ಲ. ಆಸ್ಪತ್ರೆಯ ಕಾಯಂ ಸಿಬ್ಬಂದಿ ಬೆರಳೆಣಿಕೆಯಷ್ಟಿದ್ದು, ಸೇವೆ ನೀಡುವಲ್ಲಿ ಕಷ್ಟವಾಗುತ್ತಿದೆ. ಅಧಿಕಾರಿಗಳು ಮಾತ್ರ ಇದಾವುದರ ಬಗ್ಗೆಯೂ ತಲೆ ಕೆಡಿಸಿಕೊಂಡಿಲ್ಲ.

    ಹೆರಿಗೆ ವಾರ್ಡ್‌ನಲ್ಲಿ ಶುಶ್ರೂಷಕರ ಕೊರತೆ ಇರುವುದರಿಂದ ಜಿಲ್ಲಾಸ್ಪತ್ರೆಗೆ ಬರುವ ಗರ್ಭಿಣಿಯರನ್ನು ಸಿಬ್ಬಂದಿ ಮತ್ತೊಂದು ಆಸ್ಪತ್ರೆಗೆ ಕಳುಹಿಸುತ್ತಿದ್ದಾರೆ. ಇದರಿಂದ ಬಡವರು ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ನೀಡಿ ಚಿಕಿತ್ಸೆ ಪಡೆಯಬೇಕಿದೆ.

    ರೋಗಿಗಳ ಪರದಾಟ
    ರೋಗಿಗಳನ್ನು ಸ್ಟ್ರೆಚರ್‌ನಲ್ಲಿ ಕೊಂಡೊಯ್ಯಲು ಸಿಬ್ಬಂದಿಗಳಿಲ್ಲ. ರೋಗಿಗಳ ಸಂಬಂಧಿಕರೇ ಒಂದು ಕೈಯಲ್ಲಿ ಗ್ಲೂಕೋಸ್ ಬಾಟಲಿ ಹಿಡಿದು, ಆಸ್ಪತ್ರೆ ಕೊಠಡಿಗೆ ದಾಖಲಿಸುತ್ತಿದ್ದ ದೃಶ್ಯ ಕಂಡು ಬಂತು. ನೌಕರರು ಕೆಲಸಕ್ಕೆ ಗೈರಾಗಿರುವ ಕಾರಣ ಶಾಶ್ವತ ಸಿಬ್ಬಂದಿಗೆ ಹೆಚ್ಚಿನ ಹೊರೆಯಾಗಿದ್ದು, ಎಲ್ಲ ರೀತಿಯ ಕೆಲಸಗಳನ್ನು ನಿರ್ವಹಿಸಬೇಕಾಗಿದೆ.ರೋಗಿಗಳ ಗೋಳು ಕೇಳುವರು ಯಾರು..!

    ಊಟ ನೀಡಲು ವಿಳಂಬ
    ರೋಗಿಗಳಿಗೆ ಹೊತ್ತು ಹೊತ್ತಿಗೆ ಸರಿಯಾಗಿ ಊಟ, ಔಷಧೋಪಚಾರ ಹಾಗೂ ವಿಶ್ರಾಂತಿ ಬೇಕು. ಆದರೆ ಈಗ ರೋಗಿಗಳಿಗೆ ನಿಗದಿತ ವೇಳೆಗೆ ಊಟ ದೊರೆಯುತ್ತಿಲ್ಲ. ಔಷಧಿಗಳನ್ನು ನೀಡುವಲ್ಲಿ ವಿಳಂಬವಾಗುತ್ತಿದೆ.

    ಶುಚಿತ್ವ ಕಾಣದ ಕೊಠಡಿಗಳು
    ಆಸ್ಪತ್ರೆಯಲ್ಲಿ ನಾನ್‌ಕ್ಲಿನಿಕಲ್ ಮತ್ತು ಡಿ ದರ್ಜೆ ನೌಕರರು ಕೆಲಸ ಸ್ಥಗಿತಗೊಳಿಸಿ 48 ಗಂಟೆಗಳಲ್ಲೇ ಕೊಠಡಿಗಳು ದುರ್ವಾಸನೆ ಬೀರುತ್ತಿವೆ. ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದೆ. ಸ್ವಚ್ಛತೆಯಿಲ್ಲದೇ ಜಿಲ್ಲಾಸ್ಪತ್ರೆ ಅನೈರ್ಮಲ್ಯದ ಗೂಡಾಗಿದೆ. ಕಸದ ಚೀಲಗಳು ಕೊಠಡಿಯ ಮೂಲೆಯಲ್ಲಿ ರಾರಾಜಿಸುತ್ತಿವೆ. ಶುಚಿ ಇಲ್ಲದ ಕೋಣೆಗಳಲ್ಲಿ ರೋಗಿಗಳು ಕಾಲ ಕಳೆಯುವಂತಾಗಿದೆ.

    ಆಸ್ಪತ್ರೆಯಲ್ಲಿ ರೋಗಿಗಳಿಗೆ ತೊಂದರೆಯಾಗಿರುವುದು ಗಮನಕ್ಕೆ ಬಂದಿದೆ. ಇದು ರಾಜ್ಯ ವ್ಯಾಪ್ತಿಗೆ ಒಳಪಡುತ್ತಿರುವ ವಿಷಯವಾಗಿದೆ. ರಿಸ್ಕ್ ಅಲೋವೆನ್ಸ್ ನೀಡಬೇಕು ಎನ್ನುವ ಬೇಡಿಕೆಯನ್ನು ರಾಜ್ಯ ಆಯುಕ್ತರೊಂದಿಗೆ ಚರ್ಚಿಸಲಾಗಿದೆ. ಸರ್ಕಾರ ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ಇದೆ. ಮುಷ್ಕರ 2ನೇ ದಿನಕ್ಕೆ ಕಾಲಿಟ್ಟಿದೆ. ಆಸ್ಪತ್ರೆಯ ಸ್ಥಿತಿ ಗಂಭೀರವಾಗಿರುವ ಕಾರಣದಿಂದ ಪರ‌್ಯಾಯ ವ್ಯವಸ್ಥೆಗೆ ಚಿಂತಿಸಲಾಗಿದೆ.

    ಶಿವಾನಂದ ಕಾಪಶಿ, ಜಿಲ್ಲಾಧಿಕಾರಿ

    ಗಬ್ಬು ನಾರುತ್ತಿದೆ ಶೌಚಗೃಹ
    ಎರಡು ದಿನಗಳಿಂದ ಸ್ವಚ್ಛ ಮಾಡದೆ ಇರುವ ಕಾರಣದಿಂದ ಶೌಚಗೃಹಗಳು ಗಬ್ಬು ನಾರುತ್ತಿವೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗುವಂತಹ ಸ್ಥಿತಿ ಇದೆ. ಶಾಶ್ವತ ಸಿಬ್ಬಂದಿ ಕ್ಲೀನಿಂಗ್ ಸಹವಾಸಕ್ಕೆ ಹೋಗಿಲ್ಲ. ಇದರಿಂದ ರೋಗಿಗಳ ಅವಸ್ಥೆ ಹೇಳತೀರದಾಗಿದೆ.

    ಶ್ವಾನಗಳದ್ದೇ ಕಾರುಬಾರು
    ರೋಗಿಗಳಿಲ್ಲದ ಕೊಠಡಿಗಳಲ್ಲಿ ಬೀದಿ ನಾಯಿಗಳದ್ದೇ ಕಾರುಬಾರು ಎನ್ನುವಂತಾಗಿದೆ. ಆಸ್ಪತ್ರೆಯ ಮೇಲ್ಭಾಗದ ಕೊಠಡಿಗಳು ಶ್ವಾನಗಳ ಗೂಡಾಗಿವೆ. ಭದ್ರತಾ ಸಿಬ್ಬಂದಿಯಿಲ್ಲದ ಕಾರಣ ಆಸ್ಪತ್ರೆಯ ಒಳಗಡೆ ಅಡ್ಡಾಡುವ ನಾಯಿಗಳಿಗೆ ರೋಗಿಗಳು ಬಿಟ್ಟ ಊಟ ಪರಮನ್ನಾವಾಗಿದೆ. ಹೊಟ್ಟೆ ತುಂಬಿದ ಮೇಲೆ ಶ್ವಾನಗಳು ಆಸ್ಪತ್ರೆಯ ಕಾರಿಡಾರ್, ಖಾಲಿ ಕೊಠಡಿಗಳಲ್ಲಿ ಗಡದ್ದಾಗಿ ನಿದ್ರೆಗೆ ಜಾರುತ್ತವೆ. ಡೊಂಕುಬಾಲದ ನಾಯಕರಿಗೆ ಹೇಳುವರ‌್ಯಾರು.. ಕೇಳುವರ‌್ಯಾರು..

    ಆಸ್ಪತ್ರೆಯಲ್ಲಿ ಸ್ವಚ್ಛತಾ ಸಿಬ್ಬಂದಿ ಇಲ್ಲದಿರುವುದು ಸಂಕಷ್ಟ ತಂದಿದೆ. ನಮ್ಮ ಮಾವ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದರೆ, ಇಲ್ಲಿನ ಸ್ಥಿತಿ ವಿಭಿನ್ನವಾಗಿದೆ. ಔಷಧ, ಊಟ ಎಲ್ಲದಕ್ಕೂ ನಾವೇ ಓಡಾಡಬೇಕಿದೆ.
    ರುದ್ರೇಶ್ ಗುಮ್ಮನೂರು, ರೋಗಿಯ ಸಂಬಂಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts